* ತಹಸೀಲ್ದಾರ್‌ ಅರವಿಂದ್‌ ಬಿರಾದಾರ ನೇತೃತ್ವದಲ್ಲಿ ದಾಳಿ* ಕೋವಿಡ್‌ ರೋಗಿಗಳಿಗೆ ಅನಧಿಕೃತವಾಗಿ ಚಿಕಿತ್ಸೆ* ಕೊಪ್ಪಳ ಜಿಲ್ಲೆಯ 28 ಕಡೆ ದಾಳಿ  

ಕೊಪ್ಪಳ(ಮೇ.10): ಅನುಮತಿ ಮತ್ತು ಅರ್ಹತೆ ಇಲ್ಲದವರೆ ಆಸ್ಪತ್ರೆಯನ್ನು ನಡೆಸುತ್ತಿರುವುದು ಹಾಗೂ ಅನುಮತಿ ಪಡೆಯದೆ ಆಸ್ಪತ್ರೆ ನಡೆಸುತ್ತಿರುವ ಮಾಹಿತಿಯನ್ನಾಧರಿಸಿ ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ದಾಳಿ ಮಾಡಲಾಗುತ್ತಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತವಾಗುತ್ತಿರುವುದು ಬೆಳಕಿಗೆ ಬಂದಿದೆ.

ಕೊಪ್ಪಳ ಜಿಲ್ಲಾದ್ಯಂತ ಸುಮಾರು 28 ಕಡೆ ದಾಳಿ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಅಷ್ಟುಕಡೆಗೂ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಬುರ್ಗಾ ತಾಲೂಕಿನಲ್ಲಿ 4, ಗಂಗಾವತಿಯಲ್ಲಿ 15, ಕೊಪ್ಪಳ 5 ಹಾಗೂ ಕುಷ್ಟಗಿ ತಾಲೂಕಿನ 4 ಕಡೆ ಸೇರಿ ಕಳೆದರೆಡು ದಿನಗಳಲ್ಲಿ 28 ಕಡೆ ದಾಳಿ ಮಾಡಲಾಗಿದೆ. ಆಯಾ ತಹಸೀಲ್ದಾರ್‌, ತಾಪಂ, ಇಒ ಹಾಗೂ ತಾಲೂಕು ವೈದ್ಯಾಧಿಕಾರಿಯನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದ್ದು, ನಿತ್ಯವೂ ಬೆಳಗ್ಗೆಯೇ ಕಾರ್ಯಾಚರಣೆ ಖಚಿತ ಮಾಹಿತಿ ಆಧರಿಸಿ ನಡೆಯುತ್ತಿದೆ.

'ಕೊರೋನಾ ನಿಮ್ಮನ್ನು ಕೊಲ್ಲಲ್ಲ, ನಿರ್ಲಕ್ಷ್ಯ ನಿಮ್ಮನ್ನು ಕೊಲ್ಲುತ್ತದೆ'

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಹಲವಾರು ಆಸ್ಪತ್ರೆಗಳಿದ್ದರೂ ಅನುಮತಿಯೇ ಇರಲಿಲ್ಲ. ಇಂಥ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿದ್ದರೆ ಕೆಲವೊಂದು ಆಸ್ಪತ್ರೆಯನ್ನು ಸೀಜ್‌ ಮಾಡಿದ್ದಾರೆ.

ತಹಸೀಲ್ದಾರ್‌ ಅಮರೇಶ ಬಿರಾ​ದಾರ, ತಾಪಂ ಇ​ಒ ಮಲ್ಲಿಕಾರ್ಜುನ, ತಾಲೂಕು ವೈದ್ಯಾಧಿಕಾರಿ ರಾಮಾಂಜನೇಯ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ನೋಂದಣಿ ಕಾಯ್ದೆ ಅಡಿ ನೋಂದಣಿಯನ್ನೇ ಮಾಡಿಕೊಂಡಿಲ್ಲ ಎನ್ನುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ. ಇನ್ನು ಕೆಲವರು ಆಸ್ಪತ್ರೆಯನ್ನು ಪ್ರಾರಂಭಿಸುವುದಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದನ್ನೇ ಇಟ್ಟುಕೊಂಡು, ಪರವಾ​ನ​ಗಿ ಎನ್ನುವಂತೆ ವರ್ತಿಸುತ್ತಿರುವುದು ಕಂಡು ಬಂದಿದೆ. ಅಳವಂಡಿಯ ಡಾ. ಎಸ್‌.ಎಂ. ಮುಲ್ಲಾ ಕ್ಲಿನಿಕ್‌, ಸಿರಿ ಕ್ಲಿನಿಕ್‌ ಹಾಗೂ ವೈಭವ್‌ ಕ್ಲಿನಿಕ್‌ಗೆ ನೋಟಿಸ್‌ ಸಹ ಜಾರಿ ಮಾಡಲಾಗಿದೆ.