ಮದ್ದೂರು (ಡಿ.03):  ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶೇ.60ರಷ್ಟುಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮನ್‌ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ ಅವರಿಗೆ ಟಿಕೆಟ್‌ ಕೊಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಸೂಚ್ಯವಾಗಿ ಹೇಳಿದರು.

ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮನ್‌ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಸಂಘಟನೆ ಮಾತ್ರವಲ್ಲದೇ, ಮುಂದಿನ ಗ್ರಾಪಂ, ಜಿಲ್ಲಾ, ತಾಪಂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಈ ಎಲ್ಲ ಚುನಾವಣೆಯಲ್ಲಿ ಶೇ 60 ರಷ್ಟುಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದಲ್ಲಿ ಅವರನ್ನೆ ಮದ್ದೂರು ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದಾಗಿ ಬೆಂಬಲಿಗರು ಮತ್ತು ಕಾರ್ಯಕರ್ತರ ಒತ್ತಾಯದ ನಡುವೆ ಭರವಸೆ ನೀಡಿದರು.

ಬಿಜೆಪಿ ಸೇರಲು ಮುಂದಾದ ಶಾಸಕ: ವಿಜಯೇಂದ್ರ ಜತೆ ಮೊದಲ ಸುತ್ತಿನ ಮಾತುಕತೆ ಮುಕ್ತಾಯ..!

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನರು ಬಿಜೆಪಿಯನ್ನು ಗೆಲ್ಲಿಸಿರುವುದರಿಂದ ಜಿಲ್ಲೆಯಲ್ಲಿ ಹೊಸ ರೀತಿಯ ರಾಜಕಾರಣ ಶುರುವಾಗಿದೆ. ಹಳೆಯ ಬಂಡೆಗಳನ್ನು ಕುಟ್ಟಿಪುಡಿ ಮಾಡಲಾಗಿದೆ. ಅಭಿವೃದ್ಧಿಯ ಸಾಕ್ಷಿ ಗಲ್ಲುಗಳನ್ನು ನಿರ್ಮಿಸಲು ಬಿಜೆಪಿ ಭದ್ರವಾಗಿದೆ ಎಂದರು.

ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಳಪಾಯ ಹಾಕಲು ಪಣತೊಡಬೇಕು ಅಭಿವೃದ್ಧಿಗೆ ಸದಾ ನಿಮ್ಮ ಜೊತೆ ಇರುತ್ತೆವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಜೆಡಿಎಸ್‌ ಕಾಣೆಯಾಗಿದೆ. ಸಿದ್ದರಾಮಯ್ಯ ಮನೆ ಸೇರಿದ್ದಾರೆ ಕಾಂಗ್ರೆಸ್‌ ಈಗ ನಾವೀಕನಿಲ್ಲದೆ ಹಡಗಿನಂತ ಪರಿಸ್ಥಿತಿಯಾಗಿದೆ. ಇದರಿಂದ ಬಿಜೆಪಿ ಗಾಳಿ ಎಲ್ಲ ಕಡೆ ಆವರಿಸಿದೆ. ಈ ಪಕ್ಷಕ್ಕೆ ಒಂದು ಬದ್ದತೆ ಇರುವುದರಿಂದ ಜನರ ವಿಶ್ವಾಸ ಹೆಚ್ಚಾಗುತ್ತಿದೆ. ಶಿರಾ ಹಾಗೂ ರಾಜ ರಾಜೇಶ್ವರಿ ನಗರದ ಉಪ ಚುನಾವಣೆಯ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಮಾಜಿ ಸಚಿವ ಎ.ಮಂಜು, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್‌, ತಾಲ್ಲೂಕು ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮನ್‌ಮುಲ್ ನಿರ್ದೇಶಕರಾದ ಎಸ್‌.ಪಿ.ಸ್ವಾಮಿ, ರೂಪ ಮುಖಂಡರಾದ ಸಿದ್ದರಾಮಯ್ಯ, ನಾಗಣ್ಣ ಗೌಡ, ಚಂದಗಾಲು ಶಿವಣ್ಣ, ಎಪಿಎಂಸಿ ಅಧ್ಯಕ್ಷ ಜಿ.ಸಿ. ಮಹೇಂದ್ರ ಹಾಗೂ ಪಕ್ಷದ ವಿವಿಧ ಘಟಕಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.