ಬಳ್ಳಾರಿ (ನ.21):  ಉಜ್ಜಯನಿ ಪೀಠ ವಿವಾದಕ್ಕೆ ಸಂಬಂಧಿಸಿದಂತೆ ನಾನೇನೂ ಮಾತನಾಡುವುದಿಲ್ಲ. ಮೌನವೇ ನನ್ನ ಉತ್ತರ. ವಿವಾದದಿಂದ ಬೇಸರಗೊಂಡು ಮೌನ ಪ್ರತಿಭಟನೆ ಮುಂದುವರಿಸಿದ್ದೇನೆ ಎಂದು ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾರ್ಚಾರ್ಯರು ಹೇಳಿದರು.

ನಗರದ ಕಲ್ಯಾಣಸ್ವಾಮಿ ಮಠಕ್ಕೆ ಭೇಟಿ ನೀಡಿದ್ದ ಶ್ರೀಗಳು ಸುದ್ದಿಗಾರರ ಜತೆ ಮಾತನಾಡುತ್ತ, ಉಜ್ಜಯನಿ ಪೀಠದ ವಿವಾದದ ಬಗ್ಗೆ ನಾನು ಮಾತನಾಡದಿರಲು ನಿರ್ಧರಿಸಿದ್ದೇನೆ. ಎಲ್ಲೂ ಪ್ರತಿಕ್ರಿಯಿಸಿಲ್ಲ. ಶ್ರೀಪೀಠದ ಭಕ್ತರೇ ಉತ್ತರ ನೀಡುತ್ತಾರೆ. ಶಿವಾಚಾರ್ಯರೇ ಈ ಬಗ್ಗೆ ಮಾತನಾಡುತ್ತಾರೆ. ನಾನು ಮಾತನಾಡದಿರಲು ನಿರ್ಧರಿಸಿಯೇ ಮೌನ ವಹಿಸಿದ್ದೇನೆ. ಭಕ್ತರಿಂದಾಗಿಯೇ ಮಠ, ಪೀಠಗಳು. ಜನರಿದ್ದರೆ ಗುರುಗಳು. ಹೀಗಾಗಿ ಪೀಠದ ವಿವಾದವನ್ನು ಭಕ್ತರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.

ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ ..

ವಿವಾದಕ್ಕೆ ಸಂಬಂಧಿಸಿದಂತೆ ರಂಭಾಪುರಿ ಪೀಠದ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಬಹುದಿತ್ತಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಪೀಠದ ಶ್ರೀಗಳು ಕರೆದಾಗ ಮಾತ್ರ ಹೋಗುವುದು ನಮ್ಮಲ್ಲಿರುವ ಪದ್ಧತಿ. ಬೇಕಾದಾಗ ಹೋಗಲು ಬರುವುದಿಲ್ಲ. ನಾನು ಮೌನ ಪ್ರತಿಭಟನೆಯಲ್ಲಿದ್ದೇನೆ. ಆ ದೇವರು ದಾರಿ ತೋರಿಸಿದಂತೆ ಹೋಗುತ್ತೇವೆ. ಉಜ್ಜಯನಿ ಪೀಠದ ವಿವಾದದಲ್ಲಿ ಯಾವ ರಾಜಕೀಯ ನಾಯಕರು ಸಹ ಮಧ್ಯಪ್ರವೇಶ ಮಾಡಿಲ್ಲ. ಎಲ್ಲ ರಾಜಕೀಯದವರು ಪೀಠಕ್ಕೆ ಬರುತ್ತಾರೆ. ಆಶೀರ್ವಾದ ಪಡೆದು ಹೋಗುತ್ತಾರೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಶ್ರೀಗಳು ತಿಳಿಸಿದರು.

ಇದೇ ವೇಳೆ ಮಾತನಾಡಿದ ಶ್ರೀಕಲ್ಯಾಣಸ್ವಾಮಿ, ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ. ಅದಕ್ಕೆ ಸಮಯ ಕೂಡಿಬರಬೇಕಷ್ಟೇ. ಧರ್ಮದ ವಿಚಾರದಲ್ಲಿ ಯಾರೂ ಸುಪ್ರೀಂ ಅಲ್ಲ. ಭಕ್ತರು, ಸಮಾಜವೇ ಸುಪ್ರೀಂ. ಈ ಹಿಂದೆ ಸಹ ಈ ರೀತಿಯ ವಿವಾದಗಳು ಬಂದಿದ್ದವು. ಉಜ್ಜಯನಿ ಪೀಠದ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಎಷ್ಟೋ ಪೀಠಗಳ ಸಮಸ್ಯೆಯನ್ನು ಈ ಹಿಂದೆ ಬಗೆಹರಿಸಿದ್ದಾರೆ. ಇದು ಕೂಡ ಸರಿಯಾಗಲಿದೆ ಎಂದರು.