ಉಡುಪಿ :  ಎರಡು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ, ಸುವರ್ಣ ತ್ರಿಭುಜ ಬೋಟು ದುರಂತದ ಸಂತ್ರಸ್ತ ಕುಟುಂಬದ ಚಂದ್ರಶೇಖರ್‌ ಮೊಗೇರ (30) ಗುರುವಾರ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಸಮುದ್ರ ತೀರದಲ್ಲಿ ಮುಳುಗಿದ ಮಲ್ಪೆಯ ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಮೇಶ್‌ ಮೊಗೇರ ಎಂಬವರ ಸಹೋದರ ಚಂದ್ರಶೇಖರ್‌ ಶನಿವಾರ ಇಲಿ ಪಾಷಾಣ ಸೇವಿಸಿದ್ದರು. 

ಈ ವಿಷ ನಿಧಾನವಾಗಿ ಅವರ ದೇಹದ ಮೇಲೆ ಪರಿಣಾಮ ಬೀರಿದ್ದು, ಸೋಮವಾರ ಅಸ್ಪಸ್ಥರಾಗಿ ಮನೆಯವರಿಗೆ ವಿಷಯ ಹೇಳಿದ್ದರು. ಮನೆಯವರು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ 3 ದಿನ ಜೀವನ್ಮರಣ ಹೋರಾಟ ನಡೆಸಿ, ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಡಿ.15ರಂದು ಕಾಣೆಯಾದ ಸುವರ್ಣ ತ್ರಿಭುಜ ಬೋಟಿನಲ್ಲಿ ರಮೇಶ್‌ ಸೇರಿ 7 ಮಂದಿ ಮೀನುಗಾರರು ಕಾಣೆಯಾಗಿದ್ದಾರೆ. ಅಂದಿನಿಂದಲೂ ಚಂದ್ರಶೇಖರ್‌ ಖಿನ್ನತೆಗೆ ಒಳಗಾಗಿದ್ದರು. ಬೋಟು ಸಮುದ್ರದಲ್ಲಿ ಮುಳುಗಿದೆ, ಅದರಲ್ಲಿದ್ದ ಮೀನುಗಾರರು ಮುಳುಗಿರಬಹುದು ಎಂಬ ಮಾಹಿತಿಯಿಂದ ತೀವ್ರ ಅಘಾತಕ್ಕೊಳಗಾದ ಚಂದ್ರಶೇಖರ್‌ ವಿಷ ಸೇವಿಸಿದ್ದರು.