ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಸೆ.21): ಕನ್ನಡ ನಾಡು ನುಡಿ ರಕ್ಷಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯಲ್ಲಿ ನಡೆಯುತ್ತಿರುವ ಕೊಣ್ಣೂರು ನುಡಿ ಸಡಗರದ ಅಕ್ಷರ ಜಾತ್ರೆ 2ನೇ ದಿನವೂ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. 

ಅತ್ತ ಸುವರ್ಣನ್ಯೂಸ್‌ನ ಹಿರಿಯ ಸಂಪಾದಕರ ನೇತೃತ್ವದಲ್ಲಿ ನಡೆದ ಮಾದ್ಯಮಗೋಷ್ಠಿ ಗಮನ ಸೆಳೆದರೆ, ಇತ್ತ ಡ್ರೋಣ್ ಖ್ಯಾತಿಯ ಪ್ರತಾಪ್‌ ಅವರ ಸಲಹೆ ಯುವ ಸಮೂಹಕ್ಕೆ ಪ್ರೇರಣೆಯಾಗಿತ್ತು. ಈ ಮಧ್ಯೆ ದೇಶಿಯ ಸಂಸ್ಕೃತಿ ಸಾರುವ ನೃತ್ಯಗಳು ಗಮನ ಸೆಳೆದವು.

"

 ಕಳೆದ ಎರಡು ದಿನಗಳಿಂದ ನಡೆದ ನುಡಿ ಸಡಗರ ಕಾರ್ಯಕ್ರಮಕ್ಕೆ ಇಂದು ಅಧಿಕೃತ ತೆರೆ ಬಿದ್ದಿದ್ದು, ಬೆಳಿಗ್ಗೆಯಿಂದಲೇ ವಿವಿಧ ಗೋಷ್ಠಿಗಳು ನಡೆದವು.  ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಸಂಪಾದಕರಾದ ಜೋಗಿ ಹಾಗೂ ಸುವರ್ಣನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ. ಶ್ಯಾಮ್ ಸುಂದರ್ ಸಾರಥ್ಯದಲ್ಲಿ ಮಾದ್ಯಮಗೋಷ್ಠಿ ಅತ್ಯಂತ ವಿಭಿನ್ನವಾಗಿ ಮೂಡಿ ಬಂತು.

"

ಪತ್ರಕರ್ತನ ಕಷ್ಟಸುಖ, ನೀವೇಕೆ ಪತ್ರಕರ್ತರಾಗಬೇಕು, ಟಿಜಿಟಲ್ ಪತ್ರಿಕೋದ್ಯಮ ಸೇರಿದಂತೆ ವಿವಿಧ ವಿಷಯಗಳ ಮೇಲೆ ವಿಚಾರಗಳು ಹೊರಹೊಮ್ಮಿದವು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಕೇವಲ ರಾಜಕೀಯ, ಸಾಹಿತ್ಯ ಎನ್ನದೇ ಎಲ್ಲಾ ವಿಭಾಗದಲ್ಲೂ ತಮ್ಮ ತಮ್ಮ ಜಾಣ್ಮೆ ಪ್ರದರ್ಶಿಸುವ ಮೂಲಕ ಒಳ್ಳೆಯ ಪತ್ರಕರ್ತರಾಗಬಹುದು ಎಂದು ಮಾರ್ಗದರ್ಶನ ಮಾಡಿದರು. 

ಅದರಂತೆ ಡಿಜಿಟಲ್ ಮಾಧ್ಯಮದ ಬೆಳವಣಿಗೆ ಹಾಗೂ ಅದರ ಪ್ರಾಮುಖ್ಯತೆ ಕುರಿತು ಸುವರ್ಣನ್ಯೂಸ್.ಕಾಂ ಪ್ರಧಾನ ಸಂಪಾದಕರಾದ ಎಸ್.ಕೆ. ಶ್ಯಾಮ್ ಸುಂದರ್ ವಸ್ತುನಿಷ್ಠ ಮಾಹಿತಿ ನೀಡಿದರು.

"

ಈ ಮಧ್ಯೆ ಕೊಣ್ಣೂರು ನುಡಿ ಸಡಗರ ಹಬ್ಬ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕವಿಗಳ ಸಮ್ಮುಖದಲ್ಲಿ ಕವನ ವಾಚನ ನಡೆಯಿತು. ಇದಾದ ಬಳಿಕ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಯುವ ಕಲಾವಿದರಿಂದ ವಿವಿಧ ದೇಶಿಯ ನೃತ್ಯಗಳಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. 

"

ಒಟ್ಟಿನಲ್ಲಿ ನಾಡ ನುಡಿ ಸಂಸ್ಕೃತಿ ರಕ್ಷಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆಯೋಜನೆಗೊಳ್ಳುತ್ತಿರುವ ಕೊಣ್ಣೂರು ನುಡಿ ಸಡಗರ ಅಕ್ಷರ ಜಾತ್ರೆಗೆ ಇಂದು ಅಧಿಕೃತ ತೆರೆ ಬಿತ್ತು. ಈ ಬಾರಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕೊಣ್ಣೂರು ನುಡಿಸಡಗರ ಗಮನ ಸೆಳೆದಿದ್ದು, ಮುಂಬರುವ ದಿನಗಳಲ್ಲಿ ಈ ಅಕ್ಷರಜಾತ್ರೆ ಇಮ್ಮಡಿಯಾಗಿ ನಾಡ ಜನರಿಗೆ ಇನ್ನಷ್ಟು ಸಂಭ್ರಮ ತರುವಂತಾಗಲಿ ಎಂಬುದು ಎಲ್ಲರ ಆಶಯ.