Asianet Suvarna News Asianet Suvarna News

ಮೈಸೂರು ಭಾಗದ ಅಭಿವೃದ್ಧಿಗೆ ಸುತ್ತೂರು ಮಠದ ಕೊಡುಗೆ ಅಪಾರ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು ಭಾಗದ ಅಭಿವೃದ್ಧಿಗೆ ರಾಜಮನೆತನ ಮತ್ತು ಸುತ್ತೂರು ಮಠದ ಕೊಡುಗೆ ಅಪಾರ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. 

Suttur Mutt contribution to the development of Mysuru is immense Says MLA GT DeveGowda gvd
Author
First Published Sep 7, 2024, 11:33 PM IST | Last Updated Sep 7, 2024, 11:33 PM IST

ಮೈಸೂರು (ಸೆ.07): ಮೈಸೂರು ಭಾಗದ ಅಭಿವೃದ್ಧಿಗೆ ರಾಜಮನೆತನ ಮತ್ತು ಸುತ್ತೂರು ಮಠದ ಕೊಡುಗೆ ಅಪಾರ ಎಂದು ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು. ನಗರದ ಜೆ.ಎಲ್.ಬಿ ರಸ್ತೆಯ ಎಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಶರಣ ಮಂಡಳಿ ಏರ್ಪಡಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವರ ಮಕ್ಕಳೂ ಕೂಡ ಕಲಿಯಬೇಕು. ಎಲ್ಲರಲ್ಲೂ ಸಮಾನತೆ ಮೂಡಿಸಬೇಕು ಎಂಬುದು ಶ್ರೀಗಳ ಆಶಯವಾಗಿತ್ತು. ಜಗತ್ತಿನಲ್ಲಿ ಬಡವ, ಶ್ರೀಮಂತ ಎಂಬುದು ಶಾಶ್ವತವಲ್ಲ. ಆದರೆ ಆದರೆ, ಸಮಾಜಕ್ಕಾಗಿ ಅವರು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿದಿವೆ. 

ಅಂತಹ ಕೆಲಸಗಳನ್ನು ರಾಜೇಂದ್ರ ಶ್ರೀಗಳು ಮಾಡಿರುವುದಾಗಿ ಅವರು ಹೇಳಿದರು.ಮೈಸೂರು ಭಾಗದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆ ಅಪಾರವಾದದ್ದು. ಅಂತೆಯೇ ಸುತ್ತೂರು ಮಠದ ಹಿಂದಿನ ಶ್ರೀಗಳಾದ ರಾಜೇಂದ್ರ ಸ್ವಾಮೀಜಿ ಅವರ ಕೊಡುಗೆ ಮರೆಯುವಂತಿಲ್ಲ. ಶ್ರೀಗಳು ಬಡವರು, ದೀನ ದಲಿತರಿಗೆ ಅನ್ನ, ಆಶ್ರಯ, ಶಿಕ್ಷಣ ನೀಡುವ ಮೂಲಕ ಕ್ರಾಂತಿಯನ್ನೇ ಹುಟ್ಟುಹಾಕಿದ್ದಾಗಿ ಅವರು ತಿಳಿಸಿದರು.ಮೈಸೂರು ಸೇರಿದಂತೆ ಇತರೆಡೆ ಇರುವ ಬಡವರು, ದೀನ ದಲಿತರನ್ನು ಕರೆತಂದು ಅವರಿಗೆ ಆಶ್ರಯ ನೀಡಿ ವಿದ್ಯಾದಾನ ಮಾಡಿದ ಮಹಾನ್ ಚೇತನ. ಮುಂದಿನ ಪೀಳಿಗೆಯು ಶ್ರೀಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.

ಪ್ರಸ್ತುತ ರಾಜಕೀಯ ವಿದ್ಯಮಾನ, ಸಮಾಜದಲ್ಲಿನ ಕೆಡಕುಗಳನ್ನು ನೋಡಿದಾಗ ಶ್ರೀಗಳಂತಹ ಮಹನೀಯರನ್ನು ನೆನೆದು ಅವರ ಆದರ್ಶಗಳನ್ನು ಇತರರಿಗೆ ಮುಟ್ಟಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.ರಾಜೇಂದ್ರ ಶ್ರೀಗಳ ಜೀವನ ಮತ್ತು ಸಾಧನೆ ಕುರಿತು ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆಯಬೇಕು ಎಂಬ ಅಭಿಲಾಷೆ ಹೊಂದಿದ್ದ ರಾಜೇಂದ್ರ ಶ್ರೀಗಳು ವಾರಣಾಸಿಗೆ ತೆರಳಿ ಗೌರಿಶಂಕರ ಸ್ವಾಮಿಗಳನ್ನು ಭೇಟಿಯಾಗುತ್ತಾರೆ. ಬಹುಭಾಷಾ ಪಂಡಿತರಾದ, ವಾರಣಾಸಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಗೌರಿಶಂಕರ ಸ್ವಾಮಿಗಳು ರಾಜೇಂದ್ರ ಶ್ರೀಗಳಿಗೆ ಸಂಸ್ಕೃತ ಅಧ್ಯಯನ ಮಾಡಿ ನೀವೊಬ್ಬರೇ ಪಾಂಡಿತ್ಯ ಪಡೆಯುವ ಬದಲು, ಕರ್ನಾಟಕ ರಾಜ್ಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನಿಮ್ಮ ಆಶೀರ್ವಾದದ ಅಗತ್ಯವಿದೆ ಎಂದು ಅವರಿಗೆ ಮನಪರಿವರ್ತನೆ ಮಾಡುವುದಾಗಿ ತಿಳಿಸಿದರು. 

ಮಳವಳ್ಳಿ ಭಾಗದ ಕೆರೆ-ಕಟ್ಟೆ ತುಂಬಿಸದಿದ್ದರೆ ಹೋರಾಟ: ಮಾಜಿ ಶಾಸಕ ಅನ್ನದಾನಿ ಎಚ್ಚರಿಕೆ

ಮೈಸೂರಿಗೆ ಮರಳಿದ ಶ್ರೀಗಳವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಾರೆ. ಮೈಸೂರು ಶಿಕ್ಷಣ ಕಾಶಿ ಎನಿಸಿಕೊಳ್ಳಲು ರಾಜೇಂದ್ರ ಶ್ರೀಗಳ ಪಾತ್ರ ಅಪಾರ. 1940ರ ದಶಕದಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭಿಸುವ ಮೂಲಕ ಅನ್ನದಾಸೋಹಕ್ಕೆ ಅಡಿ ಇಟ್ಟ ಶ್ರೀಗಳು, ನಂತರ ವಿದ್ಯಾಸಂಸ್ಥೆಗಳನ್ನು ತೆರೆಯುತ್ತಾ ಜ್ಞಾನದಾಸೋಹಿಗಳಾಗುತ್ತಾರೆ. ವಿದ್ಯಾರ್ಥಿ ನಿಲಯಗಳಲ್ಲಿ ಪಡಿ ಪದಾರ್ಥಗಳನ್ನು ಒದಗಿಸಲು ಅವರು ಅನೇಕ ರೀತಿಯ ತ್ಯಾಗ ಮಾಡಿರುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರೊ.ಬಿ. ಜಪ್ರಕಾಶ್ ಗೌಡ, ಡಾ. ಧರಣಿದೇವಿ ಮಾಲಗತ್ತಿ, ಎಂ. ರಾಮಪ್ಪ, ಜಿ.ಟಿ. ಆದಿಶೇಷಗೌಡ, ರವಿಶಾಸ್ತ್ರಿ, ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಮಂಜುನಾಥ್, ಜೈಶಂಕರ್, ಮಂಡಳಿ ಗೌರವಾಧ್ಯಕ್ಷ ಯು.ಎಸ್. ಶೇಖರ್, ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಸಂಚಾಲಕ ಎಂ. ಚಂದ್ರಶೇಖರ್, ಉಪಾಧ್ಯಕ್ಷ ಎ.ಸಿ. ಜಗದೀಶ್ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios