'ಹಾಡುತ್ತಾ, ಕುಣಿಯುತ್ತಾ ಇದ್ದವರು ಕ್ಷಣದಲ್ಲೇ ಹೆಣವಾದ್ರು..'!
ನಾವೆಲ್ಲರೂ ಬಸ್‌ನ ಮಧ್ಯ ಭಾಗದಲ್ಲಿ ನಿಂತು ಕುಣಿಯುತ್ತಾ ಇದ್ದೆವು. ಬಸ್ ಸಾಗುತ್ತಾ ಮುಳ್ಳೂರು ಕ್ರಾಸ್ ಅಗಮಿಸುತ್ತಿದ್ದಂತೆ ರಸ್ತೆಯೂ ಅಂಕುಡೊಂಕಾಗಿತ್ತು. ಹಾವಿನಂತೆ ಓಡಿ ಬಸ್ ಕಲ್ಲಿಗೆ ಗುದ್ದಿತು. ಅಪಘಾತ ನಡೆದು ಸುಮಾರು ಇಪ್ಪತ್ತು ನಿಮಿಷಗಳಾದ್ರು ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನುತ್ತಾರೆ ಉಡುಪಿ ಅಪಘಾತದಲ್ಲಿ ಬದುಕುಳಿದವರು.
ಉಡುಪಿ(ಫೆ.17): ಕಾರ್ಕಳ ತಾಲೂಕಿನ ಮಾಳ ಮುಳ್ಳೂರು ಘಾಟಿಯಲ್ಲಿ ಶನಿವಾರ ಸಂಜೆ ಅಪಘಾತಕ್ಕೀಡಾದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಬದುಕುಳಿದವರು ಘಟನೆ ಕುರಿತು ಪ್ರಶ್ನಿಸಿದಾಗ ಬೆಚ್ಚಿ ಬೀಳುತ್ತಾರೆ.
ಪ್ರಯಾಣಿಕರೆಲ್ಲ ಅಪಘಾತಕ್ಕೂ ಮುನ್ನ ಅಂತ್ಯಾಕ್ಷರಿ, ಡ್ಯಾನ್ಸ್ ಮಾಡುತ್ತ ಜಾಲಿ ಮೂಡ್‌ನಲ್ಲಿದ್ದರು. ಅವರೆಲ್ಲ ಮೈಸೂರಿನಿಂದ ಹೊರಡು ಹೊರನಾಡು, ಕಳಸಕ್ಕೆ ಭೇಟಿ ನೀಡಿ ಉಡುಪಿ, ಮಲ್ಪೆಯತ್ತ ಪ್ರವಾಸ ಹೋಗುತ್ತಿದ್ದರು. ತಿರುವುಮುರುವು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ ಇದ್ದಕ್ಕಿದ್ದಂತೆ ಹಾವಿನಂತೆ ಅತ್ತಿತ್ತ ಚಲಿಸಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದು 9 ಮಂದಿಯ ಪ್ರಾಣವನ್ನೇ ಬಲಿ ಪಡೆಯಿತು. ಬದುಕುಳಿದವರಲ್ಲಿ ತಮ್ಮವರನ್ನು ಕಳೆದುಕೊಂಡ ದುಃಖ ಮಡುಗಟ್ಟಿದೆ.
ಸಮಯದ ಅಭಾವವೂ ಇತ್ತು:
ಒಂದು ಕಡೆ ಬಸ್ ಪದೇಪದೇ ಕೆಟ್ಟು ಹೋಗಿದ್ದರಿಂದ ಸಮಯದ ಅಭಾವ ಇತ್ತು. ಆದ್ದರಿಂದ ಚಾಲಕ ಸ್ವಲ್ಪ ವೇಗವಾಗಿಯೇ ಬಸ್ ಚಲಾಯಿಸುತ್ತಿದ್ದ. ನಾವೆಲ್ಲರೂ ಬಸ್‌ನ ಮಧ್ಯ ಭಾಗದಲ್ಲಿ ನಿಂತು ಕುಣಿಯುತ್ತಾ ಇದ್ದೆವು. ಬಸ್ ಸಾಗುತ್ತಾ ಮುಳ್ಳೂರು ಕ್ರಾಸ್ ಅಗಮಿಸುತ್ತಿದ್ದಂತೆ ರಸ್ತೆಯೂ ಅಂಕುಡೊಂಕಾಗಿತ್ತು. ಚಾಲಕನಿಗೆ ಮೊದಲ ತಿರುವಿನಲ್ಲೇ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣ ತಪ್ಪಿತ್ತು. ಬಸ್‌ನ ಹಿಂಭಾಗದಲ್ಲಿ ಕುಳಿತವರು ಲಗೇಜ್ ಹೊರಗಡೆ ಬಿತ್ತು, ಬಸ್ ನಿಲ್ಲಿಸುವಂತೆ ಕೂಗಾಡಿದರು.
ಇದನ್ನು ಕೇಳಿದ ಚಾಲಕ ಬಸ್ ಚಲಾಯಿಸಿಕೊಂಡೇ ಹಿಂದಕ್ಕೆ ತಿರುಗು ನೋಡಿದ್ದು, ಬಸ್ ಎಲ್ಲೆಂದರಲ್ಲಿ ಚಲಿಸಿ ಎದುರಿನ ಬಂಡೆ ಕಲ್ಲಿನ ಗೋಡೆಗೆ ಬಡಿಯಿತು. ಏನಾಯಿತೆಂದು ಗೊತ್ತಾಗುವಷ್ಟರಲ್ಲಿ ನಾವೆಲ್ಲ ಪ್ರಜ್ಞೆ ತಪ್ಪಿ ಬಿದ್ದಿದ್ದೆವು ಎನ್ನುತ್ತಾರೆ ಗಾಯಾಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಗಾಯಳುಗಳಿಗೆ ಕುಡಿಯರು ನೀರಿನ ಬಾಟಲ್, ಊಟ, ಹೊಸ ಬಟ್ಟೆಗಳನ್ನು ನೀಡಿ ಮಾನವೀಯತೆಯ ಮರೆದಿದ್ದಾರೆ ಎಂದು ಕಾರ್ಕಳದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಹಾಯಕ್ಕೆ ಕರೆದರೂ ಬಾರದ ಪ್ರವಾಸಿಗರು..!:
ಅಪಘಾತ ನಡೆದು ಸುಮಾರು ಇಪ್ಪತ್ತು ನಿಮಿಷಗಳಾದ್ರು ಯಾರೂ ಸಹಾಯಕ್ಕೆ ಆಗಮಿಸಿಲ್ಲ. ಅದೇ ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಸವಾರರು ಕಂಡು ಕಾಣದಂತೆ ಪರಾರಿಯಾಗುತ್ತಿದ್ದರು. ಪ್ರಮುಖವಾಗಿ ರಾಷ್ಟ್ರೀಯ ಉದ್ಯಾನವನವಾಗಿರುವುದರಿಂದ ಮೊಬೈಲ್ ಟವರ್‌ಗಳು ಇಲ್ಲದಿರುವುದಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯ ನಿವಾಸಿಗಳಿಗೆ ಅಪಘಾತ ಸುದ್ದಿ ತಿಳದ ತಕ್ಷಣ ಎಲ್ಲರೂ ಅಗಮಿಸಿ ಗಾಯಾಳುಗಳನ್ನು ಬಸ್ಸುನಿಂದ ಹೊರಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಗಾಯಾಳು ಅಂಬಿಕಾ ತಿಳಿಸಿದ್ದಾರೆ.