Asianet Suvarna News Asianet Suvarna News

ತಾಳಗುಪ್ಪ- ಶಿರಸಿ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣ, ಮಲೆನಾಡು- ಉತ್ತರ ಕರ್ನಾಟಕಕ್ಕೆ ಸಂಪರ್ಕ ಸುಲಲಿತ

ಮಲೆನಾಡು- ಉತ್ತರ ಕರ್ನಾಟಕ ಸಂಪರ್ಕಿಸುವ ಮಹತ್ವದ ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ನೂತನ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದೆ.

Survey of Hubballi Sirsi Talaguppa railway project line completed gow
Author
First Published Jan 1, 2024, 11:11 AM IST

ನಂದ ಗೊಂಬಿ 

 ಹುಬ್ಬಳ್ಳಿ (ಡಿ.1): ಮಲೆನಾಡು- ಉತ್ತರ ಕರ್ನಾಟಕ ಸಂಪರ್ಕಿಸುವ ಮಹತ್ವದ ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ನೂತನ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ (ಪಿಇಟಿ) ಸಮೀಕ್ಷೆ ಪೂರ್ಣಗೊಂಡಿದೆ. ಈ ಮೂಲಕ ಬಹುವರ್ಷಗಳ, ಬಹುನಿರೀಕ್ಷೆಯ ರೈಲು ಮಾರ್ಗದ ಕನಸು ನನಸಾಗುವತ್ತ ಮೊದಲ ಹೆಜ್ಜೆ ಇಟ್ಟಂತಾಗಿದೆ.

ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ದಶಕಗಳಿಂದಲೇ ಬೇಡಿಕೆ ಇತ್ತು. ಇದಕ್ಕಾಗಿ ಹೋರಾಟಗಳು ನಡೆದಿರುವುದುಂಟು. ಈ ಭಾಗದ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಹೆಚ್ಚಿನ ಮುತುವರ್ಜಿ ವಹಿಸಿ ಈ ಮಾರ್ಗಕ್ಕೆ 2019ರಲ್ಲಿ ಪಿಇಟಿ (ಪ್ರಾಥಮಿಕ ಎಂಜಿನಿಯರಿಂಗ್‌ ಆ್ಯಂಡ್‌ ಟ್ರಾಫಿಕ್‌) ಸಮೀಕ್ಷೆಗೆ ಹಸಿರು ನಿಶಾನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. 2023ರ ಏಪ್ರಿಲ್‌ನಲ್ಲೇ ಸಮೀಕ್ಷೆಯನ್ನು ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ರೈಲ್ವೆ ಅಭಿವೃದ್ಧಿ ಮಂಡಳಿ ಎದುರಿಗಿದೆ.

 ಸಮೀಕ್ಷೆಯಲ್ಲಿ ಏನಿದೆ? 

ಈ ಸಮೀಕ್ಷೆ ಪ್ರಕಾರ 170.92 ಕಿಮೀ ಅಂತರ ಪ್ರಯಾಣ ಇದು. ಉತ್ತರ ಕನ್ನಡ ಜಿಲ್ಲೆಯಲ್ಲಿ 111.60 ಕಿಮೀ, ಧಾರವಾಡ- 40.42, ಶಿವಮೊಗ್ಗ- 14.40 ಹಾಗೂ ಹಾವೇರಿ- 4.50 ಕಿಮೀ ರೈಲು ಮಾರ್ಗ ಬರಲಿದೆ. ₹3115 ಕೋಟಿ ವೆಚ್ಚ ತಗುಲಬಹುದು. 512 ಹೆಕ್ಟೇರ್‌ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ಕಡೆ ಸುರಂಗ ಮಾರ್ಗ ನಿರ್ಮಿಸಬೇಕಾಗುತ್ತದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

 ಮುಂದೇನು? 

ಸದ್ಯ ಪಿಇಟಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೈಲ್ವೆ ಸಚಿವಾಲಯದ ಎದುರಿಗೆ ಇದೆ. ಸಮೀಕ್ಷೆ ವರದಿ ಅಧ್ಯಯನ ನಡೆಸಿದ ಬಳಿಕ ಎಫ್‌ಎಲ್‌ಎಸ್‌ (ಫೈನಲ್‌ ಲೋಕೇಶನ್‌ ಸರ್ವೇ) ಅಂತಿಮ ಜಾಗ ಗುರುತಿಸುವಿಕೆಯ ಸಮೀಕ್ಷೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಬೇಕಿದೆ. ಈ ಸಮೀಕ್ಷೆಯಲ್ಲಿ ಯೋಜನೆಯ ನಿಖರ ವೆಚ್ಚ, ಸಂಚಾರ ದಟ್ಟನೆ ಸೇರಿದಂತೆ ಮತ್ತಿತರರ ವಿಷಯಗಳ ಕುರಿತು ಸಮೀಕ್ಷೆ ನಡೆಯಲಿದೆ. ಆ ಸಮೀಕ್ಷೆ ಮುಗಿದ ಬಳಿಕ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸುತ್ತವೆ.

 ಮಾರ್ಗ ಹೇಗೆ? 

ತಾಳಗುಪ್ಪ- ಸಿದ್ದಾಪುರ- ಶಿರಸಿ, ಮುಂಡಗೋಡ, ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಲಿದೆ. ಇವುಗಳ ಮಧ್ಯೆ ಸರಿಸುಮಾರು 16 ನಿಲ್ದಾಣಗಳು ಬರಲಿವೆ ಎಂದು ಪ್ರಾಥಮಿಕ ವರದಿ ತಿಳಿಸುತ್ತದೆ. ಈ ಮಾರ್ಗ ನಿರ್ಮಾಣವಾದರೆ ಅತ್ತ ಶಿವಮೊಗ್ಗದಿಂದ ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಮಧ್ಯೆ ಸಂಪರ್ಕ ಸಾಧಿಸಿದಂತಾಗುತ್ತದೆ. ಮಲೆನಾಡು- ಬಯಲಸೀಮೆಯ ಮಧ್ಯೆ ಸಂಪರ್ಕ ಕೊಂಡಿ ಇದಾಗಲಿದೆ. ಇದರಿಂದ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ. ಹಾಗೆ ನೋಡಿದರೆ ಹಿಂದೆ ಒಂದು ಬಾರಿ ಈ ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುದಾನ ಮಂಜೂರಾಗಿತ್ತು. ಬಳಿಕ ಸಮೀಕ್ಷೆ ನಡೆಯದೇ ಅದು ವಾಪಸ್ ಹೋಗಿತ್ತು. ಬಳಿಕ ಜನಪ್ರತಿನಿಧಿಗಳ ಒತ್ತಾಯದ ಕಾರಣ ಹೊಸದಾಗಿ ಸಮೀಕ್ಷೆ ನಡೆದಿದೆ.

ಒಟ್ಟಿನಲ್ಲಿ ಬಹುವರ್ಷದಿಂದ ನನೆಗುದಿಗೆ ಬಿದ್ದಿದ್ದ ತಾಳಗುಪ್ಪ- ಶಿರಸಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ನಡೆದಿರುವ ಪ್ರಾಥಮಿಕ ಸಮೀಕ್ಷೆ ಜನರಲ್ಲಿ ಸಂತಸವನ್ನುಂಟು ಮಾಡಿದಂತಾಗಿದ್ದು, ಆದಷ್ಟು ಬೇಗ ಎಫ್‌ಎಲ್‌ಎಸ್‌ ಸಮೀಕ್ಷೆಗೂ ಒಪ್ಪಿಗೆ ನೀಡಬೇಕೆಂದು ಬೇಡಿಕೆ ಜನರದ್ದು.

ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ನೂತನ ಮಾರ್ಗದ ಪಿಇಟಿ ಸಮೀಕ್ಷೆ ಪೂರ್ಣಗೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅಲ್ಲಿಂದ ಎಫ್‌ಎಲ್‌ಎಸ್‌ ಸಮೀಕ್ಷೆಗೆ ಒಪ್ಪಿಗೆ ಬರಬೇಕು. ಆ ಸಮೀಕ್ಷೆ ಮುಗಿದ ಬಳಿಕ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ.

 ಡಾ. ಮಂಜುನಾಥ ಕನಮಾಡಿ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈರುತ್ಯ ರೈಲ್ವೆ ವಲಯ 

 

Follow Us:
Download App:
  • android
  • ios