ಭಿಕ್ಷುಕರಿಗೆ ತಂಗುದಾಣ ವ್ಯವಸ್ಥೆ, ಮಕ್ಕಳನ್ನು ಶಾಲೆಗೆ ಕಳುಹಿಸಿ| ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ| ಯಾವ ಕಾರಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ರಾಜ್ಯದವರು ಹಾಗೂ ಹೊರ ರಾಜ್ಯದಿಂದ ಬಂದವರೆಷ್ಟು ಎಂಬಿತ್ಯಾದಿ ಸಮರ್ಪಕ ಮಾಹಿತಿಯನ್ನು ಛಾಯಾಚಿತ್ರದ ಸಮೇತ ಸಮೀಕ್ಷೆ|
ಬೆಂಗಳೂರು(ಡಿ.19): ಪಾಲಿಕೆ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುವ ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ತ್ವರಿತವಾಗಿ ಪಟ್ಟಿ ಸಿದ್ಧಪಡಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ‘ಭಿಕ್ಷೆ ಬೇಡುವ ಮತ್ತು ತಿರುಗು ವ್ಯಾಪಾರಿ ಮಕ್ಕಳ ಗುರುತಿಸುವಿಕೆ ಸಮೀಕ್ಷೆ’ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಆಯಾ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾತ್ರಿ 8ರಿಂದ ಮಧ್ಯರಾತ್ರಿ 12ರವರೆಗೆ ತಪಾಸಣೆ ನಡೆಸಿ ರಸ್ತೆ, ಪಾದಚಾರಿ ಮಾರ್ಗ, ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ, ತಂಗುದಾಣ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಲಗಿರುವವರನ್ನು ಗುರುತಿಸಿ ಪಟ್ಟಿಮಾಡಬೇಕು ಎಂದು ಸೂಚಿಸಿದರು.
ಭಿಕ್ಷುಕ ಮತ್ತು ಆಟಿಕೆಗಳನ್ನು ಮಾರಾಟ ಮಾಡುವ ಮಕ್ಕಳು ಹಾಗೂ ಕೊಳಗೇರಿಗಳಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ಇರುವ ಮಕ್ಕಳನ್ನು ಗುರುತಿಸಬೇಕು. ಶಾಲೆ ಬಿಟ್ಟಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಕೊಳಗೇರಿಗಳಲ್ಲಿ ಎಷ್ಟುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಎಷ್ಟುಮಕ್ಕಳು ಮನೆಯಲ್ಲೇ ಇದ್ದಾರೆ ಎಂಬ ನಿಖರ ಮಾಹಿತಿ ಸಂಗ್ರಹಿಸಬೇಕು. ಅಂತಹ ಜಾಗಗಳಿಗೆ ಶಿಕ್ಷಕರನ್ನು ಕಳುಹಿಸಿ ಆ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾತ್ರೋ ರಾತ್ರಿ ಲಕ್ಷಾಧಿಪತಿಗಳಾದ ಭಿಕ್ಷುಕರು..!
ನಗರದ ಪಾದಚಾರಿ ಮಾರ್ಗ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ತಂಗುದಾಣ, ಸಬ್‌ವೇ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಲಗುವ ಮಕ್ಕಳು, ವಯಸ್ಕರು ಎಲ್ಲಿಂದ ಬಂದಿದ್ದಾರೆ. ಯಾವ ಕಾರಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ರಾಜ್ಯದವರು ಹಾಗೂ ಹೊರ ರಾಜ್ಯದಿಂದ ಬಂದವರೆಷ್ಟು ಎಂಬಿತ್ಯಾದಿ ಸಮರ್ಪಕ ಮಾಹಿತಿಯನ್ನು ಛಾಯಾಚಿತ್ರದ ಸಮೇತ ಸಮೀಕ್ಷೆ ನಡೆಸಿ ವರದಿ ಮಾಡಬೇಕು. ಜತೆಗೆ ರಾತ್ರಿ ವೇಳೆ ಆಶ್ರಯ ಕಲ್ಪಿಸಲು ಇರುವ ಪಾಲಿಕೆಯ ರಾತ್ರಿ ತಂಗುದಾಣಗಳಲ್ಲಿ ಮಲಗಲು ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ವಿಶೇಷ ಆಯುಕ್ತ (ಕಲ್ಯಾಣ) ರವೀಂದ್ರ, ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್, ವಲಯ ಜಂಟಿ ಆಯುಕ್ತೆ ಪಲ್ಲವಿ, ರಾಮಕೃಷ್ಣ, ಅಶೋಕ್ ವೆಂಕಟಾಚಲಪತಿ, ನರಸಿಂಹಮೂರ್ತಿ, ನಾಗರಾಜ್, ಶಿವಸ್ವಾಮಿ, ಸಹಾಯಕ ಆಯುಕ್ತರು (ಶಿಕ್ಷಣ) ನಾಗೇಂದ್ರ ನಾಯ್ಕ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಪುಷ್ಪಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 19, 2020, 8:06 AM IST