ಕಲಬುರಗಿ: ಭೂಕಂಪದ ಊರುಗಳಲ್ಲಿ ಹೈದರಾಬಾದ್ ತಂಡದಿಂದ ಸರ್ವೆ
* ಹಾನಿಗೆ ಒಳಗಾದ ಮನೆಗಳ ದುರಸ್ತಿಗೆ ಪ್ರತ್ಯೇಕ ತಂಡ
* 5 ಸಾವಿರ ಜನರಿಗೆ ಜಿಲ್ಲಾಡಳಿತ ಆಶ್ರಯ
* ಎನ್‌ಜಿಆರ್‌ಐ ವಿಜ್ಞಾನಿಗಳ ತಂಡ ಭೇಟಿ
ಕಲಬುರಗಿ(ಅ.17): ಭೂಕಂಪನದಿಂದ(Earthquake) ಕಂಗೆಟ್ಟಿರುವ ಚಿಂಚೋಳಿ(Chincholi) ಮತ್ತು ಕಾಳಗಿ(Kalagi) ತಾಲೂಕಿಗೆ ಭಾನುವಾರ ಹೈದರಾಬಾದ್‌ನಿಂದ(Hyderabad) ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (NJRI) ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾನಾ ತಿಳಿಸಿದ್ದಾರೆ.
ಶನಿವಾರ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ- ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಭೂಕಂಪನ ಪೀಡಿತ ಪ್ರದೇಶಗಳಿಗೆ ತಂಡವು ಭೇಟಿ ನೀಡಿ ಭೌಗೋಳಿಕ ಸಮೀಕ್ಷೆ(Geographical Survey) ಮಾಡಲಿದೆ ಎಂದರು.
ಪದೇ ಪದೇ ಭೂಕಂಪ: ಅಧ್ಯಯನಕ್ಕೆ ನ.8 ಕ್ಕೆ ಗಡಿಕೇಶ್ವರಕ್ಕೆ ಕೇಂದ್ರ ತಂಡ
ರಿಕ್ಟರ್ ಮಾಪನದ(Richter Magnitude) ಪ್ರಕಾರ ಜಿಲ್ಲೆಯಲ್ಲಿ 1ರಿಂದ 3ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಗಡಿಕೇಶ್ವರದಲ್ಲಿ 5 ಮನೆ ಭಾಗಶಃ ಜಖಂಗೊಂಡಿದ್ದನ್ನು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಕಾಳಗಿ ತಾಲೂಕಿನ 5 ಕಡೆ ಕಾಳಜಿ ಕೇಂದ್ರ(Care center) ತೆರೆಯಲಾಗಿದ್ದು, ಸುಮಾರು 5 ಸಾವಿರ ಜನರಿಗೆ ಊಟ ನೀಡಲಾಗುತ್ತಿದೆ. ನಿರಾಶ್ರಿತ ಕೇಂದ್ರದಲ್ಲೇ(Refugee Center) ವಾಸಿಸುವವರಿಗೆ ಬೆಡ್‌ಶೀಟ್ ಸೇರಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದರು.
ಹೊಸಳ್ಳಿ (ಎಚ್) ಸೇರಿ ಭೂಕಂಪನ ವರದಿಯಾಗಿರುವ ಕಾಳಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಲೊಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಂದ(Engineers)ಕೂಡಿರುವ 6 ತಂಡ ರಚಿಸಲಾಗಿದ್ದು, ಈ ತಂಡಗಳು ಗ್ರಾಮದ ಪ್ರತಿ ಮನೆಗಳ ಸರ್ವೆ(Survey) ಕೈಗೊಂಡು ಮನೆ ಮಾಲೀಕರಿಗೆ ಅಗತ್ಯವಿದ್ದರೆ ಸಣ್ಣ-ಪುಟ್ಟ ದುರಸ್ತಿ, ಮಾರ್ಪಾಡು ಮಾಡಲು ಸಲಹೆ ನೀಡುತ್ತಿವೆ ಎಂದು ಮಾಹಿತಿ ನೀಡಿದರು.