ಎಲ್‌ಇಡಿ ಬೀದಿದೀಪ ಅಳವಡಿಕೆಗೆ ಸಮೀಕ್ಷೆ ಪ್ರಾರಂಭ
- ಎಲ್‌ಇಡಿ ಬೀದಿದೀಪ ಅಳವಡಿಕೆಗೆ ಸಮೀಕ್ಷೆ ಪ್ರಾರಂಭ
- ಸೆ. 10ರೊಳಗೆ ಪಾಲಿಕೆ ಕೈ ಸೇರಲಿದೆ ವರದಿ
- ಮಹಾನಗರದ ಎಲ್ಲ ಬೀದಿದೀಪಗಳ ಬಲ್‌್ಬ ಬದಲಿಗೆ ಹೆಜ್ಜೆ
ಮಯೂರ ಹೆಗಡೆ
ಹುಬ್ಬಳ್ಳಿ (ಆ.24) :ಹುಬ್ಬಳ್ಳಿ -ಧಾರವಾಡ ಮಹಾನಗರದಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಕೆಗಾಗಿ ಪಾಲಿಕೆಯಿಂದ ಸಮೀಕ್ಷೆ ಆರಂಭವಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕೈ ಸೇರಲಿರುವ ಸಮೀಕ್ಷೆ ವರದಿ ಆಧರಿಸಿ ವಿದ್ಯುತ್‌ದೀಪ ಅಳವಡಿಕೆಗೆ ಮುಂದಾಗಲು ನಿರ್ಧರಿಸಲಾಗಿದೆ. ಸ್ಮಾರ್ಚ್‌ಸಿಟಿ ಯೋಜನೆಯಡಿ 2018ರಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಮೂರ್ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಆಸಕ್ತಿ ತೋರಲಿಲ್ಲ. ಇದೀಗ ಯೋಜನೆಯನ್ನು ಸ್ಮಾರ್ಚ್‌ಸಿಟಿ ಪಾಲಿಕೆಗೆ ಹಸ್ತಾಂತರಿಸಿದೆ. ಎಲ್‌ಇಡಿ ಅಳವಡಿಕೆ ಅನುಷ್ಠಾನದ ಸಂಪೂರ್ಣ ಹೊಣೆ ಹೊತ್ತಿರುವ ಪಾಲಿಕೆಯು ಆರಂಭಿಕ ಹಂತವಾಗಿ ಸರ್ವೇ ನಡೆಸುತ್ತಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಎಲ್‌ಇಡಿ ಬೀದಿ ದೀಪ ಬೆಳಗೊದು ಯಾವಾಗ?
ಬೆಂಗಳೂರು ಮೂಲದ ಐಡೆಕ್ ಕಂಪನಿ ಸರ್ವೇ ಹೊಣೆ: 36 ಲಕ್ಷ ಮೊತ್ತವನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ. ಆಗಸ್ಟ್ ಆರಂಭದಿಂದಲೆ ಈ ಸಮೀಕ್ಷೆ ಆರಂಭವಾಗಬೇಕಿತ್ತು. ಆದರೆ ಮಳೆ ಕಾರಣದಿಂದ ಸೋಮವಾರದಿಂದ (ಆ.22) ಸಮೀಕ್ಷೆ ಶುರುವಾಗಿದೆ. ಪಾಲಿಕೆಯ ಎಲ್ಲ 12 ವಲಯದ 82 ವಾರ್ಡ್‌ಗಳಲ್ಲಿ ವಿದ್ಯುತ್‌ದೀಪ ಎಷ್ಟಿದೆ? ಸ್ಥಿತಿಗತಿ ಹೇಗಿದೆ? ಪುನಃ ಎಲ್ಲೆಲ್ಲಿ ವಿದ್ಯುತ್ ದೀಪದ ಅಗತ್ಯವಿದೆ ಎಂಬುದರ ಕುರಿತು ಸವಿಸ್ತಾರ ವರದಿಯನ್ನು ಈ ಕಂಪನಿ ಪಾಲಿಕೆಗೆ ನೀಡಲಿದೆ.
ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ‘ಮಹಾನಗರದಲ್ಲಿ 2016ರಲ್ಲಿ ಕೊನೆಯದಾಗಿ ಬೀದಿದೀಪಗಳ ಸರ್ವೇ ಮಾಡಲಾಗಿತ್ತು. 6 ವರ್ಷದಲ್ಲಿ ಸಾಕಷ್ಟುಬದಲಾವಣೆ ಆದ ಕಾರಣ ಪುನಃ ಸರ್ವೇ ಮಾಡಿ ವರದಿ ಪಡೆಯುತ್ತಿದ್ದೇವೆ. ಟ್ಯೂಬ್‌ಲೈಟ್, ಸೋಡಿಯಂ ಲೈಟ್‌ಗಳನ್ನು ಪೂರ್ಣವಾಗಿ ಬದಲಿಸುತ್ತೇವೆ’ ಎಂದರು.
‘ಎಲ್‌ಇಡಿ ಬಲ್‌್ಬ ಅಳವಡಿಕೆಗೆ ಶೀಘ್ರ ಟೆಂಡರ್ ಕರೆಯಬೇಕಿದ್ದು, ಅದಕ್ಕಾಗಿ ಹಗಲು ರಾತ್ರಿ ಸರ್ವೇ ಮಾಡುವಂತೆ ಗುತ್ತಿಗೆ ಸಂಸ್ಥೆಗೆ ತಿಳಿಸಿದ್ದೇವೆ. ಐಡೆಕ್ ಸಂಸ್ಥೆ ಸೆ. 10ರೊಳಗೆ ವರದಿ ನೀಡುವುದಾಗಿ ತಿಳಿಸಿದೆ. ಪಿಪಿಪಿ ಮಾದರಿಯಲ್ಲಿ ಟೆಂಡರ್ ಕರೆದು ಯೋಜನೆ ಅನುಷ್ಠಾನ ಮಾಡಲಾಗುವುದು. ಯೋಜನೆ ಆರಂಭಿಕ ಹಂತದಲ್ಲಿ ಬಿಡ್‌ದಾರರಿಗೆ ಪಾಲಿಕೆ ಹಣ ನೀಡಲ್ಲ. ಸಂಪೂರ್ಣ ಎಲ್‌ಇಡಿ ಅಳವಡಿಕೆಯಿಂದ ಪಾಲಿಕೆಗೆ ವಿದ್ಯುತ್ ಬಿಲ್ ಹೊರೆ ಶೇ. 50ರಿಂದ ಶೇ. 55ರ ವರೆಗೆ ತಗ್ಗಲಿದೆ.’ ಎಂದು ಕಮಿಷನರ್ ತಿಳಿಸಿದರು.
‘ಹಿಂದಿನ ಅಂಕಿ ಅಂಶಗಳ ಪ್ರಕಾರ ಮಹಾನಗರದಲ್ಲಿ 63 ಸಾವಿರ ಬೀದಿ ದೀಪಗಳಿವೆ. ಇದೀಗ ಹೊಸ ಲೇಔಟ್, ಸ್ಲಂ ಅಭಿವೃದ್ಧಿ ಸೇರಿ ಹೊಸದಾಗಿ ಸಾವಿರಾರು ಬೀದಿದೀಪ ಅಳವಡಿಕೆ ಆಗಿದೆ. ನಮ್ಮ ಪ್ರಕಾರ ಒಟ್ಟಾರೆ 73ರಿಂದ 75 ಸಾವಿರ ವಿದ್ಯುತ್ ದೀಪಗಳಿವೆ. ಸಂಪೂರ್ಣ ಎಲ್‌ಇಡಿ ಅಳವಡಿಕೆಗೆ . 80ರಿಂದ . 100ಕೋಟಿ ವೆಚ್ಚ ಆಗಬಹುದು. ಪಾಲಿಕೆ ವಾರ್ಷಿಕ ನಿರ್ವಹಣೆ, ವಿದ್ಯುತ್ ಬಿಲ್ ಸೇರಿ . 21ಕೋಟಿ ಹೆಸ್ಕಾಂಗೆ ಭರಿಸುತ್ತದೆ. ಮುಂದಿನ ದಿನಗಳಲ್ಲಿ ಈ ಮೊತ್ತ ಗಣನೀಯವಾಗಿ ಕಡಿಮೆ ಆಗುತ್ತದೆ’ ಎಂದು ಪಾಲಿಕೆಯ ವಿದ್ಯುತ್ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎನ್. ಗಣಾಚಾರಿ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಲ್‌ಇಡಿಯನ್ನು ಕಂಟ್ರೋಲ್ ಕಮಾಂಡ್ ಆ್ಯಂಡ್ ಮಾನಿಟರಿಂಗ್ ವ್ಯವಸ್ಥೆ ಮೂಲಕ ನಿರ್ವಹಿಸುತ್ತೇವೆ. ಇದರಿಂದಲೂ ವ್ಯರ್ಥವಾಗಿ ಬೀದಿದೀಪ ಉರಿಯುವುದು ತಪ್ಪಲಿದೆ. ಒಟ್ಟಾರೆ ಉಳಿತಾಯವಾಗುವ ಮೊತ್ತದಲ್ಲಿ ಎಲ್‌ಇಡಿ ಅಳವಡಿಸಿದ ಕಂಪನಿಗೆ ಇಎಂಐ ಪ್ರಕಾರ ಪಾವತಿಸುತ್ತೇವೆ. 7 ವರ್ಷ ಎಲ್‌ಇಡಿ ವಿದ್ಯುದೀಪ ನಿರ್ವಹಣೆ ಮಾಡುವ ಕಂಪನಿ ಬಳಿಕ ಪಾಲಿಕೆಗೆ ಹಸ್ತಾಂತರಿಸಲಿದೆ’ ಎಂದು ಗಣಾಚಾರಿ ತಿಳಿಸಿದರು.
ಸರ್ವೇ ವರದಿ ಸೆ. 5ರಿಂದ 10ರೊಳಗೆ ಸಿಗಲಿದೆ. ಯೋಜನೆ ಪ್ರಕಾರ ಸಾಗಿದರೆ 6ರಿಂದ 8ತಿಂಗಳಲ್ಲಿ ಮಹಾನಗರದ ಎಲ್ಲ ಬೀದಿದೀಪಗಳು ಎಲ್‌ಇಡಿ ಬಲ್‌್ಬಗೆ ಪರಿವರ್ತನೆ ಆಗಲಿದೆ. ಪಾಲಿಕೆಗೆ ವಿದ್ಯುತ್ ಬಿಲ್ ಉಳಿಯಲಿದೆ.
ಡಾ. ಬಿ. ಗೋಪಾಲಕೃಷ್ಣ ಪಾಲಿಕೆ ಆಯುಕ್ತ