ಮಂಗಳೂರು (ಅ.30): ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನಿಗೆ ಎನ್ಕೌಂಟರ್ ಭೀತಿ ಎದುರಾಗಿದ್ದು ಈ ಸಂಬಂಧ ನ್ಯಾಯಾಧೀಶರಿಗೆ ಪತ್ರ ಒಂದನ್ನು ಬರೆಯಲಾಗಿದೆ. 

ಮಂಗಳೂರಿನ ರೌಡಿಶೀಟರ್ ಆಕಾಶ ಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ ಸದ್ಯ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಮರ್ಡರ್ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. 

ಬಾಡಿವಾರಂಟ್ ಪಡೆದು ಶರಣ್‌ನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬರಲಿದ್ದು,  ವಿಚಾರಣೆಗೆ ಕರೆದುಕೊಂಡು ಬಂದು ಎನ್ಕೌಂಟರ್ ಮಾಡುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ಆಕಾಶಭವನ ಶರಣ್  ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಜೀವಕ್ಕೆ ಅಪಾಯ ಇದೆ. ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾನೆ.  ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ.