ಬೀದರ್(ಡಿ.21): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ ಬಳಿಕ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಆರಂಭವಾಗಿದೆ. ಹೌದು, ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಂ. ಬಿ.ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಅಭಿಯಾನ ಆರಂಭವಾಗಿದೆ.

ಬೀದರ್‌ನಲ್ಲಿ ಎಂ.ಬಿ.ಪಾಟೀಲ್ ಅಭಿಮಾನಿಗಳ ಬಳಗ ಕೆಪಿಸಿಸಿ ಪಟ್ಟ ಕೊಡಲು ಅಭಿಯಾನ ಆರಂಭಿಸಿದೆ. ಲಿಂಗಾಯತ ಮುಖಂಡರಿಗೆ ಅವಕಾಶ ನೀಡುವಂತೆ ಅಭಿಯಾನದಲ್ಲಿ ವಿನಂತಿ ಮಾಡಲಾಗಿದೆ.  ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ಕೆಪಿಸಿಸಿ‌ ಅದ್ಯಕ್ಷ ಸ್ಥಾನಕ್ಕೆ ಒಕ್ಕಲಿಗ, ಲಿಂಗಾಯತರ ನಡುವೆ ಪೈಪೋಟಿ ನಡೆಯುತ್ತಿದೆ. 

ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಅವರ ಅಭಿಮಾನಿಗಳು ಗೋಡೆ ಹಾಗೂ ಕಾರುಗಳ ಮೇಲೆ ಬಿತ್ತಿ ಪತ್ರಗಳ ಅಂಟಿಸಿ ಅಭಿಯಾನ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಇವರಿಬ್ಬರ ರಾಜೀನಾಮೆಯನ್ನು ಕಾಂಗ್ರೆಸ್‌ ಹೈಕಮಾಂಡ್ ಇನ್ನೂ ಅಂಗೀಕರಿಸಿಲ್ಲ. ಆದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಎಂ. ಬಿ.ಪಾಟೀಲ್ ನಡುವೆ ಭಾರಿ ಫೈಟ್ ನಡೆಯುತ್ತಿದೆ.