ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ: ಕೇಂದ್ರ ಸಚಿವ
ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸಿದ್ದು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ತಾಲೂಕಿನವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದ್ದು ಬಿಜೆಪಿ, ಜುಂಜಪ್ಪನಗುಡ್ಡೆ ಅಭಿವೃದ್ಧಿಗೆ 1 ಕೋಟಿ ನೀಡಿದ್ದು, 1500 ಮನೆಗಳನ್ನು ನೀಡಿದ್ದು ಬಿಜೆಪಿ ಸರ್ಕಾರ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಹೇಳಿದರು.
ಶಿರಾ : ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸಿದ್ದು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ತಾಲೂಕಿನವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದ್ದು ಬಿಜೆಪಿ, ಜುಂಜಪ್ಪನಗುಡ್ಡೆ ಅಭಿವೃದ್ಧಿಗೆ 1 ಕೋಟಿ ನೀಡಿದ್ದು, 1500 ಮನೆಗಳನ್ನು ನೀಡಿದ್ದು ಬಿಜೆಪಿ ಸರ್ಕಾರ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ದಾಖಲೆ ಸೃಷ್ಟಿಸಬೇಕು ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ವಿಜಯ ಸಂಕಲ್ಪ ಯಾತ್ರೆಯನ್ನು ವಿಜಯ ಯಾತ್ರೆಯನ್ನಾಗಿ ಪರಿವರ್ತಿಸಿ. ಶಿರಾ ಉಪಚುನಾವಣೆಯಲ್ಲಿ ಕೊಟ್ಟಭರವಸೆಗಳನ್ನು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹಾಗೂ ಶಿರಾ ಕ್ಷೇತ್ರದ ಮನೆ ಮಗ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ನೇತೃತ್ವದಲ್ಲಿ ಈಡೇರಿಸಿದ್ದೇವೆ. ಮದಲೂರು ಕೆರೆಗೆ ನೀರು ಹರಿಸುವುದಾಗಿ ಮಾತು ಕೊಟ್ಟಿದ್ದೆವೆ. ಕೊಟ್ಟಮಾತಿಗೆ ತಪ್ಪಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿವೆ. ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮೋಸ ಮಾಡುವುದು ಅವರಿಗಿರುವ ಹುಟ್ಟುಗುಣ ಆದರೆ ಬಿಜೆಪಿ ಪಕ್ಷ ಮಾತು ಕೊಟ್ಟರೆ ತಲೆ ಹೋದರೂ ಕೊಟ್ಟಮಾತನ್ನು ನಡೆಸುತ್ತೇವೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ಬಿಜೆಪಿ ಸರ್ಕಾರ ಶಿರಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತವಾಗಿದೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಮೂಲಭೂತ ಸೌಕರ್ಯವಾದ ರಸ್ತೆ, ಚರಂಡಿ ನಿರ್ಮಿಸಿದ್ದೇವೆ. ಪ್ರತಿ ಮನೆ ಮನೆಗೂ ನೀರು ಕೊಡುವ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ತಾಲೂಕಿನ ಎಲ್ಲಾ ಕೆರೆಗಳು ತುಂಬಿವೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಶಿರಾ ಕ್ಷೇತ್ರದಲ್ಲಿ ಮತ್ತೊಮ್ಮೆ ನನ್ನನ್ನು ಆರ್ಶೀವದಿಸಿ ಶಿರಾ ಕ್ಷೇತ್ರವನ್ನು ಕರ್ನಾಟಕ ಭೂಪಟದಲ್ಲಿ ನಂಬರ್ ಒನ್ ಸ್ಥಾನಕ್ಕೇರಿಸುತ್ತೇನೆ ಎಂದರು.
ವಿಜಯ ಸಂಕಲ್ಪ ಯಾತ್ರೆಯು ನಗರದ ದರ್ಗಾ ಸರ್ಕಲ್‌ನಿಂದ ಹೊರಟು ವೀರಗಾಸೆ, ಡೊಳ್ಳುಕುಣಿತ, ಹುಲಿಕುಣಿತ, ಜನಪದ ನೃತ್ಯಗಳ ಮೂಲಕ ಯಾತ್ರೆ ಅಂಬೇಡ್ಕರ್ ಸರ್ಕಲ್‌ವರೆಗೆ ಅದ್ಧೂರಿಯಾಗಿ ಸಾಗಿತು. ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಧುಗಿರಿ ವಲಯ ಬಿಜೆಪಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಚಂಗಾವರ ಮಾರಣ್ಣ, ನಗರಾಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಆರ್.ಕೆ.ಶ್ರೀನಿವಾಸ್, ಬಿಜೆಪಿ ಮುಖಂಡ ಹಾಲಗುಂಡೇಗೌಡ, ಮುದಿಮಡು ಮಂಜಣ್ಣ, ವಿಸ್ತಾರಕ್ ನಾಗಾರ್ಜುನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಿರಾ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ರೋಡ್‌ಶೋನಲ್ಲಿ ಸಚಿವರಾದ ಎ.ನಾರಾಯಣಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಇತರರು.