Asianet Suvarna News Asianet Suvarna News

ಸುಮಲತಾ ಎಂಟ್ರಿ : ಬಿಜೆಪಿ-ಕಾಂಗ್ರೆಸ್‌ನೊಳಗೆ ಹೆಚ್ಚಿನ ಉತ್ಸಾಹವಿಲ್ಲ..!

ರಾಜ್ಯ ರಾಜಕಾರಣ ಪ್ರವೇಶಿಸಲಿರುವ ಸುಮಲತಾ ಅಂಬರೀಶ್‌ ಶಾಸಕರಾಗುವುದರ ಜೊತೆಗೆ ಮಂತ್ರಿಯೂ ಆಗಬೇಕೆಂಬುದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುಮಲತಾ ಬೆಂಬಲಿಗ ಹನಕೆರೆ ಶಶಿಕುಮಾರ್‌ ಹೇಳಿದರು.

Sumalatha Entry  There is not much enthusiasm within BJP Congress
Author
First Published Feb 1, 2023, 8:28 AM IST

 ಮಂಡ್ಯ : ರಾಜ್ಯ ರಾಜಕಾರಣ ಪ್ರವೇಶಿಸಲಿರುವ ಸುಮಲತಾ ಅಂಬರೀಶ್‌ ಶಾಸಕರಾಗುವುದರ ಜೊತೆಗೆ ಮಂತ್ರಿಯೂ ಆಗಬೇಕೆಂಬುದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುಮಲತಾ ಬೆಂಬಲಿಗ ಹನಕೆರೆ ಶಶಿಕುಮಾರ್‌ ಹೇಳಿದರು.

ಕೆ.ವಿ.ಶಂಕರಗೌಡರ ಶತಮಾನೋತ್ಸವ ಭವನದಲ್ಲಿ ಸುಮಲತಾ ಬೆಂಬಲಿಗರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಲತಾ ಅವರು ರಾಜ್ಯ ರಾಜಕಾರಣಕ್ಕೆ ಬರುವುದಷ್ಟೇ ಅಲ್ಲ, ಅವರು ಶಾಸಕರಾದ ಬಳಿಕ ಅಭಿವೃದ್ಧಿ ದೃಷ್ಟಿಯಿಂದ ಮಂತ್ರಿಯೂ ಆಗಬೇಕೆಂಬುದು ಬೆಂಬಲಿಗರು ಆಸೆ ವ್ಯಕ್ತಪಡಿಸಿದ್ದಾರೆ ಎಂದರು.

ರಾಜಕೀಯ ಪಕ್ಷ ಸೇರುವ ತೀರ್ಮಾನವನ್ನು ಅವರಿಗೇ ಬಿಟ್ಟಿದ್ದೇವೆ. ಅವರು ಕಾಂಗ್ರೆಸ್‌ ಪಕ್ಷವನ್ನಾದರೂ ಸೇರಬಹುದು, ಬಿಜೆಪಿಯನ್ನಾದರೂ ಸೇರಬಹುದು. ಅವರ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಸಭೆಯಲ್ಲಿ ವ್ಯಕ್ತವಾದ ಒಟ್ಟು ಅಭಿಪ್ರಾಯವನ್ನು ಲಕೋಟೆ ಮೂಲಕ ಸುಮಲತಾ ಅಂಬರೀಶ್‌ ಅವರಿಗೆ ಕಳುಹಿಸುವುದಾಗಿ ಹೇಳಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಸಂಸದೆ ಸುಮಲತಾ ಅಂಬರೀಶ್‌ ಬಗ್ಗೆ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ. ಮಹಿಳೆಯರಿಗೆ ಗೌರವ ಕೊಡದೆ ಮಾತನಾಡಿರುವುದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬೇಲೂರು ಸೋಮಶೇಖರ್‌, ಹನಕೆರೆ ಶಶಿಕುಮಾರ್‌, ಎಸ್‌.ಎಲ್‌.ಲಿಂಗರಾಜು, ಅರವಿಂದಕುಮಾರ್‌, ನಗರಸಭೆ ಮಾಜಿ ಸದಸ್ಯರಾದ ಕೆ.ಸುಮಾರಾಣಿ, ಕೆ.ಟಿ.ಮಧುಸೂಧನ್‌, ಮನ್‌ಮುಲ್‌ ಮಾಜಿ ನಿರ್ದೇಶಕ ಎಲ್‌.ಸಿ.ಮಂಜುನಾಥ್‌, ಮಹೇಂದ್ರ, ಕೋಣಸಾಲೆ ಜಯರಾಂ, ನಾಗೇಶ್‌, ಕನ್ನಲಿ ಗ್ರಾಪಂ ಅಧ್ಯಕ್ಷ ರವಿ, ಸುಬ್ಬಣ್ಣ, ದೇವರಾಜು, ಮಹೇಶ್‌ ಇತರರಿದ್ದರು. 

ಬಿಜೆಪಿ-ಕಾಂಗ್ರೆಸ್‌ನೊಳಗೆ ಹೆಚ್ಚಿನ ಉತ್ಸಾಹವಿಲ್ಲ..!

ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ನಾಯಕರಿಂದ ಸ್ಥಳೀಯ ನಾಯಕರವರೆಗೆ ಯಾರೂ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿಲ್ಲ ಎಂಬ ಮಾತುಗಳು ಉಭಯ ಪಕ್ಷಗಳಲ್ಲಿ ಕೇಳಿಬರುತ್ತಿವೆ.

ಸುಮಲತಾ ಗೆದ್ದಂತಹ ಸಂದರ್ಭದಲ್ಲಿ ಸೆಲೆಬ್ರಿಟಿ ರಾಜಕಾರಣಿಯಾಗಿರುವುದರಿಂದ ಪಕ್ಷಕ್ಕೆ ಸೇರಿಸಿಕೊಂಡರೆ ಮಂಡ್ಯ ಜಿಲ್ಲೆಯಲ್ಲಿ ಒಂದು ಶಕ್ತಿಯಾಗಬಹುದೆಂದು ಎರಡೂ ಪಕ್ಷದವರು ಬಲವಾಗಿ ನಂಬಿದ್ದರು. ಆದರೆ, ಪಕ್ಷ ಸೇರ್ಪಡೆಗೆ ನಿರುತ್ಸಾಹವನ್ನು ತೋರಿಸುತ್ತಾ ಎರಡೂ ಪಕ್ಷಗಳ ನಾಯಕರನ್ನು ಓಲೈಕೆ ಮಾಡಿಕೊಂಡು ಬರುತ್ತಿದ್ದರೇ ವಿನಃ ನಿರ್ದಿಷ್ಟತೀರ್ಮಾನ ಹೊರಬೀಳಲೇ ಇಲ್ಲ.

ಸಹಕಾರ ಸಂಘಗಳು, ಗ್ರಾಪಂ, ಚುನಾವಣೆಗಳು, ಒಂದು ಉಪ ಚುನಾವಣೆ, ಎರಡು ವಿಧಾನಪರಿಷತ್‌ ಚುನಾವಣೆಗಳಲ್ಲಿ ಸಂಸದೆ ಸುಮಲತಾ ತಟಸ್ಥ ಧæೂೕರಣೆ ಅನುಸರಿಸಿದ್ದರಿಂದ ಚುನಾವಣೆ ವೇಳೆ ಅವರ ಗೆಲುವಿಗೆ ಕೈಜೋಡಿಸಿದ್ದ ಎರಡೂ ಪಕ್ಷಗಳ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡರು.

ಸ್ವಾಭಿಮಾನಿ ಸಂಸದೆಯಾಗಿಯೂ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲೂ ಜನಮೆಚ್ಚುಗೆ ಗಳಿಸಲಿಲ್ಲ. ಜೆಡಿಎಸ್‌ ಪಕ್ಷವನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದನ್ನು ಬಿಟ್ಟರೆ ಜಿಲ್ಲೆಗೆ ಕೇಂದ್ರದಿಂದ ಅನುದಾನವನ್ನು ತಂದು ಅಭಿವೃದ್ಧಿಗೆ ಕೊಡುಗೆ ನೀಡದಿರುವ ಬಗ್ಗೆ ಜೆಡಿಎಸ್‌ ಶಾಸಕರಿಂದಲೇ ತೀವ್ರ ಟೀಕೆಗೆ ಗುರಿಯಾದರು.

ಅಂಬರೀಶ್‌ ಅವರಿಗಿದ್ದ ವರ್ಚಸ್ಸನ್ನು ಉಳಿಸಿಕೊಂಡು ಸ್ವಾಭಿಮಾನಿ ಸಂಸದೆಯಾಗಿ ಆಯ್ಕೆ ಮಾಡಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಸುಮಲತಾ ಕೈಚೆಲ್ಲಿದರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

ರಾಷ್ಟ್ರ ರಾಜಕಾರಣ ಸಾಕಾಯ್ತೇ..!

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಆಗಲೇ ರಾಷ್ಟ್ರ ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಂಡಂತಿರುವ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರುವ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಉದ್ದೇಶಕ್ಕಾಗಿಯೇ ಬೆಂಬಲಿಗರ ಮೂಲಕ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸುಮಲತಾ ಸೂಚನೆಯಂತೆ ಅವರ ಬೆಂಬಲಿಗರು, ಅಭಿಮಾನಿಗಳೂ ಕೂಡ ಮಂಗಳವಾರ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಭೆ ಕರೆದು ರಾಜ್ಯ ರಾಜಕಾರಣಕ್ಕೆ ಸುಮಲತಾ ಮರಳುವಂತೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

Follow Us:
Download App:
  • android
  • ios