ಮಂಡ್ಯ (ಮಾ.04):  ಜಿ​ಲ್ಲೆ​ಯಲ್ಲಿ ನ​ಡೆ​ಯು​ತ್ತಿ​ರುವ ಅ​ಕ್ರಮ ಕಲ್ಲು ಗ​ಣಿ​ಗಾ​ರಿ​ಕೆ ತ​ಡೆ​ಯುವ ಸ​ಲು​ವಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನ​ಡೆ​ಸು​ವಂತೆ ಸಂಸದೆ ಸು​ಮ​ಲತಾ ಅಂಬ​ರೀಶ್‌ ರಾ​ಜ್ಯ​ ಸ​ರ್ಕಾ​ರದ ಮುಖ್ಯ ಕಾ​ರ್ಯ​ದರ್ಶಿ ರ​ವಿ​ಕು​ಮಾರ್‌ ಅ​ವ​ರಲ್ಲಿ ಮ​ನವಿ ಮಾ​ಡಿ​ದ​ರು.

ಬೆಂಗ​ಳೂ​ರಿನ ವಿ​ಧಾ​ನ​ಸೌ​ಧ​ದಲ್ಲಿ ಮುಖ್ಯ ಕಾ​ರ್ಯ​ದ​ರ್ಶಿ ರ​ವಿ​ಕು​ಮಾರ್‌ ಅ​ವ​ರನ್ನು ಬು​ಧ​ವಾರ ಭೇ​ಟಿ​ಯಾದ ಸಂಸದೆ ಸು​ಮಲತಾ ಅಂಬ​ರೀಶ್‌, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಚರ್ಚಿಸಿದರು.

ಮಂಡ್ಯ ಜಿಲ್ಲೆಯ ಅರಣ್ಯ ಪ್ರದೇಶ ವಿಸ್ತೀರ್ಣದ ಸಮಯದಲ್ಲಿ ಗಡಿ ಗುರುತು ಮಾಡದಿರುವ ಕಾ​ರಣ ಗೊಂದ​ಲ​ಗಳು ಸೃ​ಷ್ಟಿ​ಯಾ​ಗಿ​ವೆ. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಗಡಿ ಗುರುತು ಮಾಡುವ ಮೂಲಕ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದಂತಾಗುವುದು ಎಂದರು.

ಯಾರೇ ಎದುರಾದರೂ ನಾನು ಹೆದರೋಲ್ಲ: ಗುಡುಗಿದ ಸುಮಲತಾ

ಕೆಆ​ರ್‌​ಎ​ಸ್‌ ಸುತ್ತಮು​ತ್ತ, ಬೇಬಿ ಬೆಟ್ಟಹಾಗೂ ಕಾಳೇನಹಳ್ಳಿ ಗ್ರಾಮದ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗಳ ಸಂಬಂಧ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಅವರೊಂದಿಗೆ ಗಣಿಗಾರಿಕೆಗಳ ಸ್ಥಳ ಪರಿಶೀಲನೆ ನಡೆಸಿದ ವಿವರಗಳೊಂದಿಗೆ ವಿಸ್ತಾರವಾಗಿ ಚರ್ಚಿಸಿದರು.

ಗಣಿಗಾರಿಕೆಯಿಂದ ಪ್ರಸಿದ್ಧ ಜಲಾಶಯ ಕೃಷ್ಣರಾಜ ಸಾಗರ (ಕೆ.ಆರ್‌.ಎಸ್‌ ಅಣೆಕಟ್ಟು) ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆಗಳ ರಾಜಧನ ಮತ್ತು ದಂಡ ಸಂಗ್ರಹ ಯಾವುದೂ ಹೊಂದಾಣಿಕೆಯಾಗದಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಗಳಿಂದ ಬಾಕಿ ಇರುವ ರಾಜಧನ ಮತ್ತು ದಂಡ ಸಂಗ್ರಹ ಮಾಡುವ ಮೂಲಕ ರಾಜ್ಯದ ಸದ್ಯದ ಸಾಂಕ್ರಾಮಿಕ ಪರಿಸ್ಥಿಯಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸದ್ಬಳಕ್ಕೆ ಮಾಡಿದ್ದಲ್ಲಿ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.