ಮಂಗಳೂರು(ಆ.22): ಶಾಸಕ ಎಸ್‌.ಅಂಗಾರ ಅವರಿಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಳ್ಯ ಬಿಜೆಪಿ ಬುಧವಾರ ತುರ್ತು ಸಭೆ ಸಡೆಸಿದ್ದು, ಪಕ್ಷದಿಂದ ಅಸಹಕಾರ ಚಳವಳಿ ನಡೆಸಲು ತೀರ್ಮಾನಿಸಿದೆ. ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ರಾಜೀನಾಮೆಯನ್ನೂ ನೀಡಿದ್ದಾರೆ.

200 ನಾಯಕರು ಸಭೆಯಲ್ಲಿ ಭಾಗಿ:

ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ 200ರಷ್ಟುನಾಯಕರು ಭಾಗವಹಿಸಿದ್ದರು. ಕ್ಷೇತ್ರದ ಸ್ಥಳೀಯ ಪಕ್ಷ ಸಂಘಟನೆಗೆ ಧಕ್ಕೆಯಾಗದಂತೆ, ಪಕ್ಷದ ಎಲ್ಲ ಚಟುವಟಿಕೆಗಳಿಗೆ ಅಸಹಕಾರ ವ್ಯಕ್ತಪಡಿಸುವುದು, ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಂದ ಮಂಡಲ ಅಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುವುದು, ಪಕ್ಷ ಸಂಬಂಧಿತ ಚಟುವಟಿಕೆಗಳನ್ನು ಮತ್ತು ಸಭೆಗಳನ್ನು ಸ್ಥಗಿತಗೊಳಿಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತೆಂದು ತಿಳಿದು ಬಂದಿದೆ. ಈ ಮೂಲಕ ಅಸಮಾಧಾನವನ್ನು ಪಕ್ಷದ ಜಿಲ್ಲೆ, ರಾಜ್ಯ, ರಾಷ್ಟ್ರ ನಾಯಕರ ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತರುವುದೆಂದು ನಿರ್ಧರಿಸಲಯಿತು.

ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಸಮಿತಿ ಬಿಜೆಪಿ ಅಧ್ಯಕ್ಷ ವೆಂಕಟ್‌ ವಳಲಂಬೆ ಈ ಕುರಿತು ಮಾಹಿತಿ ನೀಡಿದರು. ಅಂಗಾರರ ಪಕ್ಷನಿಷ್ಠೆ ಮತ್ತು ಕಾರ್ಯನಿರ್ವಹಣೆ ಕೂಡ ಇದಕ್ಕೆ ಪೂರಕವಾಗಿತ್ತು. ಆದರೂ ಕೊನೇ ಕ್ಷಣದಲ್ಲಿ ಮಂತ್ರಿಸ್ಥಾನ ಕೈ ತಪ್ಪಿದೆ. ಇದು ಪಕ್ಷ ಕಟ್ಟಿಬೆಳೆಸಿದವರಿಗೆ ನೋವು ತಂದಿದೆ. ಹೀಗಾಗಿ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು:

ಈ ನಿರ್ಧಾರದಂತೆ ಪಕ್ಷದ ಮೂಲಕ ಗೆದ್ದ ಜನಪ್ರತಿನಿಧಿಗಳು ಕಚೇರಿಗೆ ಹೋಗುವುದಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಪಕ್ಷವೂ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ಅಸಹಕಾರ ಧೋರಣೆ ತಳೆಯುತ್ತದೆ. ಈಗಾಗಲೆ ಅನೇಕ ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನೂ ನೀಡಿದ್ದಾರೆ ಎಂದು ಹೇಳಿದರು.

ಅಂಗಾರರಿಗೆ ಮಂತ್ರಿಸ್ಥಾನವೇ ಸಿಗಬೇಕು. ಸಿಗುವ ಸ್ಪಷ್ಟ ಭರವಸೆ ನಮಗೆ ಬೇಕು. ಅಲ್ಲಿಯವರೆಗೆ ನಮ್ಮ ಈ ಅಸಹಕಾರ ಚಳುವಳಿ ಮುಂದುವರಿಯುತ್ತದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ 75 ಗ್ರಾಮಗಳ 231 ಬೂತ್‌ಗಳಿಗೂ ಇದು ಅನ್ವಯವಾಗುತ್ತದೆ ಎಂದು ವೆಂಕಟ್‌ ವಳಲಂಬೆ ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಎ.ವಿ.ತೀರ್ಥರಾಮ, ಬಿಜೆಪಿ ಮುಖಂಡರಾದ ವೆಂಕಟ್‌ ದಂಬೆಕೋಡಿ, ರಾಕೇಶ್‌ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಸುಭೋದ್‌ ಶೆಟ್ಟಿಮೇನಾಲ, ಹರೀಶ್‌ ಕಂಜಿಪಿಲಿ, ದಿನೇಶ್‌ ಮೆದು, ಚಂದ್ರಶೇಖರ ಪನ್ನೆ, ಮುಳಿಯ ಕೇಶವ ಭಟ್‌, ಪಿ.ಕೆ.ಉಮೇಶ್‌, ಸುರೇಶ್‌ ಕಣೆಮರಡ್ಕ, ಮಹೇಶ್‌ ಕುಮಾರ್‌ ಮೇನಾಲ, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.

ನಳಿನ್‌ ಸುಳ್ಯದ ಅಸಮಾಧಾನ ಶಮನಗೊಳಿಸಲಿ:

ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮೊದಲ ಆದ್ಯತೆಯಾಗಿ ಸುಳ್ಯದ ಅಸಮಾಧಾನವನ್ನು ಪರಿಗಣಿಸಿ ಶಮನಗೊಳಿಸಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ ಹೇಳಿದರು.

ಬೇಡಿಕೆ ಸಲ್ಲಿಸಿ ಹಿಂದೆ ಯಶಸ್ವಿಯಾಗಿದ್ದೇವೆ:

ಸುಳ್ಯ ಶಾಸಕ ಎಸ್‌.ಅಂಗಾರ ಅವರಿಗೆ ಮಂತ್ರಿಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ನಾವು ಅಸಹಕಾರ ಚಳುವಳಿಗೆ ಮುಂದಾಗಿದ್ದು, ಈ ಮೂಲಕ ನಮ್ಮ ಬೇಡಿಕೆಯಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ವಿ.ತೀರ್ಥರಾಮ ಹೇಳಿದರು. 7 ವರ್ಷಗಳ ಹಿಂದೆ ಕೂಡಾ ಪಕ್ಷದ ಮುಖಂಡರು ರಾಜೀನಾಮೆ ನೀಡಿ ಪ್ರಯೋಜನವಾಗಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ಸುಳ್ಯದಿಂದ ನಿಯೋಗ ಹೋಗಿ ಒತ್ತಾಯಿಸಿದ್ದೆವು. ಆಗಿನ ಸನ್ನಿವೇಶದ ಅಸಹಾಯಕತೆಯನ್ನು ಮುಖಂಡರು ಮನವರಿಕೆ ಮಾಡಿದ್ದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಬೇಡಿಕೆ ಸಚಿವ ಸ್ಥಾನ ಆಗಿರದೇ ಯಡಿಯೂರಪ್ಪನವರು ಘೋಷಿಸಿದ್ದ ವಿಶೇಷ ಪ್ಯಾಕೇಜ್‌ ಅನುಷ್ಠಾನಕ್ಕೆ ಬರುವುದಾಗಿತ್ತು. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹೀಗಾಗಿ ಈ ಬಾರಿಯ ಸಾತ್ವಿಕ ಪ್ರತಿಭಟನೆಯಲ್ಲೂ ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ನಿವಾಸದಲ್ಲಿ ಅಂಗಾರ ವಿಶ್ರಾಂತಿ

ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಸುಳ್ಯ ಶಾಸಕ ಎಸ್‌.ಅಂಗಾರ ಅವರು ಬೆಂಗಳೂರಿನಿಂದ ಆಗಮಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಸಂದರ್ಭದಲ್ಲಿ ಈ ಆಫರ್‌ ನೀಡಲಾಗಿದ್ದು, ಇದಕ್ಕೆ ಸುಳ್ಯದವರು ಅಸಮ್ಮತಿ ಸೂಚಿಸಿದ್ದು, ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಾದರೂ ಸಚಿವ ಪದವಿಯೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.