ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ : ಸ್ವಾಮೀಜಿಗೆ ಗೇಟ್ ಪಾಸ್ 


ಹನೂರು [ಆ.29]:  ಸುಳ್ವಾಡಿ ವಿಷ ದುರಂತ ಪ್ರಕರಣದಲ್ಲಿ ಆಹಾರದಲ್ಲಿ ವಿಷ ಬೆರಸಿ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮೀಜಿ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ವಾಮೀಜಿ ನೇಮಕ ಮಾಡುವ ಸಂಬಂಧ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಬುಧ​ವಾರ ಸಂಜೆ ಸಭೆ ನಡೆಸಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ಜೈಲುಪಾಲಾಗಿ ಎಂಟು ತಿಂಗಳ ನಂತರ ಭಕ್ತಾಧಿಗಳು ಸಾಲೂರು ಮಠದಲ್ಲಿ ಸಭೆ ಸೇರಿ ಸ್ವಾಮೀಜಿ ಬದಲಾವಣೆಗೆ ಒಕ್ಕೊರಲವಾಗಿ ನಿರ್ಣಯ ಕೈಗೊಳ್ಳಲಾಯಿತು.

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯ ಮಲೆಮಹದೇಶ್ವರ ಬೆಟ್ಟದ ಪೀಠಾಧಿಪತಿಯಿಂದ ಇಮ್ಮಡಿ ಮಹದೇವಸ್ವಾಮಿ ಅವರನ್ನು ಕೈಬಿಡಲು ಸಾಲೂರು ಮಠದ ಆವರಣದಲ್ಲಿ ಕ್ಷೇತ್ರವ್ಯಾಪ್ತಿಯ ಸಾವಿರಾರು ಮುಖಂಡರ ಸಮ್ಮುಖದಲ್ಲಿ ಸಭೆ ನಡೆಯಿತು.

ಸಾಲೂರು ಮಠದ ಹಿರಿಯ ಶ್ರೀಗಳಾದ ಗುರುಸ್ವಾಮೀಜಿ ಮಾತನಾಡಿ ಭಕ್ತಾಧಿಗಳ ಭಾವನೆಗೆ ಧಕ್ಕೆ ಭಾರದಂತೆ, ಭಕ್ತಾಧಿಗಳ ಅಣತಿಯಂತೆ ಎಲ್ಲರ ನಿರ್ಣಯದಂತೆ ಮುಂದಿನ ಕ್ರಮ ಜರುಗಿಸಲು ನನ್ನದೇನು ಅಭ್ಯಂತರವಿಲ್ಲ. ಆದುದರಿಂದ ಎಲ್ಲಾ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರಂತೆ ಮುಂದಿನ ಕಾರ್ಯಕ್ರಮಗಳು ನಡೆಯಲಿ ಎಂದು ತಿಳಿಸಿದರು.

ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಮಲೆಮಹದೇಶ್ವರ ಬೆಟ್ಟಎಂದರೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ದೇವಾಲಯ ಸೇರಿದಂತೆ ಸಾಲೂರು ಮಠಕ್ಕೆ ಪರಂಪರೆ ಹಿನ್ನೆಲೆಯಿದೆ. ಬೇಡಗಂಪಣ ಸಮಾಜಕ್ಕೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಭಕ್ತಾಧಿಗಳ ಭಾವನೆಗಳಿಗೆ ಚ್ಯುತೆ ಬರದಂತೆ ಸಾರ್ವಜನಿಕರು ಹಾಗೂ ಪೀಠಾಧಿಪತಿಗಳಾದ ಸುತ್ತೂರುಶ್ರೀ, ಹಿರಿಯ ಸ್ವಾಮೀಜಿಗಳ ಅಣತಿಯಂತೆ ಮುಂದಿನ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಹಾಗೂ ಸಾಲೂರು ಮಠದ ಪರಂಪರೆಯನ್ನು ಉಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ದೇವಾಲಯದ ಟ್ರಸ್ಟಿಮಾಜಿ ನಾಗಪ್ಪ ಮಾತನಾಡಿ ಬೇಡಗಂಪಣ ಸಮಾಜ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನಲ್ಲಿ 32 ಹಳ್ಳಿಗಳಲ್ಲಿ ನಮ್ಮ ಜನಾಂಗದವರು ಇದ್ದಾರೆ. ಆದರೆ ಸಾಲೂರು ಮಠದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿಯೇ ಇಂದಿಗೂ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನ್ಯಾಯಾಲಯದಿಂದ ತಡೆಯಾಜ್ಞೆ: ಆಗಸ್ಟ್‌ 15ರಂದು ಗುಂಡೇಗಾಲ ಮಠದಲ್ಲಿ ನಡೆದ ಸಭೆಯಲ್ಲಿ ಸಾಲೂರು ಮಠದ ಹಿರಿಯ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆ ಪೂಜಾಕಾರ್ಯಗಳು ಮಠದ ನಿರ್ವಹಣೆಯನ್ನು ಸರಿದೂಗಿಸಿಕೊಂಡು ಹೋಗಲು ಸರಿಯಾದ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಪ್ರಸ್ತಾಪ ನಡೆದ ಹಿನ್ನಲೆ ಬುಧವಾರ ಮಲೆಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಯಬಾರದು ಎಂದು ಇಮ್ಮಡಿ ಸ್ವಾಮೀಜಿಯ ಬೆಂಬಲಿಗರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಸ್ವಾಮೀಜಿ ಬರುವವರೆಗೂ ಬೇರೆ ಉತ್ತರಾಧಿಕಾರಿಯನ್ನು ನೇಮಕ ಮಾಡಬಾರದು ಎಂದು ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಘಟನೆಯೂ ಸಹ ನಡೆಯಿತು.

ಇಮ್ಮಡಿ ಮಹದೇಸ್ವಾಮಿ ಬೆಂಬಲಿಗರು ಬರುವ ಮುನ್ನವೇ ಸಾಲೂರು ಮಠದಲ್ಲಿ ಭಕ್ತಾಧಿಗಳ ಸಭೆ ಸೇರಿ ಒಕ್ಕೊರಲವಾಗಿ ಇಮ್ಮಡಿ ಮಹದೇವಸ್ವಾಮಿಯನ್ನು ಮಠದಿಂದ ಕೈಬಿಡಲು ನಿರ್ಣಯ ಕೈಗೊಳ್ಳಲಾಯಿತು.

ಚಾಮರಾಜನಗರ ಜಿಲ್ಲಾ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ಕೊಡಸೋಗೆ ಶಿವಬಸಪ್ಪ, ವೀರಮಾದು, ಎನ್‌ರಿಚ್‌ ಮಹದೇವಸ್ವಾಮಿ, ಶಾಗ್ಯ ರವಿ, ಪೊನ್ನಾಚಿ ಮಹದೇವಸ್ವಾಮಿ, ಅಜ್ಜೀಪುರ ಮರುಡೇಶ್ವರಸ್ವಾಮಿ, ಉದ್ದನೂರು ಪ್ರಸಾದ್‌, ಹನೂರು ರಾಜಶೇಖರಮೂರ್ತಿ, ಆನಾಪುರ ಉಮೇಶ್‌, ತೋಟೇಶ್‌, ಮಾದೇಶ, ಹಲಗತಂಬಡಿ ಬೇಡಗಂಪಣ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.