Sultanamma: ದಶಕಗಳ ಕಾಲ ಹಳ್ಳಿಗಾಡಿನ ಅನಕ್ಷರಸ್ತ ಬಡ  ಹೆಣ್ಣುಮಕ್ಕಳ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಸಾವಿರಾರು ಜನರ ಪಾಲಿಗೆ ಜೀವರಕಕ್ಷಿಯಾಗಿದ್ದ ಸುಲ್ತಾನಮ್ಮ ವಯೋಸಹಜ ಅನಾರೋಗ್ಯದಿಂದ ತಮ್ಮ ಬದುಕಿನ ಸಾರ್ಥಕ ಪಯಣವನ್ನು ಮುಗಿಸಿದ್ದಾರೆ. 

ದಾವಣಗೆರೆ (ಜುಲೈ26): ದಶಕಗಳ ಕಾಲ ಹಳ್ಳಿಗಾಡಿನ ಅನಕ್ಷರಸ್ತ ಬಡ ಹೆಣ್ಣುಮಕ್ಕಳ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಸಾವಿರಾರು ಜನರ ಪಾಲಿಗೆ ಜೀವರಕಕ್ಷಿಯಾಗಿದ್ದ ಸುಲ್ತಾನಮ್ಮ ಎಂದೇ ಹೆಸರಾಗಿದ್ದ ಸುಲ್ತಾನ್ ಬಿ ವಯೋಸಹಜ ಅನಾರೋಗ್ಯದಿಂದ ತಮ್ಮ ಬದುಕಿನ ಸಾರ್ಥಕ ಪಯಣವನ್ನು ಮುಗಿಸಿದ್ದಾರೆ. ಆರೇಳು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಉಚಿತವಾಗಿ ಮಾಡಿಸಿರುವ ಸುಲ್ತಾನ್‌ಬಿ ಅವರು ಪಾರಂಪರಿಕ ನಾಟಿ ವೈದ್ಯ ಪದ್ದತಿಯ ಅಪರೂಪದ ಕೊಂಡಿಯಾಗಿದ್ದರು.

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯವೇ ಇಲ್ಲದ ಕಾಲಘಟ್ಟದಲ್ಲಿ ಮಹಿಳೆಯರ ಪಾಲಿಗೆ ಜೀವನ್ಮರಣದ ಪ್ರಶ್ನೆಯಾಗಿದ್ದ ಹೆರಿಗೆ ಕಾರ್ಯವನ್ನು ನಯಾಪೈಸೆಯೂ ಹಣ ಪಡೆಯದೆ ಸುಸೂತ್ರವಾಗಿ ಮಾಡುತ್ತಿದ್ದ ಸುಲ್ತಾನಮ್ಮ ಆಗಿನ ಕಾಲದ ಗರ್ಭಿಣಿ ಹೆಣ್ಣುಮಕ್ಕಳ ಪಾಲಿನ ಧೈರ್ಯದ, ಆತ್ಮವಿಶ್ವಾಸದ ಪ್ರತೀಕವಾಗಿದ್ದರು

“ನಮ್ಮ ಮನೆಯಲ್ಲಿ ಮೂವರು ಅಕ್ಕಂದಿರಿಗೆ , ಮೂವರು ಅತ್ತಿಗೆಯರಿಗೆ ಹತ್ತು ಹೆರಿಗೆಗಳನ್ನು ಸುಲಲಿತವಾಗಿ, ಆಸ್ಪತ್ರೆಯ ಮುಖವನ್ನೂ ನೋಡದಂತೆ ಸುಲ್ತಾನಮ್ಮ ಹೆರಿಗೆ ಮಾಡಿಸಿದ್ದರು. ಹೆರಿಗೆಗೆ ಮುನ್ನ ಮನೆಗೆ ಬಂದು ಗರ್ಭಿಣಿ ಹೆಣ್ಣು ಮಕ್ಕಳಿಗೆ ದೈರ್ಯ ತುಂಬುತ್ತಿದ್ದರು. ಹೆರಿಗೆ ನಂತರವೂ ಪ್ರತಿ ದಿನ ಬಂದು ಮಾತೃ ಮಮತೆಯಿಂದ ತಾಯಿ ಮತ್ತು ಮಗುವಿನ ಆರೈಕೆಯನ್ನು ಮಾಡುತ್ತಿದ್ದರು. ಒಂದು ಪೈಸೆಯನ್ನೂ ಪಡೆಯದೆ ಉಚಿತವಾಗಿ, ಎಲ್ಲಾ ಜಾತಿ ಧರ್ಮದವರ ಮನೆಯಲ್ಲಿ ಹೆರಿಗೆ ಕಾರ್ಯದ ನೇತೃತ್ವವನ್ನು ವಹಿಸುತ್ತಿದ್ದರು’ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ 58 ವರ್ಷದ ಆರ್. ವೆಂಕಟೇಶ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬರಿಗೈಯಿಂದ ಹಾವು ಹಿಡಿಯುತ್ತಿದ್ದ ಸುಲ್ತಾನಮ್ಮ: ಸೂಲಗಿತ್ತಿ ಸೇವೆಯೇ ಅಲ್ಲದೇ ವಿಷಪೂರಿತ ಹಾವುಗಳು ವಸತಿ ಪ್ರದೇಶಕ್ಕೆ ಪ್ರವೇಶಿಸಿದಾಗ ಸುರಕ್ಷಿತವಾಗಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು. ತಾಲ್ಲೂಕಿನಲ್ಲಿ ಯಾವುದೇ ಮನೆಯಲ್ಲಿ ಹಾವು ಬಂತೆಂದರೆ ಸುಲ್ತಾನಮ್ಮ ಅವರಿಗೆ ಕರೆ ಬರುತ್ತಿತ್ತು. ಬರಿಗೈಯಲ್ಲಿ ಹಾವುಗಳನ್ನು ಹಿಡಿಯುತ್ತಿದ್ದರು. ಒಮ್ಮೆ ಹಾವು ಹಿಡಿಯುವ ಸಂದರ್ಭದಲ್ಲಿ ನಾಗರಹಾವು ಕಚ್ಚಿ ಸಾವು ಬದುಕಿನೊಂದಿಗೆ ಆಸ್ಪತ್ರೆಯಲ್ಲಿ ಸೆಣೆಸಿ ಸಾವಿನಿಂದ ಪಾರಾಗಿದ್ದರೂ ಬೆರಳನ್ನು ಕಳೆದುಕೊಂಡಿದ್ದರು. 

ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು

ನಾಟಿ ವೈದ್ಯೆಯಾಗಿದ್ದ ಸುಲ್ತಾನಮ್ಮ: ಇಸುಬು, ಹುಳಕಡ್ಡಿಗೂ (ಚರ್ಮ ಸಂಬಂಧಿ ರೋಗಗಳು) ಪರಿಣಾಮಕಾರಿ ನಾಟಿ ಔಷಧ ಕೊಡುತ್ತಿದ್ದರು. ಅಲೋಪತಿ ವೈದ್ಯರಿಂದ ಗುಣಮುಖವಾಗದ ಹಲವು ಚರ್ಮರೋಗಳನ್ನು ಗಿಡಮೂಲಿಕೆ ಚಿಕಿತ್ಸೆಯ ಮೂಲಕ ಗುಣಪಡಿಸುತ್ತಿದ್ದರು. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಚರ್ಮ ರೋಗಿಗಳು ಇವರ ಮನೆಗೆ ಧಾವಿಸುತ್ತಿದ್ದರು.

ಬಾಲ್ಯದಿಂದ ಕೊನೆಯವರೆಗೆ ಬಡತನದಲ್ಲೇ ಜೀವಿಸಿದ್ದ ಸುಲ್ತಾನಮ್ಮ: ತಮ್ಮ ಬಹುಮುಖಿ ಸಮಾಜಸೇವೆಯಲ್ಲೇ ತಮ್ಮ ಬದುಕಿನ ಸಾರ್ಥಕವನ್ನು ಕಂಡುಕೊಂಡಿದ್ದರು.ಗಂಡ ಹಾಗೂ ಪುತ್ರ ಎತ್ತಿನಗಾಡಿ ಇಟ್ಟುಕೊಂಡು ಪಟ್ಟಣದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು. ಅಕಾಲಿಕವಾಗಿ ಇಬ್ಬರೂ ತೀರಿಹೋದರೂ ಎದೆಗುಂದದ ಸುಲ್ತಾನ್‌ ಬಿ ಸ್ವತಃ ಬಾರುಕೋಲು ಹಿಡಿದು ಒಂಟಿ ಎತ್ತಿನ ಗಾಡಿಯನ್ನು ಓಡಿಸುತ್ತಾ ಪಟ್ಟಣದಲ್ಲಿ ಹಲವು ಕಾಲ ಮಹಿಳಾ ಹಮಾಲಿಯಾಗಿ ಕೆಲಸ ಮಾಡಿದ್ದರು.

ಅರ್ಧ ಶತಮಾನಕ್ಕೂ ಮೀರಿದ ಸಾರ್ಥಕ ಸಮಾಜಸೇವೆ: ಅವರ ಸಮಾಜ ಸೇವೆಯನ್ನು ಪರಿಗಣಿಸಿ ಕಳೆದ ವರ್ಷ 2021ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಕಳೇದ ಆರು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಸಹಸ್ರಾರು ಹೆರಿಗೆಗಳನ್ನು ಮಾಡಿಸುವ ಮೂಲಕ ಸೂಲಗಿತ್ತಿ ಎಂದೇ ಹೆಸರಾಗಿದ್ದರು. 

ಹೆರಿಗೆಯ ಬಳಿಕ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳುವುದು ಹೇಗೆ ?

ಸುಲ್ತಾನ್ ಬಿ ಅವರ ಅಲಿಕೆಯಿಂದ ಪಾರಂಪರಿಕ ವೈದ್ಯ ಪದ್ದತಿಯ , ತಾಯಿ ಹೃದಯದ ಸಮಾಜಸೇವಕಿಯನ್ನು ಸಮಾಜ ಕಳೆದುಕೊಂಡಂತಾಗಿದೆ ಪುತ್ರ , ಪುತ್ರಿ ಹಾಗೂ ಪತಿಯ ಅಗಲಿಕೆ ಹಿನ್ನೆಲೆಯಲ್ಲಿ ಗ್ರಾಮದ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದರು.ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಸುಲ್ತಾನ್ ಬಿ ಅವರ ಅಂತ್ಯಕ್ರಿಯೆ ನೆರವೇರಿತು.