ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಜೋಲಿಯೇ ಗತಿ: ಗುಂಡಿಯ ನೀರೇ ಕೊಡಗಿನ ಸೂಳೆಭಾವಿ ಹಾಡಿ ಜನರಿಗೆ ಜೀವಜಲ!
ಬೆಡ್ ಶೀಟ್ ಗೆ ಬಡಿಗೆ ಕಟ್ಟಿ ಮಾಡಿದ ಜೋಲಿಯೇ ಇಲ್ಲಿ ಅನಾರೋಗ್ಯ ಪೀಡಿತರ ಆಸ್ಪತ್ರೆಗೆ ಸಾಗಿಸುವ ಗಾಡಿ. ಅದು ಇಲ್ಲದಿದ್ದರೆ ಹಾಡಿಯಲ್ಲೇ ಮಲಗಿ ಪ್ರಾಣಬಿಡಬೇಕಾದ ಪರಿಸ್ಥಿತಿ. ಇಂತಹ ಅಮಾನವೀಯ ದೃಶ್ಯ ಇಂದಿಗೂ ಕಂಡು ಬರುವುದು ಎಲ್ಲಿ ಎನ್ನುವುದನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಡಿ.07): ಬೆಡ್ ಶೀಟ್ ಗೆ ಬಡಿಗೆ ಕಟ್ಟಿ ಮಾಡಿದ ಜೋಲಿಯೇ ಇಲ್ಲಿ ಅನಾರೋಗ್ಯ ಪೀಡಿತರ ಆಸ್ಪತ್ರೆಗೆ ಸಾಗಿಸುವ ಗಾಡಿ. ಅದು ಇಲ್ಲದಿದ್ದರೆ ಹಾಡಿಯಲ್ಲೇ ಮಲಗಿ ಪ್ರಾಣಬಿಡಬೇಕಾದ ಪರಿಸ್ಥಿತಿ. ಇಂತಹ ಅಮಾನವೀಯ ದೃಶ್ಯ ಇಂದಿಗೂ ಕಂಡು ಬರುವುದು ಎಲ್ಲಿ ಎನ್ನುವುದನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ. ಇಲ್ಲಿ ನೋಡಿ ಬೆಡ್ ಶೀಟ್ ಒಂದನ್ನು ಬಡಿಗೆಗೆ ಕಟ್ಟಿ ಅದರೊಳಗೆ ವೃದ್ಧೆಯೊಬ್ಬರನ್ನು ಮಲಗಿಸಿ ಆಸ್ಪತ್ರೆಗೆ ಕರೆದೊಯುತ್ತಿರುವ ಈ ದೃಶ್ಯ ಕಂಡು ಬರುತ್ತಿರುವುದು ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ. ಹೌದು ಇಂತಹ ಮನಕಲಕುವ ದೃಶ್ಯ ಕಂಡುಬಂದಿದ್ದು ಸೋಮವಾರಪೇಟೆ ತಾಲ್ಲೂಕಿನ ಸೂಳೆಭಾವಿ ಹಾಡಿಯಲ್ಲಿ.
ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಬದುಕುತ್ತಿರುವ ಜೇನುಕುರುಬ ಸಮುದಾಯದ 36 ಕುಟುಂಬಗಳ ದುಃಸ್ಥಿತಿ ಇದು. ಹಾಡಿಗೆ ಇಂದಿಗೂ ಸಮರ್ಪಕವಾದ ರಸ್ತೆಯಿಲ್ಲ. ಕುಶಾಲನಗರ, ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಇರುವ ಸೂಳೆಭಾವಿ ಹಾಡಿಗೆ ಸ್ವಲ್ಪ ದೂರದವೆಗೆ ಮಾತ್ರವೇ ಚಿಕ್ಕದಾದ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಇದು ಕೇವಲ ನಾಲ್ಕೈದು ಕುಟುಂಬಗಳಿಗೆ ಮಾತ್ರ ಸಂಪರ್ಕ ಕಲ್ಪಿಸುತ್ತದೆ. ಉಳಿದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಕಾಡಿನ ನಡುವೆ ಇರುವ ಕಾಲು ದಾರಿಯೇ ಗತಿ. ಯಾರಿಗೇ ಆರೋಗ್ಯ ಸರಿಯಿಲ್ಲದಿದ್ದರೂ ಇದೇ ರಸ್ತೆಯೇ ಗತಿ.
Kodagu: ಚೆಟ್ಟಳ್ಳಿ ಕೇಂದ್ರೀಯ ತೋಟದಲ್ಲಿ ಬಾಯಿ ನೀರೂರಿಸುವ ಕೆಂಪು, ಹಸಿರು, ಚೈನೀಸ್ ಲಿಚ್ಚಿ!
ವರದಿಗಾಗಿ ಸುವರ್ಣ ನ್ಯೂಸ್ ತೆರಳಿದ್ದ ಸಂದರ್ಭದಲ್ಲಿ ಕ್ಯಾಮೆರಾಕ್ಕೆ ಸಿಕ್ಕಿದ ಈ ದೃಶ್ಯವನ್ನೊಮ್ಮೆ ನೀವು ನೋಡಿ. ಕಲ್ಯಾಣಿ ಎಂಬ ವೃದ್ಧೆಯೊಬ್ಬರು ನಾಲ್ಕೈದು ದಿಗನಳಿಂದ ಜ್ವರದಿಂದ ಬಳಲುತ್ತಿದ್ದು ತೀವ್ರ ಸುಸ್ತಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಯುವಕರು ಜೋಲಿಯಲ್ಲಿ ಈ ವೃದ್ದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂತಹ ಯಾತನಾಮಯ ಬದುಕನ್ನು ಇಲ್ಲಿನ ಜನರು ನಡೆಸಬೇಕಾಗಿದೆ. ಇದೊಂದೇ ಗಂಭೀರ ಸಮಸ್ಯೆಯಲ್ಲ, ಜೊತೆಗೆ ಇಲ್ಲಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಜಲಜೀವನ್ ಮಿಷನ್ ನಿಂದ ಪೈಪ್ ಲೈನ್ ಅಳವಡಿಸಿದಿದ್ದಾರೆ ಅದರಲ್ಲಿ ನೀರು ಬರಲ್ಲ. ಎರಡು ಕಿಲೋ ಮೀಟರ್ ದೂರದಲ್ಲಿ ಗುಂಡಿಯೊಂದಕ್ಕೆ ಸಿಮೆಂಟ್ ರಿಂಗುಗಳನ್ನು ಅಳವಡಿಸಿ ತೆರೆದ ಬಾವಿ ರೀತಿಯಲ್ಲಿ ಮಾಡಲಾಗಿದೆ.
ಇದೇ ನಮ್ಮ ಬದುಕಿಗೆ ಜೀವಜಲವಾಗಿದೆ. ನಾವೆಲ್ಲರೂ ಕೂಲಿ ಕೆಲಸ ಮಾಡಿ ಬದುಕುತ್ತಿರುವವರಾಗಿದ್ದು, ಕೂಲಿ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿರುತ್ತದೆ. ಅಷ್ಟೊತ್ತಿಗೆ ಕತ್ತಲೆ ಆವರಿಸಿರುತ್ತದೆ. ಮಿತಿಮೀರಿ ಕಾಡಾನೆಗಳ ಕಾಟವಿದ್ದು ಆ ಜೀವಭಯದಲ್ಲೇ ಎರಡು ಕಿಲೋಮೀಟರ್ ತೆರಳಿ ಗುಂಡಿಯಿಂದ ನೀರು ತರಬೇಕು. ನಮ್ಮ ಮಕ್ಕಳನ್ನು ಎರಡು ಕಿಲೋಮೀಟರ್ ಕಾಡಿನಲ್ಲಿ ಆನೆಗಳ ಆತಂಕದಲ್ಲಿ ಶಾಲೆಗೆ ಕರೆದೊಯ್ಯಬೇಕು ಎನ್ನುವುದು ಮಹಿಳೆ ಚೈತ್ರಾ ಅವರ ಆತಂಕ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಜೇನುಕುರುಬರ ಮುಖಂಡ ಕಾಳಿಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!
36 ಕುಟುಂಬಗಳು ಅರಣ್ಯ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ 7 ಕುಟುಂಬಗಳಿಗೆ ಮಾತ್ರವೇ ಒಂದು ಎಕರೆ, ಅರ್ಧ ಎಕರೆಯಂತೆ ಭೂಮಿ ನೀಡಿದ್ದಾರೆ. ಉಳಿದವರಿಗೆ ಭೂಮಿ ಮಂಜೂರು ಮಾಡಿಲ್ಲ ಎನ್ನುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದು ಎಷ್ಟು ಬಾರಿ ಇಲ್ಲಿನ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಬಂದಾಗ ಮತ ಕೇಳಲು ಬರುವ ಶಾಸಕರು, ಆ ಬಳಿಕ ಇತ್ತ ತಿರುಗಿ ನೋಡುವುದಿಲ್ಲ ಎನ್ನುವುದು ಇಲ್ಲಿಯ ಜನರ ಆಕ್ರೋಶ. ಇನ್ನಾದರೂ ಹಾಡಿಗೆ ಕನಿಷ್ಠ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸ್ತಾರಾ ಕಾದು ನೋಡಬೇಕಾಗಿದೆ.