ಬೆಂಬಲ ಬೆಲೆಗಾಗಿ ಕಬ್ಬು ಬೆಳೆಗಾರರ ಹೋರಾಟ: ಬೇಡಿಕೆಯ ಅರ್ಧ ಬೆಲೆ ನಿಗದಿ, ತಪ್ಪದ ಆಕ್ರೋಶ
ಸಾಕಷ್ಟು ಹೋರಾಟ ಹಾಗೂ ಚರ್ಚೆಯ ಬಳಿಕ ಅಧಿಕಾರಿಗಳು ಕೊಂಚ ಸಮಾಧಾನ ಮಾಡುವಂತಹ ವ್ಯವಸ್ಥೆ ಮಾಡಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ನ.09): ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಳೆದ 42 ದಿನಗಳಿಂದ ಕಬ್ಬು ಬೆಳೆಗಾರ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಇದೀಗ ಒಂದು ಹಂತದ ಬ್ರೇಕ್ ಸಿಕ್ಕಂತಾಗಿದೆ. ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ರೈತರು ಸಾಕಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎನ್ನುವ ಆಕ್ರೋಶವನ್ನು ರೈತರು ಹೊರಹಾಕುತ್ತಿದ್ದಾರೆ. ಸ್ವತಃ ಸಕ್ಕರೆ ನಿರ್ದೇಶನಾಲಯದ ಆಯುಕ್ತರೇ ಆಗಮಿಸಿ ಮೂರನೇ ಬಾರಿಗೆ ರೈತರ ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದು, ಅಂತಿಮ ಸಮಾಧಾನಕರ ಬೆಲೆ ನಿಗದಿಯಾಗಿರುವುದರಿಂದ ಕಬ್ಬು ಬೆಳೆಗಾರರು ಕೊಂಚ ಸಮಾಧಾನವಾಗಿದ್ದಾರಾದ್ರೂ, ತಮ್ಮ ಹೋರಾಟ ಕೈಬಿಡಲ್ಲ ಎಂದು ಎಚ್ಚರಿಸಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಇರೋದು ಹಳಿಯಾಳ ತಾಲೂಕಿನಲ್ಲಿ. ಇಲ್ಲಿ ಇಐಡಿ ಪ್ಯಾರಿ ಎನ್ನುವ ಸಕ್ಕರೆ ಕಾರ್ಖಾನೆಯಿದ್ದು, ರೈತರು ಬೆಳೆದ ಕಬ್ಬಗಳನ್ನು ಈ ಸಕ್ಕರೆಗೆ ಪೂರೈಸಲಾಗುತ್ತದೆ. ಕಳೆದ ಬಾರಿ ಟನ್ ಗೆ 2592 ರೂ. ಹಣವನ್ನು ಖಾರ್ಕಾನೆಯಿಂದ ನಿಗದಿ ಮಾಡಲಾಗಿತ್ತಾದ್ರೂ, ಈ ಬಾರಿ ಕೇವಲ 2371 ರೂ. ಹಣ ನಿಗದಿ ಮಾಡಲಾಗಿದೆ. ಇದರಿಂದ ರೈತರಿಗೆ ಕಷ್ಟವಾಗಿದ್ದು, ಬೆಂಬಲ ಬೆಲೆ ಹೆಚ್ಚಿಸುವಂತೆ ಕಳೆದ 42 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ ಸ್ವತಃ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ನಿನ್ನೆ(ಮಂಗಳವಾರ) ಕಾರವಾರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಹಾಗೂ ರೈತರ ಸಭೆಯನ್ನು ನಡೆಸಿದ್ದಾರೆ.
UTTARA KANNADA NEWS: ಶಿರಸಿ ನಗರದಲ್ಲಿ ಗುಡ್ಡವಾಗಿ ಮಾರ್ಪಟ್ಟ ತ್ಯಾಜ್ಯ ರಾಶಿ!
ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಕೇಳಿ ಕೊನೆಗೂ 150 ರೂ. ಮಾತ್ರ ಹೆಚ್ಚಳ ಮಾಡುವುದಾಗಿ ನಿರ್ಧರಿಸಲಾಗಿದೆ. ಇದು ರೈತರ ಕಣ್ಣನ್ನು ಇನ್ನಷ್ಟು ಕೆಂಪಾಗುವಂತೆ ಮಾಡಿದ್ದು, ಸದ್ಯಕ್ಕೆ ಸಮಾಧಾನಕರ 150ರೂ. ಮಾತ್ರ ನೀಡಲು ನಿರ್ಧಾರವಾಗಿದೆ. 42 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ನಮ್ಮ ಬೇಡಿಕೆ ಸರ್ಕಾರ ಈಡೇರಿಸುತ್ತಿಲ್ಲ. ರೈತರ ಹಾಗೂ ಸ್ವಾಮೀಜಿಗಳ ಬೆಳೆದುಬಂದ ಸರಕಾರ ಇದೀಗ ರೈತರ ಹಾಗೂ ಸ್ವಾಮೀಜಿಗಳ ಹೋರಾಟಕ್ಕೆ ಬೆಲೆಯಿಲ್ಲದಂತೆ ಮಾಡುತ್ತಿದೆ ಎಂದು ರೈತ ಮುಖಂಡ ನಾಗೇಂದ್ರ ಜಿವೋಜಿ, ಆರೋಪಿಸಿದ್ದಾರೆ.
ಅಂದಹಾಗೆ, ಕೋವಿಡ್ ನಂತರ ಬೆಲೆ ಏರಿಕೆಯಾಗಿದ್ದು, ಟನ್ ಗೆ 2800 ರೂ. ಹಣವನ್ನು ನೀಡುವಂತೆ ಕಬ್ಬು ಬೆಳೆಗಾರರು ಆಗ್ರಹಿಸಿದ್ದರು. ಇದಕ್ಕೆ ಕಾರ್ಖಾನೆಯವರು ಒಪ್ಪದ ಕಾರಣ ಕಳೆದ ಬಾರಿಯತೆ 2592 ರೂ. ಹಣವನ್ನಾದರೂ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಕಾರ್ಖಾನೆಯವರು ಮಾತ್ರ ಒಪ್ಪಿರಲಿಲ್ಲ. ಸಾಕಷ್ಟು ಹೋರಾಟ ಹಾಗೂ ಚರ್ಚೆಯ ಬಳಿಕ ಇದೀಗ ಬಾಕಿಯಿದ್ದ ಹಣದಲ್ಲಿ ಕೇವಲ150ರೂ.ವರೆಗೆ ಮಾತ್ರ ನೀಡಲು ಅಂತಿಮವಾಗಿ ನಿರ್ಧರಿಸಲಾಗಿದ್ದು, ರೈತರು ಇಷ್ಟಾದರೂ ಬಂತಲ್ಲ ಅಂತಾ ಕೊಂಚ ಸಮಾಧಾನ ಪಡುವಂತಾಗಿದೆ. ಇನ್ನು ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಬೆಂಬಲ ಬೆಲೆ ಹೆಚ್ಚಿಸಬೇಕಿತ್ತು. ಆದರೆ, ರೈತರ ಹೋರಾಟವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ಮಾಡುತ್ತಿದ್ದು, ಇದು ರೈತ ವಿರೋಧಿ ಸರಕಾರ ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟಿ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಹೋರಾಟ ಹಾಗೂ ಚರ್ಚೆಯ ಬಳಿಕ ಅಧಿಕಾರಿಗಳು ಕೊಂಚ ಸಮಾಧಾನ ಮಾಡುವಂತಹ ವ್ಯವಸ್ಥೆ ಮಾಡಿದ್ದಾರೆ. ಆದರೂ, ರೈತರು ಮತ್ತೆ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದು, ತಮ್ಮ ಬೇಡಿಕೆ ಈಡೇರುವರೆಗೂ ಬಿಡುವುದಿಲ್ಲ ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಸ್ವತಃ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಹಳಿಯಾಳಕ್ಕೆ ಭೇಟಿ ನೀಡಿ ಅಂತಿಮ ಹಂತದ ಮಾತುಕತೆ ನಡೆಸಲು ನಿರ್ಧರಿಸಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದು ಕಾದು ನೋಡಬೇಕಷ್ಟೇ.