37ನೇ ದಿನಕ್ಕೆ ಕಾಲಿಟ್ಟ ಕಬ್ಬುಬೆಳೆಗಾರರ ಹೋರಾಟ; ಬೇಡಿಕೆಗೆ ಸ್ಪಂದಿಸದ ಸರ್ಕಾರ
ಕಬ್ಬು ಬೆಳೆಗಾರ ರೈತರು ತಮ್ಮ ವೈಜ್ಞಾನಿಕ ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ಅಹೋರಾತ್ರಿ ಹೋರಾಟ 37ನೇ ದಿನಕ್ಕೆ ತಲುಪಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಆಡಳಿತ ಸೌಧದ ಮುಂಭಾಗ ಧಾರವಾಡದ ಶ್ರೀ ಕ್ಷೇತ್ರ ದ್ವಾರಪುರಂನ ಶ್ರೀ ಪರಮಾತ್ಮ ಮಹಾಸಂಸ್ಥಾನದ ಪೀಠಾಧೀಶ್ವರ ಡಾ.ಪರಮಾತ್ಮಾಜೀ ಮಹಾರಾಜ್ ಉಪವಾಸ ಸತ್ಯಾಗ್ರಹ ನಡೆದಿದೆ.
ಭಟ್ಕಳ (ನ.2) : ಕಬ್ಬು ಬೆಳೆಗಾರ ರೈತರು ತಮ್ಮ ವೈಜ್ಞಾನಿಕ ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ಅಹೋರಾತ್ರಿ ಹೋರಾಟ 37ನೇ ದಿನಕ್ಕೆ ತಲುಪಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಆಡಳಿತ ಸೌಧದ ಮುಂಭಾಗ ಧಾರವಾಡದ ಶ್ರೀ ಕ್ಷೇತ್ರ ದ್ವಾರಪುರಂನ ಶ್ರೀ ಪರಮಾತ್ಮ ಮಹಾಸಂಸ್ಥಾನದ ಪೀಠಾಧೀಶ್ವರ ಡಾ.ಪರಮಾತ್ಮಾಜೀ ಮಹಾರಾಜ್ ಅವರ ಮುಂದಾಳತ್ವದಲ್ಲಿ ನಡೆದಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಇಂದಿಗೆ 6 ದಿನ ಪೂರ್ಣಗೊಳಿಸಿದೆ.
ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೆ ಸಿಎಂ ಮನೆ ಎದುರು ಧರಣಿ: ಮುತಾಲಿಕ್
ಕಳೆದ 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಿರತವಾಗಿರುವ ಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡಿತ್ತು. ಈ ಕಾರಣದಿಂದ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಏನಾದರೂ ಅನಾಹುತ ಸಂಭವಿಸಬಾರದು ಎಂಬ ಉದ್ದೇಶದಿಂದ ಪೋಲಿಸರು ಹರಸಾಹಸ ಪಟ್ಟು ಡಾ.ಪರಮಾತ್ಮಾಜಿ ಮಹಾರಾಜ್ ಮತ್ತು ಇತರರನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆದರೆ ಹಠ ಬಿಡದ ಡಾ.ಪರಮಾತ್ಮಾಜಿ ಮಹಾರಾಜ್ ಅವರು ಕೆಲವೇ ಗಂಟೆಗಳಲ್ಲಿ ಮತ್ತೆ ಹೋರಾಟದ ಸ್ಥಳಕ್ಕೆ ಆಗಮಿಸಿ ಹೋರಾಟ ಮುಂದುವರೆಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಹಳಿಯಾಳಕ್ಕೆ ಭೇಟಿ ನೀಡಿದ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠ, ಭವಾನಿ ಪೀಠದ ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮಿಜಿ ಅವರು ಮಾತನಾಡಿ, ರೈತರ ಐತಿಹಾಸಿಕ ಸುಧೀರ್ಘ ಹೋರಾಟಕ್ಕೂ ಬೆಲೆ ನೀಡದೆ, ಅವರ ಬೇಡಿಕೆ ಈಡೇರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ. ನಾನು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬಳಿಕ ಉಪವಾಸ ನಿರತ ಡಾ.ಪರಮಾತ್ಮಾಜಿ ಮಹಾರಾಜರು, ಸೋಗಲ ಕ್ಷೇತ್ರದ ಜ್ಞಾನಾನಂದ ಸ್ವಾಮೀಜಿ, ಕಬ್ಬು ಬೆಳೆಗಾರ ಸಂಘದ ಹಿರಿಯ ಮುಖಂಡ ನಾಗೇಂದ್ರ ಜಿವೊಜಿ, ರೈತ ಹಿತರಕ್ಷಣಾ ಸಮಿತಿ ಹಳಿಯಾಳ ತಾಲೂಕಾ ಅಧ್ಯಕ್ಷ ಅಪ್ಪಾರಾವ ಪುಜಾರಿ ಅವರೊಂದಿಗೆ ಚರ್ಚಿಸಿದರು.
ರೈತರ ಈ ಹೋರಾಟಕ್ಕೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪತ್ರ ಮುಖೇನ ಬೆಂಬಲ ಕೋರಿದರೆ, ಗುಂಡೊಳ್ಳಿ ಗ್ರಾಮದ ಸಂತ ಶಿಶುನಾಳ ಮಹಾರಾಜ ಮಠದ ನಾರಾಯಣ ಕಶೀಲಕರ ಸ್ವಾಮೀಜಿ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಹಾಗೂ ಪರಿಸರ ಹೋರಾಟಗಾರ ಅನಂತ ಹೆಗಡೆ ಆಶಿಸರ, ವನವಾಸಿ ಕಲ್ಯಾಣ ಆಶ್ರಮದ ರಾಜ್ಯ ಹಿತರಕ್ಷಣಾ ಸಮಿತಿ ಪ್ರಮುಖ ದೊಂಡು ಪಾಟೀಲ್, ಯಲ್ಲಾಪುರ ನಂದೊಳ್ಳಿಯ ಗ್ರಾಪಂ ಅಧ್ಯಕ್ಷ ಟಿಆರ್ ಹೆಗಡೆ ಅವರು ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಘೋಷಿಸಿದರು.
ಮತ್ತೆ ಬೀದಿಗಳಿದ ಕಬ್ಬು ಬೆಳೆಗಾರರು: ಬೆಳಗಾವಿಯ ಸುವರ್ಣಸೌಧ ಮುತ್ತಿಗೆಗೆ ವಿಫಲ ಯತ್ನ..!
ಒಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬುಗಳನ್ನು ಕಟಾವು ಮಾಡದೆ ಗದ್ದೆಯಲ್ಲೇ ಬಿಟ್ಟು ಕಬ್ಬು ಬೆಳೆಗಾರ ರೈತರು ನಡೆಸುತ್ತಿರುವ ಹೋರಾಟ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದರಲ್ಲಿ ಎರಡು ಮಾತಿಲ್ಲ.