ಎಕರೆಗೆ 4 ಕೋಟಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಎಕರೆಗೆ ₹ 3 ಲಕ್ಷ ಪರಿಹಾರ ನೀಡಲು ಪ್ರಸ್ತಾವಿಸಲಾಗಿತ್ತು. ಆದರೆ, ಅಲ್ಲಿನ ರೈತರಿಗೆ ಬೆಳೆ ಪರಿಹಾರವಾಗಿ ವರ್ಷಕ್ಕೆ ₹3.60 ಲಕ್ಷಗಳನ್ನು ಸರ್ಕಾರವೇ ನೀಡಿದೆ. ಹಾಗಾಗಿ ರೈತರ ಕೋರಿಕೆಯಂತೆ ಎಕರೆಗೆ ₹4 ಕೋಟಿ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ(ನ.16): ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಜಮೀನು ನೀಡಿರುವ ಹಲಗಾ ಗ್ರಾಮದ ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆ ನಡೆಸಿ, ರೈತರ ಅಹವಾಲು ಆಲಿಸಿದ ನಂತರ ಈ ವಿಷಯ ತಿಳಿಸಿದ ಅವರು, ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಎಕರೆಗೆ ₹ 3 ಲಕ್ಷ ಪರಿಹಾರ ನೀಡಲು ಪ್ರಸ್ತಾವಿಸಲಾಗಿತ್ತು. ಆದರೆ, ಅಲ್ಲಿನ ರೈತರಿಗೆ ಬೆಳೆ ಪರಿಹಾರವಾಗಿ ವರ್ಷಕ್ಕೆ ₹3.60 ಲಕ್ಷಗಳನ್ನು ಸರ್ಕಾರವೇ ನೀಡಿದೆ. ಹಾಗಾಗಿ ರೈತರ ಕೋರಿಕೆಯಂತೆ ಎಕರೆಗೆ ₹4 ಕೋಟಿ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು. ಜತೆಗೆ ಆ ಸಂದರ್ಭದಲ್ಲಿ ರೈತರಿಗೆ ನೀಡಲಾಗಿರುವ ಎಲ್ಲ ಭರವಸೆಗಳನ್ನೂ ಈಡೇರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಂದೇ ಭಾರತ್ ಎಕ್ಸಪ್ರೆಸ್ ರೈಲು ಬೆಳಗಾವಿಗೆ ವಿಸ್ತರಣೆ
ರೈತರಿಗೆ ಯಾವುದೇ ಕಾರಣದಿಂದ ಅನ್ಯಾಯವಾಗಬಾರದು. ಈ ಹಿಂದಿನ ಸಭೆಗಳ ನಡಾವಳಿಗಳನ್ನು ತರಿಸಿಕೊಂಡು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ. ರೈತರಿಂದಲೂ ಅಹವಾಲು ಆಲಿಸಲಾಗಿದೆ. 2017 ರಲ್ಲಿ ಆಗಿನ ನಗರಾಭಿವೃದ್ಧಿ ಸಚಿವರು, ಸರ್ಕಾರದ ಜತೆಗೆ ಮಹಾನಗರ ಪಾಲಿಕೆಯಂದಲೂ ಪರಿಹಾರ ನೀಡುವಂತೆ ಆದೇಶಿಸಿದ್ದರು. ಹಾಗಾಗಿ ಹೊಸದಾಗಿ ಪ್ರಸ್ತಾವನೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಆದಷ್ಟು ಬೇಗ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಮತ್ತು ಮಹಾನಗರ ಪಾಲಿಕೆಯಿಂದಲೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ರೈತರಿಗೆ ಭರವಸೆ ನೀಡಿದರು.
ರೈತರಿಗೆ ಹೆಚ್ಚಿನ ಪರಿಹಾರ, ಉದ್ಯೋಗ ಮತ್ತು ಮಳಿಗೆ ನೀಡುವ ಭರವಸೆಯನ್ನು ಆಗಿನ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದರು. ಆದರೆ, ರೈತರಿಗೆ ಅನ್ಯಾಯವಾಗಿದೆ. ಮುಂದೆ ಯಾವುದೇ ಕಾರಣದಿಂದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸರೂ ಸಹ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಚಿವೆ ಹೆಬ್ಬಾಳಕರ್ ಸೂಚಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈ ಹಿಂದಿನ ಸಭೆಗಳ ನಡಾವಳಿಗಳನ್ನು ಪರಿಶೀಲಿಸಿ ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ಗ್ರಾಮೀಣ ಎಸಿಪಿ ವಿ.ಗಿರೀಶ್, ಪೊಲೀಸ್ ಇನಸ್ಪೆಕ್ಟರ್ ತುಕಾರಾಮ ನೀಲಗಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.