ಮೈಸೂರು : ವಿದ್ಯಾರ್ಥಿಗಳಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿರಿ
ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅಭಿಮಾನದ ಕಿಚ್ಚನ್ನು ಹಚ್ಚುವ ಕಾರ್ಯವನ್ನು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಘಟಕಗಳು ಮಾಡಬೇಕಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಹುಣಸೂರು (ನ.01): ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅಭಿಮಾನದ ಕಿಚ್ಚನ್ನು ಹಚ್ಚುವ ಕಾರ್ಯವನ್ನು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಘಟಕಗಳು ಮಾಡಬೇಕಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕನ್ನಡ (Kannada) ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ, ಎಸ್ಸೆಸ್ಸೆಲ್ಸಿ (SSLC) ಮತ್ತು ಪಿಯುಸಿಯ ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಭಾಷೆಯನ್ನು ಪಂಪ ರನ್ನರಾದಿಯಾಗಿ ಕುವೆಂಪು, ಕಾರಂತರು ಗಟ್ಟಿಯಾಗಿ, ಆಳವಾಗಿ ಮತ್ತು ಅರ್ಥಪೂರ್ಣವಾಗಿ ಬೆಳೆಸಿದ್ದಾರೆ. ಈಗ ನಾವು ಮಾಡಬೇಕಿರುವುದು ಕೇವಲ ಭಾಷೆಯನ್ನು ಉಳಿಸುವುದು ಮಾತ್ರ. ಸಭೆ ಸಮಾರಂಭಗಳು, ಸಾಹಿತ್ಯ ಸಮ್ಮೇಳನಗಳಿಂದ ಭಾಷೆ ಬೆಳವಣಿಗೆ ಸಾಧ್ಯವಿಲ್ಲ. ಕನ್ನಡ ಭಾಷೆಯ ಕಲಿಯುವಿಕೆ ಆಸಕ್ತಿದಾಯಕವಾಗಬೇಕು. ಹಾಗಾಗಬೇಕೆಂದಲ್ಲಿ ಶಾಲಾ, ಕಾಲೇಜುಗಳಲ್ಲಿ ವ್ಯಾಕರಣ, ಪ್ರಬಂಧ ಸೇರಿದಂತೆ ಕನ್ನಡ ಭಾಷೆಯ ಅರ್ಥಪೂರ್ಣ ಕಲಿಕೆ ಆಗಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಿಚ್ಚನ್ನು ವಿದ್ಯಾರ್ಥಿಗಳಲ್ಲಿ ತುಂಬಿದಲ್ಲಿ ಭವಿಷ್ಯದಲ್ಲಿ ಕನ್ನಡ ಭಾಷೆ ತನ್ನ ಈ ಹಿಂದಿನ ಸುವರ್ಣ ಯುಗವನ್ನು ಕಾಣಲು ಸಾಧ್ಯವೆಂದರು.
ಜವಾಬ್ದಾರಿಯಿಂದ ಹಿಂದೆ ಸರಿಯದಿರಿ
ಕನ್ನಡಿಗರ ಅಸ್ಮಿತೆಯಾಗಿರುವ ಕಸಾಪ ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಜವಾಬ್ದಾರಿ ಎಂದು ಪರಿಗಣಿಸಿ ದುಡಿಯಬೇಕು. ಪ್ರತಿಯೊಬ್ವ ಶ್ರೀಸಾಮಾನ್ಯನಿಗೆ ಕನ್ನಡ ಹತ್ತಿರವಾಗಬೇಕು. ವಿಶೇಷ ದಿನಗಳಲ್ಲಿ ಕೋಟಿ ಕಂಠ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಬದಲಾಗಿ ಮೂಲಬೇರುಗಳನ್ನು ಭದ್ರಗೊಳಿಸುವ ಕಾರ್ಯದಿಂದ ಮಾತ್ರ ಭಾಷೆ ಬೆಳೆಯಲು ಸಾದ್ಯವೆನ್ನುವುದು ನನ್ನ ಅಭಿಪ್ರಾಯವೆಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ತಾಲೂಕು ಘಟಕವು ಯುವಕರು ಮತ್ತು ಅನುಭವಿಗಳ ಸಮ್ಮಿಳಿತದಿಂದ ಕೂಡಿದ್ದು ಕನ್ನಡದ ತೇರನ್ನು ಎಳೆಯಲು ಎಲ್ಲರೂ ಒಂದಾಗಿ ದುಡಿಯೋಣ. ಜಿಲ್ಲಾಘಟಕ ತಾಲೂಕಿನ ಕನ್ನಡ ಪರ ಕೆಲಸಕ್ಕೆ ಎಂದಿಗೂ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ತಾಲೂಕು ಅಧ್ಯಕ್ಷ ಎಚ್.ಕೆ. ಮಹದೇವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ, ಮಾಜಿ ಅಧ್ಯಕ್ಷರಾದ ಎಂ. ಚಂದ್ರಶೇಖರ್, ಮಾನಸ ನೂತನ ತಂಡಕ್ಕೆ ಶುಭ ಕೋರಿದರು. ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರೇವಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಕೆ. ಸಂತೋಷ್‌ಕುಮಾರ್, ಕಸಾಪ ಮಾಜಿ ಅಧ್ಯಕ್ಷರಾದ ನಂಜಮ್ಮ, ಎಸ್. ಜಯರಾಂ, ವಿ.ಪಿ. ಸಾಯಿನಾಥ್, ಎಸ್.ಉಮಾಪತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ ಇದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.
ಸಿಎಂ ಹಾಡುವ ಮೂಲಕ ಕನ್ನಡದ ಕಿಚ್ಚು ಹಚ್ಚುತ್ತಿದ್ದಾರೆ
ಗುಂಡ್ಲುಪೇಟೆ : ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಾಡುವ ಮೂಲಕ ಕನ್ನಡದ ಕಿಚ್ಚನ್ನು ಮತ್ತೆ ಹಚ್ಚಿದ್ದಾರೆ ಎಂದು ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಹೇಳಿದರು.
ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆ ಹಾಗೂ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡಾಂಬೆ ನೆನಪು ಸದಾ ಇರಲಿ ಎಂದರು.
ಸ್ವಾತಂತ್ರ್ಯ ಬಂದ ಬಳಿಕ ರಾಜ್ಯದಲ್ಲಿ ಮೈಸೂರು ರಾಜ್ಯ, ಮುಂಬೈ ಕರ್ನಾಟಕ, ಮದ್ರಾಸ್ ರಾಜ್ಯ ಎನ್ನುತ್ತಿದ್ದರು. 1956 ರ ನ.1 ರಂದು ಕನ್ನಡ ಏಕೀಕರಣಗೊಂಡು ಕರ್ನಾಟಕ ಎಂದಾಯಿತು ಎಂದರು.
ರಾಜ್ಯದಲ್ಲಿ ಕನ್ನಡ ಭಾಷೆಯೇ ಪ್ರಧಾನ ಆದರೂ ರಾಜ್ಯದಲ್ಲಿ ಪ್ರಾಂತದಲ್ಲೂ ಕನ್ನಡ ಭಾಷೆಯಲ್ಲೂ ವಿವಿಧತೆ ಇದೆ. ಇದರ ಜೊತೆಗೆ ಕನ್ನಡ ಭಾಷೆಗೆ ದೇಶ, ವಿದೇಶಗಳಲ್ಲಿ ಕನ್ನಡ ಭಾಷೆ ಗುನುಗುತ್ತಾರೆ ಎಂದರು.
ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸುರೇಶ್ ಮುಖ್ಯ ಭಾಷಣದಲ್ಲಿ ಕನ್ನಡ, ನಾಡು, ನುಡಿ, ನೆಲ, ಜಲ ಕುರಿತು ಸುಧೀರ್ಘ ಮಾತನಾಡಿದರು.
ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ ಕನ್ನಡ ಭಾಷೆಗೆ ತಮ್ಮದೇ ಆದ ಹಿರಿಮೆಯಿದೆ. ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸುವ ಕೆಲಸ ಯುವಕರಲ್ಲಿ ಆಗಬೇಕಿದೆ ಎಂದರು.
ಸನ್ಮಾನ: ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮೋದ್‌ಆರಾಧ್ಯ, ದೊಡ್ಡಪ್ಪಾಜಿ, ರಮೇಶ್, ಮಂಜು, ಅನುಷಾ, ಮದನ್ ಕುಮಾರ್‌ರನ್ನು ಶಾಸಕರು ಸನ್ಮಾನಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಸಿ.ಜಿ.ರವಿಶಂಕರ್, ಪುರಸಭೆ ಉಪಾಧ್ಯಕ್ಷ ದೀಪಿಕಾ ಅಶ್ವಿನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಸದಸ್ಯರಾದ ರಮೇಶ್, ಜಿ.ಎಸ್.ಕಿರಣ್‌ಗೌಡ, ಪಿ.ಶಶಿಧರ್, ಅಣ್ಣಯ್ಯಸ್ವಾಮಿ, ಮಹದೇವಮ್ಮ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಸೇರಿದಂತೆ ಕನ್ನಡಪರ ಸಂಘಟನೆಗಳ ಹಲವರು ಇದ್ದರು.