NRC ವಿರೋಧಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳ ಆಕ್ರೋಶ
ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ| ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು| ಸಮುದಾಯವನ್ನು ಹೊರಗಿಟ್ಟು ಈ ರೀತಿಯ ಕಾಯ್ದೆ ರೂಪಿಸಿರುವುದು ಖಂಡನಾರ್ಹ
ವಿಜಯಪುರ(ಜ.19): ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಗಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ‘ರಾಷ್ಟ್ರೀಯ ಪೌರತ್ವ ಕಾಯ್ದೆ ಹಿಂದಕ್ಕೆ ಪಡೆಯಿರಿ’ ಎಂಬ ನಾಮಫಲಕಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಆಗಮಿಸಿ ಭಾರಿ ಪ್ರತಿಭಟನೆ ನಡೆಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ಸಂದರ್ಭದಲ್ಲಿ ಕಪ್ಪು ಬಣ್ಣದ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ವಿಜಯಪುರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇದಲ್ಲದೆ ಎನ್‌ಆರ್‌ಸಿ ವಿರುದ್ಧ ಘೋಷಣೆಗಳ ಹೊತ್ತು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಯುವ ನ್ಯಾಯವಾದಿ ಸಮದ್ ಸುತಾರ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಒಂದು ಸಮುದಾಯವನ್ನು ಹೊರಗಿಟ್ಟು ಈ ರೀತಿಯ ಕಾಯ್ದೆ ರೂಪಿಸಿರುವುದು ಖಂಡನಾರ್ಹ. ಇನ್ನು ರಾಷ್ಟ್ರೀಯ ಪೌರತ್ವ ನೋಂದಣಿಯೂ ಅವೈಜ್ಞಾನಿಕ. ಈ ನೋಂದಣಿ ಕಾರ್ಯಕ್ಕೆ ಕೋಟ್ಯಂತರ ರುಪಾಯಿ ಬೇಕಾಗುತ್ತದೆ. ಮೊದಲೇ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೋಟಿ ಕೋಟಿ ಸುರಿದು ಒಂದು ಸಮುದಾಯದವರನ್ನೇ ಟಾರ್ಗೆಟ್ ಮಾಡುವ ದೃಷ್ಟಿಯಿಂದ ಎನ್‌ಆರ್‌ಸಿ ಅನುಷ್ಠಾನಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಪ್ರತಿಭಟನಾನಿರತ ಅನೇಕ ವಿದ್ಯಾರ್ಥಿಗಳು ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಪೌರತ್ವ ನಿಷೇಧ ಕಾಯ್ದೆ ಹಾಗೂ ಎನ್‌ಆರ್‌ಸಿ ಕಾಯ್ದೆ ಹಿಂದಕ್ಕೆ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರ ಈ ನೂತನ ತಿದ್ದುಪಡಿ ಕಾಯ್ದೆ ಮೂಲಕ ದ್ವೇಷ ಮನೋಭಾವ ಬೆಳೆಸುತ್ತಿದೆ. ದೇಶದ ಏಕತೆಯನ್ನೇ ಛಿದ್ರ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಸೋಹೆಲ್ ಮುಲ್ಲಾ, ಸಮೀರ ಕೊಕಟನೂರ, ಅಭಿಷೇಕ ಶಿರಗೊಂಡ, ವಿಕಾಸ ಜಾಧವ, ಸಂದೀಪ ರಾಠೋಡ, ಜುಬೇರ ಗಂಗನಹಳ್ಳಿ, ಶೋಯಬ್ ಬಗಲಿ, ಇರ್ಷಾದ್ ಗುಲಬರ್ಗಾ, ಅಬೂಬಕರ್ ಜಹಾಗೀರದಾರ, ವಸೀಂ ಶೇಖ, ಅಬರಾರ್ ಪಠಾಣ, ನದೀಮ್ ಮೀರಜಕರ್, ರಾಹುಲ್ ಶಹಾಪೂರ, ಅವಿನಾಶ, ಗೌಸ್ ರಿಸಾಲದಾರ ಮುಂತಾದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.