ಚಾಮರಾಜನಗರ(ಫೆ.01): ವಿದ್ಯಾರ್ಥಿಗಳಿಗೆ ಓದು ಮುಗಿಯುವ ತನಕ ಲವ್‌ ಮಾಡುವ ಅರ್ಹತೆ ಇಲ್ಲ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಅನಿತಾ ಬಿ. ಹದ್ದಣ್ಣನವರ್‌ ಹೇಳಿದ್ದಾರೆ.

ನಗರದ ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಮುಗಿಯುವ ತನಕ ವಿದ್ಯಾಭ್ಯಾಸದ ಕಡೆಗೆ ಗಮನಕೊಡಬೇಕು. ವಿದ್ಯಾರ್ಥಿಗಳು ಲವ್‌ ಎಂಬ ಆಕರ್ಷಣೆಗೆ ಒಳಗಾಗಿ ಹುಡುಗನ ಜೊತೆ ಓಡಿಹೋಗುವುದನ್ನು ಮಾಡಬಾರದು. ಓಡಿ ಹೋದರೆ ಖಂಡಿತ ಬದುಕು ಅತಂತ್ರವಾಗಲಿದೆ ಎಂದಿದ್ದಾರೆ.

ಜೀವನ ಬಲಿಕೊಡಬೇಡಿ:

ತಂದೆ ತಾಯಿ ನಿಮ್ಮನ್ನು ಓದುವುದಕ್ಕೆ ಕಳುಹಿಸಿರುವುದು ಮಕ್ಕಳ ಬದುಕು ಚೆನ್ನಾಗಿರಬೇಕು ಎಂಬ ಜವಾಬ್ದಾರಿಯಿಂದ ನಿಮಗೆ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅತುರದಿಂದ ಲವ್‌ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ. ಲವ್‌ ಮಾಡಿ ಓಡಿಹೋದರೆ ಗಂಡನ ಮನೆಯವರು ಮನೆಗೆ ಸೇರಿಸೋಲ್ಲ, ಹೆಣ್ಣಿನ ಮನೆಯವರು ಮನೆಗೆ ಸೇರಿಸೋದಿಲ್ಲ. ಈ ಸಂದರ್ಭದಲ್ಲಿ ಇಬ್ಬರು ಅತಂತ್ರರಾಗಿ ಬೇರೆ ಬೇರೆಯಾದಾಗ ಅತ್ಯಾಚಾರ, ಕಿಡ್ನಾಪ್‌ ಪ್ರಕರಣಗಳನ್ನು ದಾಖಲು ಮಾಡಿ ಜೀವನವನ್ನು ಬಲಿಕೊಡುವುದು ಮಾಡಬೇಡಿ ಎಂದು ಸಲಹೆ ನೀಡಿದರು.

ಟ್ರಾಫಿಕ್‌ ಅರಿವಿರಲಿ:

ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಒಳ್ಳೆ ತಿಳುವಳಿಕೆ ಇರಬೇಕು. 18 ವರ್ಷ ತುಂಬುವ ಮೊದಲೆ ಬೈಕ್‌ ಚಾಲನೆ ಮಾಡುವುದು ಅಪರಾಧ ಹಾಗೂ ಅಪಾಯಕಾರಿಯಾಗಿರುತ್ತದೆ. ಬೈಕ್‌ ಓಡಿಸುವುದು ತಪ್ಪಲ್ಲ ಆದರೆ ಲೈಸೆನ್ಸ್‌ ಪಡೆದು ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸುವುದು ತಪ್ಪಾಗುತ್ತದೆ. ಟ್ರಾಫಿಕ್‌ ಅರಿವು ವಿದ್ಯಾರ್ಥಿಗಳಿಗೆ ತುಂಬ ಮುಖ್ಯ ಎಂದರು.

ಪಠ್ಯೇತರ ಚಟುವಟಿಕೆಯಿಂದ ಆತ್ಮಸ್ಥೈರ್ಯ:

ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡಗುರಿ ಇಟ್ಟುಕೊಂಡಿರಬೇಕು. ಯಾರನ್ನೇ ಕೇಳಿದರೂ ಹೇಳುವುದು ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗುತ್ತೇನೆ ಎಂದು ಹೇಳುತ್ತಾರೆ ಎರಡೇ ವೃತ್ತಿ ಇಲ್ಲ. ಪದವಿಯನ್ನು ಮುಗಿಸಿದ ನಂತರ ಅದರ ಆದಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸಲು ತಯಾರಿಯಾಗುವುದು ಮುಖ್ಯ. ವಿದ್ಯಾರ್ಥಿಗಳಾಗಿದ್ದಾಗ ಪಠ್ಯವನ್ನು ಓದುವುದಷ್ಟೇ ಮುಖ್ಯ ಅಲ್ಲ. ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ತುಂಬ ಮುಖ್ಯ. ಪಠ್ಯೇತರ ಚಟುವಟಿಕೆಯಿಂದ ಆತ್ಮಸ್ಥೈರ್ಯ ಹಾಗೂ ನಾಯಕತ್ವ ಬೆಳೆಯುತ್ತದೆ ಎಂದರು.

ರಾಜ್ಯದಲ್ಲಿ ಮತ್ತೆ 6 ವೈದ್ಯ ಕಾಲೇಜು ಸ್ಥಾಪನೆ ಪ್ರಸ್ತಾಪ.

ಜೆಎಸ್‌ಎಸ್‌ ಕಾಲೇಜು ಪದವಿ ಪೂರ್ವ ವಿಭಾಗ ಪ್ರಾಚಾರ್ಯ ಬಿ. ಮಹಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಬಿ.ಎಸ್‌. ಐಶ್ವರ್ಯ ಸಾಂಸ್ಕೃತಿಕ ವೇದಿಕೆ ವರದಿಯನ್ನು ಹಾಗೂ ಆರ್‌. ಭಾನುಪ್ರಿಯ ಕ್ರೀಡಾವೇದಿಕೆ ವರದಿಯನ್ನು ಮಂಡಿಸಿದರು.

ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ಚನ್ನವೀರಗೌಡ್ರ ಬಸವರಾಜ್‌, ಸಹಾಯಕ ಎಇ ಸಂತೋಷ್‌, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್‌.ಎಸ್‌. ವೀರೇಶ್‌, ಕ್ರೀಡಾ ವೇದಿಕೆ ಸಂಚಾಲಕ ರವಿಕುಮಾರ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವೈ.ಪಿ. ಭಾರತಿ ಇದ್ದರು.