ಬೆಂಗಳೂರು(ಫೆ.01): ರಾಜ್ಯ ಸರ್ಕಾರದಿಂದ ಹೊಸದಾಗಿ ಆರು ವೈದ್ಯಕೀಯ ಕಾಲೇಜು ಆರಂಭಿಸುವುದು, ನಾಲ್ಕು ಜೆರಿಯಾಟ್ರಿಕ್‌ (ಹಿರಿಯ ನಾಗರಿಕರ ಆರೈಕೆ ಕೇಂದ್ರ), ಐದು ಕ್ಯಾನ್ಸರ್‌ ಕೇರ್‌ ಸ್ಥಾಪನೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಬೋಧನಾ ಸಿಬ್ಬಂದಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಯಿತು. ಬಳಿಕ ಮಾತನಾಡಿದ ಸಚಿವರು, ಪ್ರಸ್ತುತ ರಾಜ್ಯದಲ್ಲಿ 19 ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಯಾದಗಿರಿ ಮತ್ತು ಹಾವೇರಿಯಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳು ಆರಂಭಗೊಳ್ಳಲಿವೆ. ಇದರ ಜೊತೆಗೆ ಮತ್ತೆ ಹೊಸದಾಗಿ ಆರು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ನಾಲತವಾಡ: ವಿಷ ಹಾಕಿ ಮೂಕ ಪ್ರಾಣಿಗಳನ್ನ ಕೊಂದ್ರಾ ಪಾಪಿಗಳು?.

ಹಿರಿಯ ನಾಗರಿಕರ ಆರೈಕೆಗಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ವಿಜಯ ನಗರ ಮೆಡಿಕಲ್‌ ಕಾಲೇಜುಗಳಲ್ಲಿ ಜೆರಿಯಾಟ್ರಿಕ್‌ ಕೇರ್‌ ಹಾಗೂ ಬೆಂಗಳೂರು, ಮೈಸೂರು, ವಿಜಯ ನಗರ, ಹುಬ್ಬಳಿಯ ಕಿಮ್ಸ್‌ ಮೆಡಿಕಲ್‌ ಕಾಲೇಜುಗಳಲ್ಲಿ ತಲಾ 40 ಕೋಟಿ ರು. ವೆಚ್ಚದಲ್ಲಿ ಹಾಗೂ ಶಿವಮೊಗ್ಗದಲ್ಲಿ ಕಟ್ಟಡವಿಲ್ಲದ ಕಾರಣ 50 ಕೋಟಿ ರು. ವೆಚ್ಚದಲ್ಲಿ ಕ್ಯಾನ್ಸರ್‌ ಕೇರ್‌ ಕೇಂದ್ರ ಆರಂಭಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

ಬೆಂಗಳೂರು ವೈದ್ಯಕೀಯ ಕಾಲೇಜು ಮಾದರಿಯಲ್ಲಿ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ಐದು ಕೋಟಿ ರು.ಗಳ ವೆಚ್ಚದಲ್ಲಿ ಸಿಮಿಲೇಷನ್‌ ಲ್ಯಾಬ್‌ಗಳನ್ನು ಆರಂಭಿಸುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ನರ್ಸಿಂಗ್‌ ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಪಿಎಸ್‌ ಪಿಂಚಣಿ ಯೋಜನೆ ಅನುಷ್ಠಾನದ ಬೇಡಿಕೆಯನ್ನು ಈಡೇರಿಸುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್‌) ಹಾಗೂ ರಾಷ್ಟ್ರೀಯ ಆಸ್ಪತ್ರೆಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್‌) ಮಾನ್ಯತೆ ಪಡೆಯುವ ಸಂಬಂಧ 300 ಕೋಟಿ ರು. ವೆಚ್ಚ ನಿಗದಿ ಮಾಡಲಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಸ್ತೃತ ಕಾರ್ಯಕ್ರಮದಲ್ಲಿ ತಲಾ 2.5 ಕೋಟಿ ರು. ವೆಚ್ಚದಲ್ಲಿ ಮೊಳಕಾಲ್ಮುರು, ಶಿಕಾರಿಪುರ, ಮಾಗಡಿ, ರಾಯಚೂರು, ಯಾದಗಿರಿಯಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.

ಕೆಸಿ ಜನರಲ್‌ ಸೂಪರ್‌ ಸ್ಪೆಷಾಲಿಟಿ:

ಬೆಂಗಳೂರಿನ ಉತ್ತರ ಹಾಗೂ ಪಶ್ಚಿಮ ವಲಯದಲ್ಲಿ ಸರ್ಕಾರದ ಸೂಪರ್‌ ಸ್ಪೆಷಾಲಿಟಿ ಆರೋಗ್ಯ ಸೇವೆ ಇಲ್ಲದ ಕಾರಣ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ 150 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಸೇವೆ ಒದಗಿಸಲು ಕೂಡ ಚರ್ಚಿಸಲಾಗಿದೆ ಎಂದು ತಿಳಿಸಿದರು.