ಕರಡಹಳ್ಳಿ ಸೀತಾರಾಮು

ನಾಗಮಂಗಲ [ಸೆ.14]:  ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದ ಮೇಲೆ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ಭಾಗ್ಯ ಸಿಕ್ಕಿಲ್ಲ. ಇನ್ನೂ 15 ದಿನಕ್ಕೆ ದಸರಾ ರಜೆ ಪ್ರಕಟವಾದರೆ, ಮಕ್ಕಳಿಗೆ ಸೈಕಲ್‌ ಸಿಗುವುದು ಮುಂದಿನ ಅಕ್ಟೋಬರ್‌ 15ರ ವೇಳೆಗೆ ಎನ್ನುವುದು ಸದ್ಯದ ಲೆಕ್ಕಾಚಾರ.

ತಾಲೂಕಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಸೈಕಲ್‌ಗಳ ಬಿಡಿ ಭಾಗಗಳು ಮಾತ್ರ ತಾಲೂಕಿಗೆ ಬಂದಿಳಿದಿವೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೈಕಲ್‌ಗಳ ಜೋಡಣೆ ಕಾರ್ಯ ಭರದಿಂದ ಸಾಗುತ್ತಿದೆ. ಇನ್ನೂ ಕನಿಷ್ಠ 15 ದಿನಗಳ ಕಾಲ ಸೈಕಲ್‌ ಜೋಡಣೆ ಮಾಡಿ ನಂತರ ವಿತರಿಸುವ ಕಾರ್ಯ ಮಾಡಲು ಶಿಕ್ಷಣ ಇಲಾಖೆ ತಯಾರಿ ಮಾಡಿದೆ.

ಪಟ್ಟಣದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಸೇರಿ ತಾಲೂಕಿನ 25 ಸರ್ಕಾರಿ ಪ್ರೌಢಶಾಲೆ, 14 ಅನುದಾನಿತ ಪ್ರೌಢಶಾಲೆ ಹಾಗೂ 3 ಟಿಜಿಪಿ ಶಾಲೆಗಳಲ್ಲಿ 570 ಬಾಲಕಿಯರು ಮತ್ತು 635 ಬಾಲಕರು ಸೇರಿ ಒಟ್ಟು 1205 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಸೈಕಲ್‌ಗಳನ್ನು ವಿತರಿಸಲಾಗುವುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

1300 ಸೈಕಲ್‌ ಬೇಡಿಕೆ:  ಚೆನ್ನೈ ಮೂಲದ ಟಿ.ಐ.ಸೈಕಲ್ ಆಫ್‌ ಇಂಡಿಯಾ ಎಂಬ ಖಾಸಗಿ ಸಂಸ್ಥೆಯು ಹೀರೋ ಕಂಪನಿ ಹೆಸರಿನ 1300 ಬೈಸಿಕಲ್‌ಗಳ ಬಿಡಿ ಭಾಗಗಳನ್ನು ಪೂರೈಕೆ ಮಾಡಿದ್ದಾರೆ. ಬಿಹಾರ ಮೂಲದ ಐದು ಮಂದಿ ಕಾರ್ಮಿಕರು ಪ್ರತಿನಿತ್ಯ ನೂರಾರು ಬೈಸಿಕಲ್‌ಗಳ ಜೋಡಣೆ ಮಾಡುತ್ತಿದ್ದಾರೆ.

ಗುಣಮಟ್ಟವಿಲ್ಲದ ಸೈಕಲ್

8 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಶಾಲಾ ಮಕ್ಕಳಿಗೆ ಕನಿಷ್ಠ ಮೂರು ವರ್ಷ ಕಾಲ ಬಾಳಿಕೆ ಬರುವಂತಹ ಗುಣಮಟ್ಟದ ಬೈಸಿಕಲ್‌ಗಳನ್ನು ವಿತರಣೆ ಮಾಡಬೇಕೆಂಬುದು ಸರ್ಕಾರದ ಆಶಯವಾಗಿದ್ದರೂ ಸಹ, ಬೈಸಿಕಲ್ ವಿತರಣೆ ಮಾಡುವ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆ ಕಳಪೆ ಗುಣಮಟ್ಟದಿಂದ ಕೂಡಿರುವ ಬೈಸಿಕಲ್‌ಗಳನ್ನು ಪೂರೈಕೆ ಮಾಡಿದೆ ಎಂಬ ಆರೋಪ ಪ್ರತಿವರ್ಷ ಕೇಳಿಬರುತ್ತಿರುವಂತೆ ಈ ವರ್ಷವೂ ಸಹ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.

ಮರು ಜೋಡಣೆಯಾಗಲೇಬೇಕು:

ತರಾತುರಿಯಲ್ಲಿ ಜೋಡಣೆ ಮಾಡಿರುವ ಈ ಬೈಸಿಕಲ್‌ಗಳು ವಿದ್ಯಾರ್ಥಿಗಳ ಕೈಸೇರಿದ ಹದಿನೈದು ದಿನದೊಳಗೆ ಒಂದೊಂದೆ ಬಿಡಿಭಾಗಗಳು ಕಳಚಿಬೀಳುವ ಸ್ಥಿತಿಯಲ್ಲಿರುತ್ತವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಬೈಸಿಕಲ್‌ಗಳನ್ನು ಪುನಃ ಮರುಜೋಡಣೆ ಮಾಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ತಾಲೂಕಿಗೆ ಪೂರೈಕೆಯಾಗಿರುವ 1205 ಸೈಕಲ್‌ಗಳನ್ನು ಈ ವೇಳೆಗಾಗಲೇ ಎಲ್ಲಾ ಶಾಲೆಗಳ ಅರ್ಹ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕಿತ್ತು. ಆದರೆ ಸೈಕಸ್‌ ಬಿಡಿ ಭಾಗಗಳ ಜೋಡಣೆ ಕಾರ್ಯ ಇನ್ನೂ ಮುಗಿದಿಲ್ಲ. ಸೈಕಲ… ವಿತರಿಸುವ ಜವಾಬ್ದಾರಿ ಹೊತ್ತಿರುವ ಸಂಸ್ಥೆಯವರು ತಾಲೂಕಿನ ಯಾವೊಂದು ಶಾಲೆಗೂ ಸೈಕಲ್ ವಿತರಿಸಿಲ್ಲ.

ತಾಲೂಕಿನ 42 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸುವ ಹೊಣೆ ಹೊತ್ತಿರುವ ಏಜೆನ್ಸಿಯವರು ಮಾಡಿರುವ ವಿಳಂಬದಿಂದಾಗಿ ಈವರೆಗೂ ತಾಲೂಕಿನ ಯಾವೊಂದು ಶಾಲೆಗೂ ಸೈಕಲ್ ವಿತರಣೆಯಾಗಿಲ್ಲ. ಶೀಘ್ರದಲ್ಲಿಯೇ ಎಲ್ಲ ಶಾಲೆಗಳಿಗೂ ಸೈಕಲ್‌ ಗಳನ್ನು ಪೂರೈಕೆ ಮಾಡುವಂತೆ ಈಗಾಗಲೇ ಸೈಕಲ್ ವಿತರಿಸುವ ಏಜೆನ್ಸಿಯವರಿಗೆ ತಾಕೀತು ಮಾಡಲಾಗಿದೆ. ಸೆ.16ರಿಂದ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಣೆಗೆ ಚಾಲನೆ ನೀಡಲಾಗುವುದು.

ನಾಗೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ನಾಗಮಂಗಲ.