ಚಾಮರಾಜನಗರ(ಡಿ.04): ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಂತಿ ಸೌಹರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕಾದ ಶಿಕ್ಷಕರಿಬ್ಬರ ವೈಯಕ್ತಿಕ ವಿಚಾರಗಳಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಹಿನ್ನಡೆ ಉಂಟಾಗಿದ್ದು, ಮಕ್ಕಳ ಪೋಷಕರು ಇಂತಹ ಘಟನೆಗಳಿಗೆ ಬೆನ್ನೆಲುಬಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹನೂರು ಶೈಕ್ಷಣಿಕ ವಲಯದ ಮೀಣ್ಯಂ ಶಾಲೆಯಲ್ಲಿ ಕಲುಷಿತ ವಾತಾವರಣ ತಿಳಿಗೊಳಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಹನೂರು ಶೈಕ್ಷಣಕ ವಲಯದ ಮೀಣ್ಯಂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿರುವ ಪ್ರಭಾರ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರ ನಡುವಿನ ವೈಯಕ್ತಿಕ ಕಾರಣಗಳಿಂದ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅಲ್ಲದೆ ಪ್ರಭಾರ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಹಾಗೂ ಪಟ್ಟಭದ್ರ ಹಿತಶಕ್ತಿಗಳಿಗೆ ಪೋಷಕರು ಕೂಡ ಪ್ರಚೋದನೆ ನೀಡುತ್ತಿದ್ದು, ಶಿಕ್ಷಕರಿಬ್ಬರ ವೈಯಕ್ತಿಕ ಗುದ್ದಾಟದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕುಂಠಿತವಾಗಿದೆ.

ಹುಣಸೂರು ಪ್ರಚಾರ: ಸಿದ್ದರಾಮಯ್ಯ ಸಮಯ ಪ್ರಜ್ಞೆ

ಮಕ್ಕಳು ಮಣ್ಣಿನ ಮುದ್ದೆಯಂತೆ ಆ ಮಗುವನ್ನು ಸುಂದರ ಮೂರ್ತಿಯನ್ನಾಗಿ ಮಾಡುವ ಕೆಲಸ ಶಿಕ್ಷಕರ ಮೇಲಿದೆ. ಆದರೆ ಶಿಕ್ಷಕರು ತಮ್ಮ ವೈಯಕ್ತಿಕ ಹಿತಶಕ್ತಿಗೆ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಮೂಲಕ ಸರ್ಕಾರಿ ಶಾಲೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವುದು ಹಾಗೂ ಹೋರಾಟಕ್ಕೆ ಇಳಿದಿರುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಶ್ನೆ ಮಾಡುವಂತಿದೆ.

ವಿದ್ಯಾರ್ಥಿಗಳ ಈ ರೀತಿಯ ವರ್ತನೆಯ ಹಿಂದೆ ಕಾಣದ ಕೈಗಳು ಪ್ರಚೋದನೆ ನೀಡುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರೀಕರು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮುಂದಾಗಬೇಕು. ಪೋಷಕರು ಸಹ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ, ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ.

ಚಾಮರಾಜನಗರ: KSRTCಯಲ್ಲಿ 30 ಸಾವಿರಕ್ಕೂ ಹೆಚ್ಚು ದಂಡ ವಸೂಲಿ

ಸಹ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದೆ ತಡ ಮಕ್ಕಳು ಹೋರಾಟ ಹಾಗೂ ಶಾಲೆಯ ಪೀಠೋಪಕರಣಗಳನ್ನು ಧ್ವಂಸ ಮಾಡುವ ಸಂದರ್ಭದಲ್ಲಿ ಕೆಲವು ಕಾಣದ ಕೈಗಳು ತಮ್ಮ ಸ್ವಾರ್ಥ ಸಾಧನೆಯನ್ನು ಸಾಧಿಸಿ ಆನಂದ ಪಡುತ್ತಿದ್ದಾರೆ. ಇದಕ್ಕೆ ದಾಖಲೆಗಳು ಕೆಲವೊಂದು ವೀಡಿಯೋ ಮತ್ತು ಪೋಟೋಗಳು ಎತ್ತಿ ತೋರಿಸುತ್ತಿದೆ. ಇಂತಹ ವೀಡಿಯೋಗಳನ್ನು ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿಯಬಿಡುವ ಮೂಲಕ ಪೂರ್ವನಿಯೋಜಿತ ಕೆಲಸ ಎಂಬುದನ್ನು ತಿಳಿಸಿದೆ. ಜೊತೆಗೆ ತಾವು ಓದುತ್ತಿರುವ ಶಾಲೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸುವ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಹಾಗೂ ಪೂರ್ವನಿಯೋಜಿತ ಸಂಚು ಎಂದು ಈ ವೀಡಿಯೋಗಳನ್ನು ಸಾಕ್ಷಿಕರಿಸಿ ಘಟನೆಗೆ ಕಾರಣರಾದವರ ಮೇಲೆ ಕ್ರಮಕ್ಕೆ ಮುಂದಾಗಬೇಕಿದೆ.

ಕಡಿವಾಣ ಹಾಕಬೇಕಾಗಿದೆ:

ಚಾಮರಾಜನಗರ ಜಿಲ್ಲೆಯ ವರಿಷ್ಠಾಧಿಕಾರಿಗಳು ರಾಮಾಪುರ ಪೊಲೀಸ್‌ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಮೀಣ್ಯಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಸರ್ಕಾರಿ ಶಾಲೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಲು ಪ್ರಚೋದನೆ ನೀಡಿರುವವರ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಅಂತಹವರ ವಿರುದ್ಧ ಕ್ರಮಕೈಗೊಂಡರೆ ಇಂತಹ ಅಹಿತಕರ ಘಟನೆಗಳು ಶಾಲೆಗಳಲ್ಲಿ ನಡೆಯುವುದಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಶೈಕ್ಷಣಿಕ ಪ್ರಗತಿಗೆ ಮಾರಕ:

ಮೀಣ್ಯಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಶಿಕ್ಷಕರಿಬ್ಬರ ಸ್ವಯಂ ಅಪರಾಧಗಳನ್ನು ಗುರುತಿಸಿ ಎಚ್ಚರಿಸಬೇಕಾದ ಪೋಷಕರೇ ಮಕ್ಕಳ ಮನಸ್ಸಿನಲ್ಲಿ ಇಂತಹ ಪ್ರತಿಭಟನೆ ಹಾಗೂ ಸರ್ಕಾರಿ ಪೀಠೋಪಕರಣಗಳನ್ನು ಧ್ವಂಸಗೊಳಿಸುವಂತ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿರುವುದು ಶಿಕ್ಷಣ ಪಂಡಿತರು ಹಾಗೂ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕರಾವಳಿಯಲ್ಲಿ ಇನ್ನೂ ಎರಡ್ಮೂರು ದಿನ ಮಳೆ..

ಮೂರ್ನಾಲ್ಕು ತಿಂಗಳುಗಳಿಂದ ಇಬ್ಬರು ಶಿಕ್ಷಕರ ವೈಯಕ್ತಿಕ ತಿಕ್ಕಾಟದಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗಿದ್ದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇಬ್ಬರು ಶಿಕ್ಷಕರನ್ನು ಬೇರೆಡೆಗೆ ನಿಯೋಜನೆಗೊಳಿಸಿರುವುದು ಇಲಾಖೆಯ ನಿಯಮ. ಇದನ್ನು ಹೊರತುಪಡಿಸಿ ಶಿಕ್ಷಕರೊಬ್ಬರು ಶಾಲೆಯಲ್ಲಿಯೇ ಇರಬೇಕೆಂದು ಮಕ್ಕಳು ಪ್ರತಿಭಟನೆ ಹಂತಕ್ಕೆ ತಲುಪಿರುವ ಮಾಹಿತಿ ಇಲಾಖೆಗೆ ತಿಳಿದಿದೆ. ಇಲ್ಲಿನ ವ್ಯವಸ್ಥೆ ತಿಳಿಗೊಳಿಸಲು ಶಿಕ್ಷಣ ಇಲಾಖೆಯು ಹಿರಿಯ ಅಧಿಕಾರಿಗಳ ತಂಡವನ್ನು ರಚನೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು. ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಶಿಕ್ಷಣ ಸಚಿವರು ಕಡಿವಾಣ ಹಾಕಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.