ಮಂಡ್ಯ(ಆ.02): ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಗ್ರಾಮದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು ಮಂಡ್ಯ - ಅರಕೆರೆ ಮಾರ್ಗವಾಗಿ ಸಾರಿಗೆ ಬಸ್‌ಗಳು ಮೈಸೂರುವರೆಗೆ ಸಂಚಾರ ಮಾಡುತ್ತವೆ. ಆದರೆ, ಸರಿಯಾದ ಸಮಯಕ್ಕೆ ಬಾರದೇ ಕಾಲೇಜಿಗೆ ಸಕಾಲದಲ್ಲಿ ತೆರಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಅಧಿಕಾರಿಗಳು ಪ್ರತಿನಿತ್ಯ ಕಾಲೇಜಿಗೆ ಹೋಗಿ ಬರಲು ಸೂಕ್ತ ಸಮಯದಲ್ಲಿ ಸರ್ಕಾರಿ ಬಸ್‌ ಸಂಚಾರ ವ್ಯವಸ್ಥೆ ಮಾಡಿಲ್ಲ. ಮಂಡ್ಯ-ಶ್ರೀರಂಗಪಟ್ಟಣ ಮಾರ್ಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಬೆಳಗ್ಗೆ ವೇಳೆ ಸಕಾಲಕ್ಕೆ ಬಸ್‌ ಸಂಚಾರ ಇಲ್ಲದ ಕಾರಣ ನಿಗದಿತ ಅವದಿಯೊಳಗೆ ಶಾಲಾ, ಕಾಲೇಜಿಗೆ ತೆರಳಲು ತೊಂದರೆಯಾಗಿ ಅಧ್ಯಯನಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಕಿಡಿಕಾರಿದರು.

ದಾವಣಗೆರೆ: 8ವರ್ಷಗಳಿಂದ ಬಸ್‌ಗಾಗಿ ಆಗ್ರಹ, ಪರಿಹಾರ ಮಾತ್ರ ಶೂನ್ಯ

1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ:

ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದ ಸ್ಥಳೀಯ ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಕಾಲೇಜು ವಿದ್ಯಾರ್ಥಿನಿಯರು ಶಾಲಾ-ಕಾಲೇಜು ಆರಂಭವಾಗುವ ವೇಳೆಗೆ ಸಕಾಲದಲ್ಲಿ ತಲುಪಲು ಅನುಕೂಲವಾಗುವಂತೆ ಬಸ್‌ ಸಂಚಾರ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು. ಕೆಲ ದಿನಗಳ ಹಿಂದೆ ಮೊತ್ತಹಳ್ಳಿ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ, ಇದುವರೆಗೂ ಈ ಮಾರ್ಗದಲ್ಲಿ ಸಮರ್ಪಕವಾಗಿ ಬಸ್‌ ಸೌಲಭ್ಯ ಕಲ್ಪಿಸುವಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಿ ಬೆಳಗ್ಗೆ ಮತ್ತು ಸಂಜೆ ವೇಳೆ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳ ಬಸ್‌ ಪಾಸ್‌ಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಂಸಪ್ರಿಯ, ವಜಿಹಬಿ, ತೇಜಸ್ವಿನಿ, ರಕ್ಷಿತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.