ದಾವಣಗೆರೆ: 8ವರ್ಷಗಳಿಂದ ಬಸ್‌ಗಾಗಿ ಆಗ್ರಹ, ಪರಿಹಾರ ಮಾತ್ರ ಶೂನ್ಯ
ದಾವಣಗೆರೆ ಅಲ್ಮರಿಸಿಕೇರಿ ಭಾಗಕ್ಕೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕರವೇ ನೇತೃತ್ವದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಳೆದ 8-10 ವರ್ಷಗಳಿಂದ ಸರಿಯಾದ ಬಸ್ ಸೌಲಭ್ಯವಿಲ್ಲದೆ ಇರುವುದರಿಂದ ಬಸ್ ಒದಗಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಹರಪನಹಳ್ಳಿ(ಜು.30): ಅಲ್ಮರಿಸಿಕೇರಿ ಭಾಗಕ್ಕೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕರವೇ ನೇತೃತ್ವದಲ್ಲಿ ಸೋಮವಾರ ತಾ. ಗೋವೇರಹಳ್ಳಿ ಕ್ರಾಸ್ ಬಳಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಅಲ್ಮರಸಿಕೇರಿ, ನಾರಾಯಣಪುರ, ಯಲ್ಲಾಪುರ, ಗೋವೇರಹಳ್ಳಿ ಮಾರ್ಗದಲ್ಲಿ ಬಸ್ ಸೌಲಭ್ಯವಿಲ್ಲ, ಅಲ್ಮರಸಿಕೇರಿ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ 4 ಕಿ.ಮೀ. ಗೋವೇರಹಳ್ಳಿ ಕ್ರಾಸ್‌ಗೆ ಕಾಲ್ನಡಿಗೆ ತೆರಳಿ ಅಲ್ಲಿಂದ ಹರಪನಹಳ್ಳಿಗೆ ಬಸ್‌ನಲ್ಲಿ ತೆರಳಬೇಕಾಗಿದೆ ಎಂದು ಪ್ರತಿಭಟನಾನಿರತರು ಹೇಳಿದರು.
ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರವಿಲ್ಲ:
ಕಳೆದ 8-10 ವರ್ಷಗಳಿಂದ ಬಸ್ ಸೌಲಭ್ಯವಿಲ್ಲವಾಗಿದೆ. ಈ ಕುರಿತು ಈ ಹಿಂದೆ ಗ್ರಾಮಸ್ಥರು ಅನೇಕ ಬಾರಿ ಸಾರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕರವೇ ಅಧ್ಯಕ್ಷ ಬಸವರಾಜ ಹುಲಿಯಪ್ಪನವರ ತಿಳಿಸಿದರು.
ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಸಂಜೆ ಕಾಲೇಜಿಗೆ ಹೋಗಿ ಬರುವುದು ಹರ ಸಾಹಸವಾಗಿದೆ. ಆರೋಗ್ಯ ಹದಗೆಟ್ಟಾಗ ಸಮೀಪದ ಹಾರಕನಾಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಲು 6 ಕಿ ಮೀ, ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ತೆರಳಲು 11 ಕಿ ಮೀ ದೂರ ಹೋಗುವುದು ತುಂಬಾ ತ್ರಾಸದಾಯಕವಾಗಿದೆ ಎಂದು ಹೇಳಿದರು.
ಗಡಿಗ್ರಾಮಗಳಲ್ಲಿ ಸಿಗದ ಸಾರಿಗೆ ಸೌಲಭ್ಯ: ವಿದ್ಯಾರ್ಥಿಗಳ ಆಕ್ರೋಶ
ರಸ್ತೆ ತಡೆ ನಂತರ ಸ್ಥಳೀಯ ಸಾರಿಗೆ ಡಿಪೊ ವ್ಯವನಸ್ಥಾಪಕ ಮಂಜುನಾಥ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಎರಡು ದಿನ ಕಾಲಾವಕಾಶ ಕೊಡಿ ಬಸ್ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರವೇ ಗ್ರಾಮ ಘಟಕ ಅಧ್ಯಕ್ಷ ಎಚ್ .ಬಸವರಾಜ, ವಕೀಲಕಂಜ್ಯಪ್ಪ, ಕಿರಣ, ಗೋಣಿ, ಶ್ರೀರಾಮ , ಕರವೇ ತಾಲೂಕು ಕಾರ್ಯದರ್ಶಿ ಪ್ರಕಾಶ್ ಅಭಿವ್ಯಕ್ತಿ, ವಿದ್ಯಾರ್ಥಿಗಳು , ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.