ಬೆಂಗಳೂರು (ಸೆ.01):  ಹುಟ್ಟು ಹಬ್ಬ ಆಚರಿಸಿಕೊಂಡ ಮರುದಿನವೇ ಹರಿಯಾಣ ಮೂಲದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರಿಯಾಣ ಮೂಲದ ಐಶ್ವರ್ಯ (19) ಆತ್ಮಹತ್ಯೆ ಮಾಡಿಕೊಂಡವರು.

ಪೀಣ್ಯ ಎರಡನೇ ಹಂತದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಬಿಎ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಸಮೀಪದ ಚಿಕ್ಕಸಂದ್ರದಲ್ಲಿ ಪಿಜಿಗೆ ಸೇರಿಕೊಂಡಿದ್ದರು.

ಸೆ.28ರಂದು ಐಶ್ವರ್ಯ ಅವರ ಹುಟ್ಟುಹಬ್ಬ ಇತ್ತು. ಅಂದು ರಾತ್ರಿ ಪಿಜಿಯಲ್ಲಿ ಸ್ನೇಹಿತೆಯರ ಜತೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ದರು. ಐಶ್ವರ್ಯ ಅವರ ಪಿಜಿ ಕೊಠಡಿಯ ಗೆಳತಿ ಹಬ್ಬದ ಕಾರಣದಿಂದ ಊರಿಗೆ ಹೋಗಿದ್ದರು. ಹೀಗಾಗಿ ಈಕೆ ಒಬ್ಬರೇ ರೂಮಿನಲ್ಲಿದ್ದರು. ಸೆ.29ರ ಬೆಳಗ್ಗೆ ಸ್ನೇಹಿತೆಯರು ಬಂದು ಕೊಠಡಿಯ ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬರದೇ ಇದ್ದಾಗ ಪಿಜಿ ಮಾಲೀಕರಿಗೆ ಮಾಹಿತಿ ನೀಡಿದ್ದರು. ನಂತರ ಪಿಜಿ ಮಾಲೀಕರು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮನೆಯವರು ಹುಟ್ಟುಹಬ್ಬಕ್ಕೆ ಶುಭ ಹಾರೈಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಸೋಲದೇವನಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.