ನನ್ನನ್ನು ಅನುಮಾನದಿಂದ, ಅಸ್ಪೃಶ್ಯನಂತೆ ನೋಡದಿರಿ| ಕೊರೋನಾ ನೆಗೆಟಿವ್‌ ವರದಿಯಿದ್ದರೂ ಜನರ ಅನುಮಾನ|ವಾಸ್ತವ ಸ್ಥಿತಿಯ ಚಿತ್ರಣ ಅರಿಯದೇ ಅಸ್ಪೃಶ್ಯನಂತೆ ನೋಡುತ್ತಿರುವುದು ತೀವ್ರ ಬೇಸರ, ನೋವು ತಂದಿದೆ: ನೆದರ್‌ಲ್ಯಾಂಡ್‌ನಿಂದ ಬಂದ ವಿದ್ಯಾರ್ಥಿ| 

ಜಿ. ಸೋಮಶೇಖರ

ಕೊಟ್ಟೂರು[ಮಾ.23]: ಕೊರೋನಾ ಸೋಂಕಿನ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಎಲ್ಲ ಬಗೆಯ ಪರೀಕ್ಷೆಗೆ ಒಳಗಾಗಿದ್ದೇನೆ. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ವೈದ್ಯರಿಂದ ಸರ್ಟಿಫಿಕೆಟ್‌ ಪಡೆದು ತಾಯಿ ನೆಲಕ್ಕೆ ಆಗಮಿಸಿದ್ದೇನೆ. ಆದರೂ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು, ವಾಸ್ತವ ಸ್ಥಿತಿಯ ಚಿತ್ರಣ ಅರಿಯದೇ ಅಸ್ಪೃಶ್ಯನಂತೆ ನೋಡುತ್ತಿರುವುದು ತೀವ್ರ ಬೇಸರ, ನೋವು ತಂದಿದೆ.

ನೆದರ್‌ಲ್ಯಾಂಡ್‌ಗೆ ಎಂಎಸ್‌ಸಿ (ಅಗ್ರಿ) ಪದವಿ ಪಡೆಯಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಈಗ ಊರಿಗೆ ಆಗಮಿಸಿದ್ದು, ಕೊರೋನಾ ಭೀತಿಯಲ್ಲಿರುವ ಜನತೆ ತಮ್ಮನ್ನು ನೋಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಪರಿ ಇದು.

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!

ತಮ್ಮ ನೋವು ಹಂಚಿಕೊಂಡ ಅವರು, ನೆದರ್‌ಲ್ಯಾಂಡ್‌ನ ನೋಡ್‌ ಬ್ರದರ್ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಕೊರೋನಾ ವೈರಸ್‌ ಭೀತಿ ಇರುವ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಯಿತು. ಹೀಗಾಗಿ ಬೆಂಗಳೂರು ಮೂಲಕ ಶನಿವಾರ ಇಲ್ಲಿಗೆ ಬಂದೆ. ಬಂದ ತಕ್ಷಣ ಬೆಂಗಳೂರಿನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದೆ. ಅಲ್ಲಿನ ವೈದ್ಯರಿಂದ ಪಡೆದುಕೊಂಡ ಸರ್ಟಿಫಿಕೆಟ್‌ನಲ್ಲಿ ನೆಗೆಟಿವ್‌ ಎಂದು ನಮೂದಿಸಿದ್ದರೂ ಪ್ರತ್ಯೇಕ ಕೊಠಡಿಯಲ್ಲಿ ಇರಲು ಬಯಸಿದೆ. ಆದರೆ ಕೆಲವು ಸಾರ್ವಜನಿಕರು ಹೊರದೇಶದಿಂದ ಬಂದಿದ್ದಾನೆ ಎಂಬ ಕಾರಣಕ್ಕಾಗಿ ವಾಸ್ತವ ಸ್ಥಿತಿಯ ಚಿತ್ರಣವನ್ನು ವೇದ್ಯ ಮಾಡಿಕೊಳ್ಳದೇ ಅಸ್ಪೃಶ್ಯನಂತೆ ನೋಡುತ್ತಿರುವುದು ನಿಜಕ್ಕೂ ನನಗೆ ನೋವು ತರಿಸಿದೆ ಎಂದು ನೊಂದು ನುಡಿದರು.

ಈಗಾಗಲೇ ಸ್ವಯಂ ಗೃಹಬಂಧನಕ್ಕೆ ಒಳಗಾಗಿ ಕೊಟ್ಟೂರು ತಾಲೂಕು ಆಡಳಿತದ ಸುಪರ್ದಿಯಲ್ಲಿ ಮನೆಯಲ್ಲಿ ಇರಲು ಆಸೆ ವ್ಯಕ್ತಪಡಿಸಿರುವೆ. ಸ್ಥಳೀಯ ಪೊಲೀಸರ ಸಲಹೆ, ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಜನರಿಂದ ಅಂತರ ಕಾಯ್ದುಕೊಂಡೇ ಇರುವೆ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಮತ್ತೊಂದು ಕೊರೋನಾ ಕೇಸ್: ಸೋಂಕಿತ ಸಂಖ್ಯೆ 27ಕ್ಕೇರಿಕೆ

ವೈದ್ಯಕೀಯ ತಪಾಸಣೆ ಮಾಡಿಕೊಂಡು ನನಗೆ ಕೊರೋನಾ ಸೋಂಕಿಲ್ಲ ಎಂದು ದೃಢಪಡಿಸಿಕೊಂಡಿದ್ದೇನೆ. ಕೆಲದಿನಗಳ ಕಾಲ ಸ್ವಂತ ಊರಿನಲ್ಲಿ ಇರಲು ಬಯಸಿದ್ದೇನೆ. ಅಲ್ಲಿಯವರೆಗೂ ಜನತೆ ಅವಕಾಶ ಮಾಡಿಕೊಡಬೇಕು. ಅನಗತ್ಯವಾಗಿ ನನ್ನನ್ನು ಸಂಶಯದಿಂದ ನೋಡಬಾರದು ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಹೇಳಿದ್ದಾರೆ. 

ಹುಟ್ಟೂರಿಗೆ ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆ ತಾಲೂಕು ಆಡಳಿತದಿಂದ ಅವರನ್ನು ಪ್ರತ್ಯೇಕವಾಗಿರಿಸಲು ಮನೆಯವರಿಗೆ ತಾಕೀತು ಮಾಡಲಾಗಿದೆ. ಅವರ ಆರೋಗ್ಯ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್‌ ಅಂಶ ಇರುವುದು ಗೊತ್ತಾಗಿದೆ. ಆದರೂ ಅವರನ್ನು 14 ದಿನಗಳ ವರೆಗೆ ನಿಗಾ ಘಟಕದಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ನಾಗರಿಕರು ಯಾವುದೇ ಕಾರಣಕ್ಕೂ ಭಯ ಬೀಳಬಾರದು, ಆತಂಕಕ್ಕೆ ಒಳಗಾಗಬಾರದು ಎಂದು ತಹಸೀಲ್ದಾರ್‌ ಹೇಳಿದ್ದಾರೆ.