ಮಹಾಲಿಂಗಪೂರ ತಾಲೂಕು ರಚನೆಗೆ ಆಗ್ರಹಿಸಿ ಹೋರಾಟ; ಪಟ್ಟು ಬಿಡದ ತಾಲೂಕು ಹೋರಾಟ ಸಮಿತಿ

  • ಪಟ್ಟು ಬಿಡದ ಹೋರಾಟಗಾರರು, 129ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪೂರ ತಾಲೂಕು ರಚನೆ ಹೋರಾಟ.
  • 32 ವರ್ಷಗಳಿಂದ ನಡೆಯುತ್ತಿದ್ದರೂ ಸ್ಪಂದಿಸದ ಸರ್ಕಾರಗಳು & ಜನಪ್ರತಿನಿಧಿಗಳು.
  • ಬಂದ್​ ಕರೆ ನೀಡಿ ವಿವಿಧ ಹಂತದ ಹೋರಾಟಗಳನ್ನ ಯಶಸ್ವಿಗೊಳಿಸಿರೋ ತಾಲೂಕು ಹೋರಾಟ ಸಮಿತಿ.
Struggle demanding formation Mahalingapur Taluk  Taluk Struggle Committee does not give up bagalkot rav

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್​ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಆ.21):- ಅವರೆಲ್ಲಾ ಜಾತಿ ಮತ ಪಕ್ಷ ಭೇಧ ಮರೆತು ಬರೋಬ್ಬರಿ 32 ವರ್ಷಗಳಿಂದ ತಾಲೂಕು ಹೋರಾಟಕ್ಕೆ ಮುಂದಾಗಿದ್ದಾರೆ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪ್ರಭಾವದಿಂದ ಕೆಲವೊಂದು ನೂತನ ತಾಲೂಕುಗಳು ರಚನೆಯಾದರೂ ಸಹ ಈ ಊರು ಮಾತ್ರ ತಾಲೂಕಾಗಿ ಘೋಷಣೆಯಾಗಲಿಲ್ಲ, ಹೀಗಾಗಿ ಈಗ ಮತ್ತೇ ಹೋರಾಟಕ್ಕೆ ಮುಂದಾಗಿರೋ ಈ ಊರಿನ ಜನ್ರು ನೂತನ ತಾಲೂಕು ರಚನೆಗಾಗಿ ಹೋರಾಟ ಮುಂದುವರಿಸಿದ್ದು, ಅದೀಗ 129ನೇ ದಿನಕ್ಕೆ ಕಾಲಿಟ್ಟಿದೆ. ಹಾಗಾದ್ರೆ ಆ ಊರು ಯಾವುದು? ಅವರ ಹೋರಾಟ ಹೇಗೆ? ನಡೆದಿದೆ, ನೋಡೋಣ ಬನ್ನಿ...

ಅನವಾಲ ಏತ ನೀರಾವರಿಗೆ ಸಚಿವ ಸಂಪುಟದ ಅನುಮೋದನೆ: ಸಚಿವ ಕಾರಜೋಳ

 ಒಂದೆಡೆ ತಾಲೂಕು ರಚನೆಗಾಗಿ ಆಗ್ರಹಿಸಿ ಘೋಷಣೆ ಹಾಕುತ್ತಾ ಪ್ರತಿಭಟನೆ(Protest) ಮುಂದಾಗಿರೋ ಹೋರಾಟಗಾರರು, ಮತ್ತೊಂದೆಡೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಾಲೂಕು ರಚನೆಗಾಗಿ ಪಕ್ಷಾತೀತವಾಗಿ ಸೇರಿ ಒಕ್ಕೊರಲಿನಿಂದ ತಾಲೂಕು ರಚನೆಗಾಗಿ ಪಟ್ಟು ಹಿಡಿದ ನಾಯಕರು. ಅಂದಹಾಗೆ ಇಂಥದ್ದೊಂದು ಪಕ್ಷಾತೀತ ಪ್ರತಿಭಟನಾ ಹೋರಾಟ ನಡೆಯುತ್ತಿರೋದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ. 

ಹೌದು. ಮಹಾಲಿಂಗಪೂರ ಪಟ್ಟಣವನ್ನ ತಾಲೂಕು ರಚನೆ ಮಾಡುವಂತೆ ಆಗ್ರಹಿಸಿ ಕಳೆದ 32 ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಆದರೆ ಯಾವೊಂದು ಬೆಂಬಲವೂ ಇವರಿಗೆ ಸಿಕ್ತಿಲ್ಲ. ಹೀಗಾಗಿ ಈಗ ಮತ್ತೇ ಮಹಾಲಿಂಗಪೂರ ತಾಲೂಕು ರಚನೆ ಮಾಡುವಂತೆ ಆಗ್ರಹಿಸಿ ಹೋರಾಟಗಳು ನಡೆಯುತ್ತಿವೆ. 

129ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪೂರ ತಾಲೂಕು ರಚನೆ ಹೋರಾಟ: ಪಟ್ಟು ಬಿಡದ ಹೋರಾಟಗಾರರು.. ಇನ್ನು ಮಹಾಲಿಂಗಪೂರ(Mahalingapura) ಪಟ್ಟಣವನ್ನ ತಾಲೂಕು ರಚನೆ ಮಾಡುವಂತೆ ಆಗ್ರಹಿಸಿ 32 ವರ್ಷಗಳಿಂದ ಆಗಾಗ ಹೋರಾಟಗಳು ನಡೆಯುತ್ತಾ ಬಂದಿದ್ದರೂ ಸಹ ಇದೀಗ ಮತ್ತೇ ಹೋರಾಟ ಮುಂಚೂಣಿಗೆ ಬಂದಿದೆ. ಸದ್ಯ  ಮಹಾಲಿಂಗಪೂರದ ಜನತೆ ಪಕ್ಷಾತೀತವಾಗಿ ನಡೆಸುತ್ತಿರೋ ಪ್ರತಿಭಟನಾ ಹೋರಾಟ ಈಗ 129ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಬಸ್​ ನಿಲ್ದಾಣದ ಬಳಿ ಇರುವ ವೃತ್ತದಲ್ಲಿ ಟೆಂಟ್​ ಹಾಕಿ ಜಾತಿ, ಮತ ಮೀರಿ ಪಕ್ಷಾತೀತವಾಗಿ ಎಲ್ಲ ಮುಖಂಡರು ಒಂದಾಗಿ ಈ ಹೋರಾಟವನ್ನ ಆರಂಭಿಸಿದ್ದಾರೆ. 1 ಲಕ್ಷ 40 ಸಾವಿರ ಜನಸಂಖ್ಯೆಯನ್ನ ಹೊಂದಿರೋ ಮಹಾಲಿಂಗಪೂರಕ್ಕೆ ತಾಲೂಕು ರಚನೆ ಮಾಡಲು ಎಲ್ಲ ಅರ್ಹತೆಗಳಿದ್ದು ನಿತ್ಯವೂ ಲಕ್ಷಾಂತರ ಜನರಿಂದ ವ್ಯಾಪಾರ ವಹಿವಾಟ ಸಹ ನಡೆಯುತ್ತಿದ್ದು, ಇದಕ್ಕಾಗಿ ಮಹಾಲಿಂಗಪೂರನ್ನ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಕಳೆದ 129 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ ಅಂತಾರೆ ಮಹಾಲಿಂಗಪೂರ ತಾಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ​.

ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರಿಸಿ ಮಹಾಲಿಂಗಪೂರ ತಾಲೂಕು ರಚನೆಗೆ ಆಗ್ರಹ: ಮಹಾಲಿಂಗಪೂರ ತಾಲೂಕು ರಚನೆ ಮಾಡುವುದಾದರೆ ಅದರಲ್ಲಿ ಮಹಾಲಿಂಗಪೂರ ಪುರಸಭೆ, ರನ್ನಬೆಳಗಲಿ ಪಟ್ಟಣ ಪಂಚಾಯತಿ, 15 ಗ್ರಾಮ ಪಂಚಾಯಿತಿ, 9 ಹಳ್ಳಿಗಳು ಸೇರಿದಂತೆ ಭೌಗೋಳಿಕವಾಗಿಯೂ ಸಹ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡು ತಾಲೂಕು ರಚನೆ ಮಾಡಲು ಅತ್ಯಂತ ಯೋಗ್ಯವಾಗಿದೆ ಅನ್ನೋದು ಇದೀಗ ಹೋರಾಟಗಾರರ ನಿಲುವಾಗಿದ್ದು, 1 ಲಕ್ಷ 40 ಸಾವಿರ ಜನಸಂಖ್ಯೆಯನ್ನೂ ಸಹ ಹೊಂದಿದೆ. ಸಾಲದ್ದಕ್ಕೆ ರಾಜ್ಯದಲ್ಲಿಯೇ ಬೆಲ್ಲದ ವ್ಯಾಪಾರ ವಹಿವಾಟಿಗೆ 2ನೇ ಸ್ಥಾನ ಪಡೆದಿದ್ದು, ನಿತ್ಯ ಕೋಟ್ಯಂತರ ವ್ಯವಹಾರ ನಡೆಯುತ್ತೇ. ಸುತ್ತಮುತ್ತಲಿನ ಭಾಗದ ಬಹುತೇಕ ಹಳ್ಳಿಗಳ ಜನರು ಸಹ ಮಹಾಲಿಂಗಪೂರ ಪಟ್ಟಣಕ್ಕೆ ಬಂದು ಹೋಗ ಬೇಕಿರುವುದರಿಂದ ಮಹಾಲಿಂಗಪೂರನ್ನ ನೂತನ ತಾಲೂಕನ್ನಾಗಿ ಘೋಷಿಸಬೇಕೆಂದು ಹೋರಾಟಗಾರ ಶಿವಲಿಂಗ ಟಿರ್ಕಿ ಆಗ್ರಹಿಸಿದ್ದಾರೆ. 

ಮಹಾಲಿಂಗಪೂರ ಬಂದ್​ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಿ ಹೋರಾಟಕ್ಕಿಳಿದ ಜನತೆ: ಇತ್ತ ನಿತ್ಯ ಒಂದಿಲ್ಲೊಂದು ಹೋರಾಟಕ್ಕೆ ಧುಮಿಕಿರೋ ತಾಲೂಕು ಹೋರಾಟ ಸಮಿತಿ ಸದಸ್ಯರು ಕಳೆದ ವಾರ ಸ್ವಯಂ ಪ್ರೇರಿತವಾಗಿ ಮಹಾಲಿಂಗಪೂರ ಪಟ್ಟಣ ಬಂದ್​ ಕರೆ ನೀಡಿದ್ದರು. ಇದಕ್ಕೆ ಸ್ಪಂದನೆ ನೀಡಿದ ಮಹಾಲಿಂಗಪೂರ ಪಟ್ಟಣದ ಜನತೆ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಿ ನಗರದಾದ್ಯಂತ ಮೆರವಣಿಗೆ ಮಾಡಿ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶನ ಮಾಡಿ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಸಂದೇಶವನ್ನೂ ಸಹ ರವಾನಿಸಿದ್ದರು. ನೂತನ ತಾಲೂಕು ರಚನೆಗಾಗಿ ಕರೆ ನೀಡಿದ್ದ ಮಹಾಲಿಂಗಪೂರ ಪಟ್ಟಣ ಬಂದ್​ ಸಂಪೂರ್ಣ ಯಶಸ್ವಿಯಾಗಿತ್ತು. 

ಮೋದಿ ಮನಸೆಳೆದ ಉತ್ತರ ಕರ್ನಾಟಕದ ಮುಧೋಳ ಶ್ವಾನ, ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ತಂಡಕ್ಕೆ ಸೇರ್ಪಡೆ

ಇಚ್ಛಾಶಕ್ತಿ ಕೊರತೆ, ಸ್ಪಂದನೆ ನೀಡದೇ ಇರುವ ಸರ್ಕಾರ ಮತ್ತು ಜನಪ್ರತಿನಿಧಿಗಳು; ಮಹಾಲಿಂಗಪೂರ ಪಟ್ಟಣವನ್ನ ನೂತನ ತಾಲೂಕನ್ನಾಗಿ ರಚನೆ ಮಾಡಬೇಕೆಂಬ ಕೂಗು ಕಳೆದ 32 ವರ್ಷಗಳಿಂದ ನಡೆಯುತ್ತಾ ಬಂದಿದ್ದರೂ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ಸರ್ಕಾರಗಳಾಗಲಿ ಮತ್ತು ಜನಪ್ರತಿನಿಧಿಗಳಾಗಲಿ ಸ್ಪಂದನೆ ಮಾಡಲೇ ಇಲ್ಲ. ಮೇಲಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಸಹ ಕಾಣುತ್ತಲೇ ಬಂತು. ಈ ಮಧ್ಯೆ ಕಳೆದ ಬಾರಿಯೂ ನೂತನ ತಾಲೂಕುಗಳ ರಚನೆ ಮಾಡುವಂತಹ ಸಂದರ್ಭದಲ್ಲಿಯೂ ಸಹ ಮಹಾಲಿಂಗಪೂರ ಹೋರಾಟಗಾರರು ಸಹ ನಿರಂತರ ಹೋರಾಟ ಮಾಡಿದ್ರು, ಆದ್ರೆ ರಾಜಕೀಯ ಇಚ್ಚಾಶಕ್ತಿಯಿಂದ ಅಕ್ಕಪಕ್ಕದ ಊರುಗಳು ತಾಲೂಕು ರಚನೆಯಾಗುವಲ್ಲಿ ಯಶಸ್ವಿಯಾದವೇ ಹೊರತು ಮಹಾಲಿಂಗಪೂರ ನೂತನ ತಾಲೂಕು ಆಗಲಿಲ್ಲ. 

 ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಲಿಂಗಪೂರ ನೂತನ ತಾಲೂಕು ರಚನೆಗಾಗಿ ನಿತ್ಯ ಒಂದಿಲ್ಲೊಂದು ಹೋರಾಟಗಳು ನಡೆಯುತ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ಪಂದನೆ ನೀಡದೇ ಹೋದಲ್ಲಿ ಉಗ್ರ ಹೋರಾಟದ ಎಚ್ಚರಕೆಯನ್ನ ಹೋರಾಟಗಾರರು ನೀಡಿದ್ದು, ಇದಕ್ಕೆ ಸರ್ಕಾರ ಇನ್ನಾದ್ರೂ ಕ್ರಮಕ್ಕೆ ಮುಂದಾಗುತ್ತಾ ಅಂತ ಕಾದು ನೋಡಬೇಕಿದೆ..

Latest Videos
Follow Us:
Download App:
  • android
  • ios