ವರದಿ : ಆತ್ಮಭೂಷಣ್‌

ಮಂಗಳೂರು (ಆ.17):  ಕೇಂದ್ರ ಸರ್ಕಾರ ದೇಶಾದ್ಯಂತ 3.0 ಅನ್‌ಲಾಕ್‌ ಪ್ರಕಟಿಸಿ ದಿನಗಳೇ ಕಳೆದರೂ ಕೇರಳ- ಕರ್ನಾಟಕ ಗಡಿ ಭಾಗ ಹೊಂದಿರುವ ಕಾಸರಗೋಡು-ದ.ಕ. ಜಿಲ್ಲೆಯ ಗಡಿಭಾಗದ ಜನತೆಗೆ ಮುಕ್ತ ಸಂಚಾರಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ.

ಅನ್‌ಲಾಕ್‌ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎರಡು ದಿನಗಳ ಹಿಂದೆಯಷ್ಟೇ ತಲಪಾಡಿ, ಸಾರಡ್ಕ, ಸ್ವರ್ಗ ಹೊರತುಪಡಿಸಿ ಬೇರೆಲ್ಲ ಗಡಿ ಭಾಗಗಳ ತಡೆಗಳನ್ನು ತೆರವುಗೊಳಿಸಿತ್ತು. ಸುಮಾರು 14 ಕಡೆಗಳಲ್ಲಿ ಗಡಿ ಭಾಗದ ಜನತೆಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಕಾಸರಗೋಡು ಜಿಲ್ಲಾಡಳಿತ ಸಂಚಾರ ತಡೆ ಮುಂದುವರಿಸಿದೆ.

ಕಾಸರಗೋಡಿನ ಗಡಿಭಾಗದ ಜನತೆ ದ.ಕ. ಜಿಲ್ಲೆಯನ್ನು ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ. ಆದರೆ ಇಲ್ಲಿನ ಗಡಿಪ್ರದೇಶದ ಜನತೆ ಕಾಸರಗೋಡು ಗಡಿ ಭಾಗಕ್ಕೆ ತೆರಳಿದರೆ ಅಲ್ಲಿನ ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಪ್ರವೇಶಿಸಿದರೆ ಕ್ವಾರಂಟೈನ್‌ಗೆ ಕಳುಹಿಸುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ಸಂಪೂರ್ಣ ಗಡಿ ತೆರವು ಸಾಧ್ಯವಾಗದೆ ಜನತೆಯ ಸಂಚಾರ ಪರದಾಟ ಮುಂದುವರಿದಿದೆ.

ದ.ಕ.ದಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ಅಧಿಕವಾಗಿರುವುದರಿಂದ ಗಡಿ ಪೂರ್ತಿ ತೆರವು ಸಾಧ್ಯವಿಲ್ಲ ಎಂದು ಕೇರಳ ಪಟ್ಟುಹಿಡಿದಿದೆ. ಅದೇ ರೀತಿ ಕಾಸರಗೋಡಿನಲ್ಲೂ ಕೊರೋನಾ ಪ್ರಕರಣ ಕಡಿಮೆಯಾಗಿದೆ ಎಂದೇನಲ್ಲ. ಒಟ್ಟಿನಲ್ಲಿ ಗಡಿಭಾಗದ ಜನತೆ ಮಾತ್ರ ಉಭಯ ರಾಜ್ಯಗಳ ಮಧ್ಯೆ ಸದ್ಯಕ್ಕಂತೂ ಮುಕ್ತವಾಗಿ ಸಂಚರಿಸುವ ಸಂಭವ ಕಾಣುತ್ತಿಲ್ಲ.

ತರಕಾರಿಗೂ ತಡೆ: ಕಾಸರಗೋಡು ಜಿಲ್ಲೆಗೆ ತರಕಾರಿ ಮತ್ತಿತರ ಅಗತ್ಯ ವಸ್ತುಗಳು ಕರ್ನಾಟಕದಿಂದಲೇ ಪೂರೈಕೆಯಾಗಬೇಕು. ಪ್ರಸಕ್ತ ತಲಪಾಡಿ ಗಡಿಯಲ್ಲಿ ಮಾತ್ರ ಕೇರಳ ನಡುವೆ ಸಂಚಾರಕ್ಕೆ ಪಾಸ್‌ ಮೂಲಕ ಅವಕಾಶ ನೀಡಲಾಗಿದೆ. ಅನ್‌ಲಾಕ್‌ ಬಳಿಕ ಪೆರ್ಲ, ಬದಿಯಡ್ಕಗಳಿಗೆ ದ.ಕ. ಜಿಲ್ಲೆಯ ಗಡಿಭಾಗ ಮೂಲಕ ತರಕಾರಿ ಪೂರೈಕೆಯಾಗಿತ್ತು. ಆದರೆ ಕೇರಳ ಪೊಲೀಸರು ಗಡಿಯೊಳಗೆ ಬಂದ ಕಾರಣಕ್ಕೆ ತರಕಾರಿ ವಾಹನವನ್ನೇ ಮುಟ್ಟುಗೋಲು ಹಾಕಿದ್ದರು. ಇದರಿಂದಾಗಿ ಎರಡು ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ತರಕಾರಿ ಕೊರತೆ ಉಂಟಾಗಿತ್ತು ಎನ್ನುತ್ತಾರೆ ಗಡಿಭಾಗದ ಜನತೆ.

ಮೂರು ತಿಂಗಳಲ್ಲಿ ತಲೆ ಎತ್ತಿತು ಟಾಟಾ ಕೋವಿಡ್ ಆಸ್ಪತ್ರೆ

ಸಮೀಪದ ಕ್ಲಿನಿಕ್‌ಗೂ ತೆರಳುವಂತಿಲ್ಲ: ಉಭಯ ರಾಜ್ಯಗಳ ಗಡಿಭಾಗ ಪಾಣಾಜೆಯ ಸ್ವರ್ಗ ಎಂಬಲ್ಲಿ 100 ಮೀಟರ್‌ ದೂರದಲ್ಲಿ ಕ್ಲಿನಿಕ್‌ ಇದೆ. ಅದು ಕೇರಳ ಭಾಗದಲ್ಲಿ ಇರುವುದರಿಂದ ಕರ್ನಾಟಕ ಗಡಿಭಾಗದ ಸ್ಥಳೀಯರಿಗೆ ಕಣ್ಣಂಚಿನ ದೂರದಲ್ಲಿದ್ದರೂ ಹೋಗುವಂತಿಲ್ಲ. ಅಪ್ಪಿತಪ್ಪಿ ಕ್ಲಿನಿಕ್‌ಗೆ ತೆರಳಿದರೆ ಕ್ವಾರಂಟೈನ್‌ ಗ್ಯಾರಂಟಿ ಎಂಬಂತಾಗಿದೆ. ಇದೇ ರೀತಿ ಸ್ಥಳೀಯ ಗ್ರಾಮೀಣ ಬ್ಯಾಂಕೊಂದರ ಅಧಿಕಾರಿಯೊಬ್ಬರು ಕರ್ನಾಟಕದಿಂದ ಬರುತ್ತಿದ್ದರು. ಅವರಿಗೆ ಕೇರಳ ಪ್ರವೇಶಕ್ಕೆ ತಡೆ ಮಾಡಿರುವುದರಿಂದ ಅವರು ಗಡಿಭಾಗದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯಬೇಕಾಯಿತು. ಅಸೌಖ್ಯದವರನ್ನು ನೋಡಲು ಗಡಿದಾಟಿ ಕೇರಳಕ್ಕೆ ಬಂದವರನ್ನು ಕರ್ನಾಟಕಕ್ಕೆ ವಾಪಸ್‌ ಕಳುಹಿಸಿ, ಅಲ್ಲಿನ ಮನೆ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದ ವಿದ್ಯಮಾನವೂ ನಡೆದಿದೆ ಎನ್ನುತ್ತಾರೆ ಗಡಿನಾಡ ವೈದ್ಯ ಡಾ. ಮೋಹನ ಕುಮಾರ್‌ ಏತಡ್ಕ.

17ರಂದು ಕೇರಳ ಹೈಕೋರ್ಟ್‌ ವಿಚಾರಣೆ

ಅನ್‌ಲಾಕ್‌ ಬಳಿಕವೂ ಗಡಿ ಸಂಚಾರಕ್ಕೆ ಮುಕ್ತಗೊಳಿಸದ ಕೇರಳ ಸರ್ಕಾರದ ನಿಲುವು ವಿರೋಧಿಸಿ ಕಾಸರಗೋಡು ಬಿಜೆಪಿ ಜಿಲ್ಲಾ ಘಟಕ ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ಆ.17ರಂದು ನಡೆಯಲಿದೆ. ಲಾಕ್ಡೌನ್‌ ವೇಳೆ ಕೊರೋನಾ ಕೇಸ್‌ ಹೆಚ್ಚಳ ಹಿನ್ನೆಲೆಯನ್ನು ಮುಂದಿರಿಸಿ ಮೊದಲ ಬಾರಿಗೆ ಕೇರಳವೇ ಕರ್ನಾಟಕ ಗಡಿ ಪ್ರದೇಶ ಬಂದ್‌ ಮಾಡಿತ್ತು. ಬಳಿಕ ಕರ್ನಾಟಕ ಕೂಡ ಗಡಿ ಪ್ರದೇಶ ಬಂದ್‌ ಮಾಡಿದಾಗ ಕೇರಳ ಕೋರ್ಟ್‌ ಮೊರೆ ಹೋಗಿ ಶರ್ತಬದ್ಧ ತೆರವುಗೊಳಿಸುವಂತೆ ಆದೇಶ ಪಡೆದಿತ್ತು.

ಕಾಸರಗೋಡು-ಮಂಗಳೂರು ಮಧ್ಯೆ ಮತ್ತೆ ಪಾಸ್ ವ್ಯವಸ್ಥೆ

ತಲಪಾಡಿ ಗಡಿಯಲ್ಲಿ ಮಾತ್ರ ಉಭಯ ರಾಜ್ಯಗಳ ಮಧ್ಯೆ ಪಾಸ್‌ ಮೂಲಕ ಸಂಚಾರಕ್ಕೆ ಅವಕಾಶ ಇದೆ. ಅಲ್ಲದೆ 21 ದಿನಗಳ ಸ್ವಾಬ್‌ ಟೆಸ್ಟ್‌ ನೆಗೆಟಿವ್‌ ವರದಿ ಕಡ್ಡಾಯ ಹೊಂದಿರಬೇಕು. ಕೊರೋನಾ ಹಿನ್ನೆಲೆಯಲ್ಲಿ ಉಳಿದ ಗಡಿಭಾಗಗಳಿಂದ ಸಂಚಾರಕ್ಕೆ ಅನುಮತಿ ಇಲ್ಲ.

- ರೂಪಾ, ಎಸ್ಪಿ, ಕಾಸರಗೋಡು.

ತಲಪಾಡಿ ಮೂಲಕ ಮಾತ್ರ ಕಾಸರಗೋಡು-ದ.ಕ. ಮಧ್ಯೆ ಸಂಚಾರ ನಡೆಯುತ್ತಿದೆ. ಇನ್ನು ಮುಂದೆ ಸಾರಡ್ಕ ಚೆಕ್‌ಪೋಸ್ಟ್‌ ಮೂಲಕವೂ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲವಾಗಲು ಪಾಸ್‌ ನೀಡುವ ಹೊಣೆಯನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡಲು ತೀರ್ಮಾನಿಸಲಾಗಿದೆ.

- ಡಾ. ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.