ಕಲಬುರಗಿ [ಮಾ.18]:  ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಈಗಾಗಲೇ ಕೊರೋನಾದಿಂದ ಮೃತ ವೃದ್ಧನ ಪುತ್ರಿಗೆ ಸೋಂಕು ತಗುಲಿದ್ದು, ಇದೀಗ ವೃದ್ಧನಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರ ವೈದ್ಯಕೀಯ ವರದಿಯೂ ‘ಪಾಸಿಟಿವ್‌’ ಎಂದು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಲಬುರಗಿಯಾದ್ಯಂತ ಬಿಗಿ ನಿರ್ಬಂಧಗಳನ್ನು ಹೇರಿದೆ. ಸೋಂಕಿತ ವೈದ್ಯ ವಾಸಿಸುವ ನಿವಾಸದ ಸುತ್ತಮುತ್ತ 300 ಮೀಟರ್‌ವರೆಗೂ ಜಿಲ್ಲಾಡಳಿತ ಜನ ಸಂಚಾರ ನಿಷೇಧಿಸಿದೆ. ಚೀನಾದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದ ವುಹಾನ್‌ನ ಮಾದರಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊರೋನಾದಿಂದ ಮಾ.10 ರಂದು ಸಾವಿಗೀಡಾದ ಕಲಬುರಗಿಯ 76 ವರ್ಷದ ವ್ಯಕ್ತಿಗೆ ಕೆಮ್ಮು-ಜ್ವರ ಬಂದಾಗ ಆರಂಭದಲ್ಲಿ ಅವರ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ 65 ವರ್ಷದ ಕುಟುಂಬ ವೈದ್ಯರಿಗೂ ಈಗ ಸೋಂಕು ತಗುಲಿದೆ. ಇದಕ್ಕೂ ಮೊದಲು ಮೃತ ವ್ಯಕ್ತಿಯ ಪುತ್ರಿಗೂ ಕೊರೋನಾ ವೈರಾಣು ತಗುಲಿರುವುದು ಖಚಿತವಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮೂರಕ್ಕೇರಿದೆ.

ಸೋಂಕು ಪತ್ತೆಯಾಗಿರುವ ವೈದ್ಯರು ಸರ್ಕಾರದ ಸೇವೆಯಲ್ಲಿದ್ದರು, ನಿವೃತ್ತಿ ನಂತರ ಖಾಸಗಿಯಾಗಿ ವೈದ್ಯ ವೃತ್ತಿ ಆರಂಭಿಸಿದ್ದರು. ಇವರಿಗೆ ಸೋಂಕು ಕಂಡಿದ್ದರಿಂದ ಪ್ರತ್ಯೇಕವಾಗಿ ಇಎಸ್‌ಐಸಿ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ. ಈ ವೈದ್ಯರು ನೆಲೆಸಿರುವ ಮನೆಯ ಸುತ್ತಮುತ್ತ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ತಂಡಗಳು ಅವಿರತವಾಗಿ ಕೆಲಸ ಮಾಡುತ್ತಿದೆ.

ಕಲಬುರಗಿ: ಜಸ್ಟ್ ಕೆಮ್ಮಿದ್ದಷ್ಟೆ, ಆಂಬುಲೆನ್ಸ್‌ನಲ್ಲಿ ಬಂದು ಎತ್ತಾಕ್ಕೊಂಡೋದ್ರು!...

ಕೊರೋನಾದಿಂದ ಮೃತ ವ್ಯಕ್ತಿಯ ಮನೆ ಇರುವ ವಾರ್ಡ್‌ ಅನ್ನು ಈಗಾಗಲೇ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಜಿಲ್ಲಾಡಳಿತ ಅಲ್ಲಿರುವ 3 ಸಾವಿರ ಮನೆಗಳ ಸಮೀಕ್ಷೆ ಮಾಡಿದೆ. 50 ಮಂದಿ ಆರೋಗ್ಯ ಸಿಬ್ಬಂದಿ ತಂಡವನ್ನು ರಚಿಸಿಕೊಂಡು ಪ್ರತಿ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದೀಗ ವೈದ್ಯರ ಮನೆಯ ಕಾಲೋನಿಯಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾಲೋನಿಯಲ್ಲೂ ಜನ, ವಾಹನಗಳ ಓಡಾಟವನ್ನು ನಿರ್ಬಂಧಿಸಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಬಂದ್‌ ವಾತಾವರಣ:

ಜಿಲ್ಲೆಯಲ್ಲಿ ಮೂರನೇ ಕೊರೋನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜನ ಮನೆಯಿಂದ ಹೊರಬರುವುದಕ್ಕೇ ಹೆದರುವಂತಾಗಿದೆ. ವಾಣಿಜ್ಯ ಮಳಿಗೆಗಳು, ಹೋಟೆಲ್‌, ರಸ್ತೆ ಬದಿ ಅಂಗಡಿಗಳೆಲ್ಲವನ್ನೂ ಜಿಲ್ಲಾಡಳಿತ ಸಂಪೂರ್ಣ ಬಂದ್‌ ಮಾಡಿಸಿದೆ. ಅಗತ್ಯ ಕೆಲಸಗಳಿಗೆ ಮಾತ್ರ ಜನ ಹೊರಗಡೆ ಬರುತ್ತಿರುವದರಿಂದ ನಗರದಲ್ಲಂತೂ ಬಂದ್‌ ವಾತಾವರಣವಿದೆ. ಹೊರರಾಜ್ಯ, ಹೊರ ಜಿಲ್ಲೆಗಳಿಗೆ ಕಲಬುರಗಿಯಿಂದ ಸಂಚರಿಸುವ ಬಸ್‌ಗಳ ಸಂಖ್ಯೆಯನ್ನು ಭಾರೀ ಕಡಿತಗೊಳಿಸಲಾಗಿದೆ. ಮದ್ಯ, ಮಾಂಸ ಮಾರಾಟದ ಮೇಲೂ ನಿಷೇಧ ಹೇರಲಾಗಿದೆ. ಹೊರರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಕಲಬುರಗಿಯನ್ನು ಸಂಪರ್ಕಿಸುವ ಬಸ್‌ಗಳ ಸಂಖ್ಯೆಯನ್ನು ಕಡಿತಗೊಂಡಿದೆ. ಜಿಲ್ಲೆಯೊಳಗೆ 9 ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಹೊರಭಾಗದಿಂದ ಆಗಮಿಸುವ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮದುವೆ, ಮಂಜಿಯಂಥ ಶುಭ ಕಾರ್ಯಕ್ರಮಗಳನ್ನು ಈಗಾಗಲೇ ನಿಷೇಧಿಸಲಾಗಿದ್ದು, ಅನಿವಾರ್ಯವಾದರೆ ಅನುಮತಿ ಪಡೆದಷ್ಟೇ ಕೆಲವೇ ಕೆಲವು ಮಂದಿಗೆ ಸೀಮಿತವಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ವಿದೇಶದಿಂದ ಆಗಮಿಸುವವರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ.

ಮುಸ್ಲಿಂ ಧರ್ಮಗುರು, ರಾಜಕೀಯ ಮುಖಂಡರ ಸಭೆ

ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳು, ರಾಜಕೀಯ ಮುಖಂಡರ ಸಭೆ ನಡೆಸಲಾಗಿದೆ. ವಿದೇಶದಿಂದ ಬಂದವರು ಎಲ್ಲಿದ್ದಾರೆ? ಎಷ್ಟಿದ್ದಾರೆಂಬ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶರತ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಕೋರಿದ್ದಾರೆ. ಇದಲ್ಲದೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ, ಆಲಿಂಗನಗಳನ್ನು ತಾತ್ಕಾಲಿಕವಾಗಿ ಕೈಬಿಡುವಂತೆಯೂ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ.
 
ಏನೇನು ಕ್ರಮ?

- ಕಲಬುರಗಿಯಾದ್ಯಂತ ಮದ್ಯ,ಮಾಂಸ ಮಾರಾಟ ನಿಷೇಧ

- ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಬಂದ್‌

- ಕೊರೋನಾಗೆ ಬಲಿಯಾದ ವೃದ್ಧ, ಸೋಂಕು ಪೀಡಿತ ವೈದ್ಯನ ಮನೆ ಸುತ್ತ ನಿರ್ಬಂಧ

- ಈ ಇಬ್ಬರ ಮನೆಯ 300 ಮೀ. ಸುತ್ತ ಜನರ ಓಡಾಟಕ್ಕೆ ಬ್ರೇಕ್‌, ಬ್ಯಾರಿಕೇಡ್‌ ಅಳವಡಿಕೆ

- ಜಿಲ್ಲೆಯಾದ್ಯಂತ 9 ಚೆಕ್‌ಪೋಸ್ಟ್‌ ಸ್ಥಾಪಿಸಿ ಹೊರಗಿನಿಂದ ಆಗಮಿಸುವವರ ಆರೋಗ್ಯ ತಪಾಸಣೆ