ಗಲಭೆ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕಠಿಣ ಕ್ರಮ: ಅಲೋಕ್ ಕುಮಾರ್
ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಗಡಿಪ್ರದೇಶಗಳಲ್ಲಿ 12 ಕಡೆ ಹಾಗೂ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 6 ಕಡೆಗಳಲ್ಲಿ ಚೆಕ್‌ಪೋಸ್ಟ್
ಮಂಗಳೂರು(ಆ.05): ಕರಾವಳಿ ಜಿಲ್ಲೆಯಲ್ಲಿ 2015ರ ನಂತರ ನಡೆದ ಕೋಮು ಗಲಭೆಗೆ ಸಂಬಂಧಿಸಿದ ಆರೋಪಿಗಳ ಬಗ್ಗೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಲಿದೆ. ಈ ವರೆಗೆ ತಲೆಮರೆಸಿರುವ ಆರೋಪಿಗಳು ಹಾಗೂ ಮತ್ತೆ ಗಲಭೆ ಕೃತ್ಯಕ್ಕೆ ಇಳಿದಿರುವ ಆರೋಪಿಗಳ ವಿರುದ್ಧ ಆಸ್ತಿಮುಟ್ಟುಗೋಲು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಗುರುವಾರ ದ.ಕ, ಉಡುಪಿ ಹಾಗೂ ಮಂಗಳೂರು ಕಮಿಷನರೇಟ್‌ನ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಆಗಾಗ ಕೋಮು ಸಂಘರ್ಷ ಉಂಟಾಗುವುದನ್ನು ತಪ್ಪಿಸುವುದಕ್ಕೆ ಇಂತಹ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಕೋಮು ಕೇಸಿಗೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಮೇಲೆ ಯಾವುದಾದರೂ ಪ್ರಿವೆಂಟಿವ್ ಆಗಿ ರೌಡಿ ಶೀಟ್ ತೆರೆಯುವ ಕೆಲಸ ಆಗಿದೆಯಾ? ಕೇಸಿನ ವಿಚಾರಣೆ ಹೇಗೆ ನಡೆಯುತ್ತಿದೆ ಎಂಬಿತ್ಯಾದಿ ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕು. ಶರತ್ ಮಡಿವಾಳ ಹತ್ಯೆ, ದೀಪಕ್ ರಾವ್ ಹತ್ಯೆ, ಪಿಂಕಿ ನವಾಜ್ ಹತ್ಯೆ ಯತ್ನದಂತಹ ಅನೇಕ ಪ್ರಕರಣಗಳಲ್ಲಿ ವಿಚಾರಣೆ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ. ಕೆಲವೊಮ್ಮೆ ಆರೋಪಿಗಳು ಜಾಮೀನು ಪಡೆದು ಹೊರಬರುವುದು, ತನಿಖೆ ಸರಿಯಾಗಿ ನಡೆಯದೆ ಕೇಸ್ ಖುಲಾಸೆಯಾಗಿ ಹೊರಬಂದು ಆರೋಪಿಗಳು ಮತ್ತೆ ಅಂತಹ ಕೃತ್ಯ ಮುಂದುವರಿಸುವುದು ಆಗಬಾರದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೈಕ್ ನಲ್ಲಿ ಹಿಂಬದಿ ಸವಾರರ ನಿರ್ಬಂಧ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಮಾತ್ರ: ಅಲೋಕ್ ಕುಮಾರ್
ಕೋಮು ಗಲಭೆಯಲ್ಲಿದ್ದ ಕೆಲವೊಂದು ಆರೋಪಿಗಳು ತಲೆಮರೆಸಿಕೊಂಡಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಪಿಂಕಿ ನವಾಜ್ ಹತ್ಯೆ ಯತ್ನ ಪ್ರಕರಣ ಆರೋಪಿ ನೌಷಾದ್ ಎಂಬಾತ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಗಡಿಯಲ್ಲಿ ಒಂದು ವರ್ಷ ಚೆಕ್ ಪೋಸ್ಟ್:
ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಗಡಿಪ್ರದೇಶಗಳಲ್ಲಿ 12 ಕಡೆ ಹಾಗೂ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 6 ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಸಿಎಂ ಸೂಚನೆ ಮೇರೆಗೆ ಹಾಗೂ ಅಹಿತಕರ ಘಟನೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷ ಕಾಲ ಚೆಕ್‌ಪೋಸ್ಟ್‌ಗಳು ಕಾರ್ಯವೆಸಗಲಿವೆ ಎಂದರು.
ಸೆಪ್ಟೆಂಬರ್ ವೇಳೆಗೆ ಕೇರಳ ಹಾಗೂ ದ.ಕ. ಗಡಿಭಾಗದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಗಡಿ ಭಾಗದಲ್ಲಿ ಭದ್ರತೆ ಹೆಚ್ಚಳ ಹಾಗೂ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಮಂಗಳೂರು ಕಮಿಷನರ್ ಶಶಿಕುಮಾರ್, ಉಡುಪಿ ಎಸ್ಪಿ ವಿಷ್ಣುವರ್ಧನ್, ದ.ಕ. ಎಸ್ಪಿ ಋುಷಿಕೇಶ್ ಸೋನವಾಣೆ ಇದ್ದರು.
ಸಭೆಗೆ ಮುನ್ನ ಅಲೋಕ್ ಕುಮಾರ್ ಅವರು ಸುರತ್ಕಲ್‌ಗೆ ತೆರಳಿ ಫಾಝಿಲ್ ಹತ್ಯೆ ಘಟನೆ ನಡೆದ ಪ್ರದೇಶದಲ್ಲಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪೇಟೆಯ ಜನರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಬಳಿಕ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಭೆಯ ನಂತರ ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಬಂದೋಬಸ್ತ್ ಬಗ್ಗೆ ಸೂಚನೆ ನೀಡಿದರು. ಅಲ್ಲಿಂದ ಬೆಳ್ಳಾರೆಗೆ ತೆರಳಿ ಅಲ್ಲಿನ ಠಾಣೆಯಲ್ಲಿ ಸಭೆ ನಡೆಸಿದರು. ಅಲ್ಲಿನ ಘಟನಾ ಸ್ಥಳಕ್ಕೂ ಭೇಟಿ ನೀಡಿದರು.
Mangaluru: ಬೈಕ್‌ನಲ್ಲಿ ಹಿಂಬದಿ ಸವಾರರ ನಿರ್ಬಂಧ ಆದೇಶ ವಾಪಾಸ್!
ಪ್ರವೀಣ್ ಹತ್ಯೆಯ ಹಂತಕರ ಸುಳಿವು ಪತ್ತೆ
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಂತಕ ಸುಳಿವು ಪೊಲೀಸ್ ಇಲಾಖೆಗೆ ಲಭಿಸಿದೆ. ಪ್ರವೀಣ್‌ನ ಹತ್ಯೆ ನಡೆಸಿದವರು ಯಾರು, ಯಾರೆಲ್ಲಾ ಇದ್ದಾರೆ ಎಂಬ ಎಲ್ಲ ಮಾಹಿತಿಯೂ ಲಭಿಸಿದೆ. ಸದ್ಯ ಪ್ರಮುಖ ಆರೋಪಿಗಳು ತಲೆಮರೆಸಿದ್ದು ಅವರ ಪತ್ತೆಗೆ ಕಾರ್ಯಾಚರಣೆ ಬಿಗುಗೊಳಿಸಲಾಗಿದೆ. ಈಗಾಗಲೇ ಈ ಘಟನೆಯಲ್ಲಿ ನಾಲ್ವರು ಸಂಚುಕೋರರನ್ನು ಬಂಧಿಸಲಾಗಿದೆ. ಒಬ್ಬಾತನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ದ.ಕ.ಪೊಲೀಸರೇ ಶೀಘ್ರವೇ ಹಂತಕರನ್ನು ಬಂಧಿಸಲಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ಪ್ರವೀಣ್ ಹತ್ಯೆ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಆಗಮಿಸಿ ತನಿಖೆ ನಡೆಸುತ್ತಿದೆ. ಈಗ ಎನ್‌ಐಎನಿಂದ ಪ್ರಾಥಮಿಕ ತನಿಖೆ ಮಾತ್ರ ನಡೆಯುತ್ತಿದ್ದು, ಬಳಿಕ ಪೂರ್ಣ ಪ್ರಮಾಣದ ತನಿಖೆಗೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುವುದು. ಎನ್‌ಐಎ ಅಧಿಕಾರಿಗಳು ಸಿಕ್ಕಿದರೆ ಅವರ ಜೊತೆ ಮಾತನಾಡುವುದಾಗಿ ಅಲೋಕ್ ಕುಮಾರ್ ಹೇಳಿದರು.