ನವಲಗುಂದ(ಜೂ.28): ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಮೊರಬ ಗ್ರಾಮವನ್ನು ಶನಿವಾರ ಸೀಲ್‌ಡೌನ್‌ ಮಾಡಲಾಗಿದೆ. ಗ್ರಾಮದ ಸುತ್ತಮುತ್ತಲು ಗ್ರಾಮ ಮತ್ತು ಪಟ್ಟಣಗಳಿಗೆ ಹೋಗುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌, ಮುಳ್ಳಿನ ಕಂಠಿಗಳನ್ನು ಇಟ್ಟು ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.

ಇದರಿಂದ ಶಿರೂರ, ಅಮ್ಮಿನಭಾವಿ, ಗುಮ್ಮಗೋಳ, ಶಿವಳ್ಳಿ ಹಾಗೂ ನವಲಗುಂದಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್‌ ಆದಂತಾಗಿದೆ. 'ಕನ್ನಡಪ್ರಭ' ಹಾಗೂ 'ಸುವರ್ಣ ನ್ಯೂಸ್‌ ಡಾಟ್‌ ಕಾಂ' ಹೆಚ್ಚಿನ ಕಠಿಣ ಕ್ರಮದ ಅಗತ್ಯದ ಕುರಿತು ಶನಿವಾರ ಸಚಿತ್ರ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಿದೆ. ಗ್ರಾಮಕ್ಕೆ ಯಾರೂ ಬರದಂತೆ, ಯಾರೂ ಕೂಡಾ ಗ್ರಾಮದಿಂದ ಹೊರಗಡೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ರೈತರಿಗೆ ಬಿತ್ತನೆ ಮಾಡಲು ಕೃಷಿ ಸಲಕರಣೆಗಳನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ಪಡೆಯುವಂತೆ ಸೂಚನೆ ನೀಡಲಾಗಿದೆ. ದಿನಸಿ ಅಂಗಡಿಗಳನ್ನು ನಿಯೋಜನೆ ಮಾಡಿದ್ದು, ಇನ್ನೂ ತರಕಾರಿಯನ್ನು ಕೊಂಡುಕೊಳ್ಳಲು ಜನರಿಗಾಗಿ ಗ್ರಾಮದ ಬಸ್‌ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಧಾರವಾಡದಲ್ಲಿ ಮತ್ತೆ 19 ಕೊರೋನಾ ಪ್ರಕ​ರಣ ಪತ್ತೆ

ಸಹಾಯಕ ಆಯುಕ್ತ ಜುಬೇರಅಹ್ಮದ ಮತ್ತು ತಹಸೀಲ್ದಾರ್‌ ನವೀನ ಹುಲ್ಲೂರ, ಸಿಪಿಐ ಸಿ.ಜಿ. ಮಠಪತಿ ಹಾಗೂ ಮೊರಬ ಪಿಡಿಓ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.