ಅನಧಿಕೃತ ಮದ್ಯ ಮಾರಾಟ ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ
ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲೆಯಲ್ಲಿ ಅನಧಿಕೃತ ಮದ್ಯ ಮಾರಾಟ ಕಂಡು ಬಂದರೆ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.
ಮೈಸೂರು : ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲೆಯಲ್ಲಿ ಅನಧಿಕೃತ ಮದ್ಯ ಮಾರಾಟ ಕಂಡು ಬಂದರೆ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಚ್.ಡಿ. ಕೋಟೆ, ಸರಗೂರು ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಭಟ್ಟಿಪ್ರಕರಣಗಳು ಕಂಡು ಬಂದರೆ ಕೂಡಲೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ದಿನ ಲಿಕ್ಕರ್ ಶಾಪ್‌ಗಳಿಗೆ ಭೇಟಿ ನೀಡಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಆಮಿಷವೊಡ್ಡಲು ಲಿಕ್ಕರ್ ಶಾಪ್‌ಗಳಲ್ಲಿ, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಜನರಿಗೆ ಲಿಕ್ಕರ್ ನೀಡಿ ಬೇರೆಯವರು ದುಡ್ಡು ಪಾವತಿ ಮಾಡುವ ಬಗ್ಗೆ ಗಮನಹರಿಸಿ. ಈ ಬಗ್ಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮಾಲೀಕರಿಗೆ ಸೂಚಿಸಬೇಕು ಎಂದು ಅವರು ತಿಳಿಸಿದರು.
ಬಾರ್‌ಗಳಿಂದ ಮನೆಗಳಿಗೆ ಬಲ್‌್ಕ ಆಗಿ ಲಿಕ್ಕರ್ ಸರಬರಾಜು ಮಾಡುವ ಬಗ್ಗೆ ಗಮನಹರಿಸಿ. ಹಳ್ಳಿಗಳ ಕಿರಾಣಿ ಅಂಗಡಿಗಳು ಹಾಗೂ ಮನೆಗಳಲ್ಲಿ ಮದ್ಯ ಮಾರಾಟದ ಕುರಿತು ಪರಿಶೀಲಿಸಿ, ಮಾರಾಟ ಕಂಡುಬಂದರೆ ಪ್ರಕರಣ ದಾಖಲಿಸಿ. ಲಿಕ್ಕರ್ ಅಂಗಡಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿ ಕಾರ್ಯ ನಿರ್ವಹಿಸಬೇಕು ಎಂದರು.
ಅಬಕಾರಿ ಇಲಾಖೆ ವತಿಯಿಂದ ಚೆಕ್‌ಪೋಸ್ಟ್ ಗಳಲ್ಲಿ ಪರಿಶೀಲನೆ ಮಾಡಬೇಕು. ಮತದಾನ ಮುಂಚೆ 48 ಗಂಟೆಗಳ ಒಣ ದಿನಗಳಲ್ಲಿ ಲಿಕ್ಕರ್ ನಿಷೇಧವಾಗುವ ಸಂಬಂಧ ಆ ದಿನಗಳಲ್ಲಿ ಅಬಕಾರಿ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ವಾಣಿಜ್ಯ ತೆರಿಗೆ ಇಲಾಖೆ:
ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಸಿಬ್ಬಂದಿ ನಿಯೋಜಿಸಬೇಕು. ಕೇರಳದಿಂದ ಬರುವ ಕಮರ್ಷಿಯಲ್ ವಾಹನಗಳ ಪರಿಶೀಲಿಸಬೇಕು. ಅಂತರ ರಾಜ್ಯ ಗಡಿ ಭಾಗದ ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ, ವಾಣಿಜ್ಯ ತೆರಿಗೆಗಳ ಇಲಾಖೆಯವರು ಪರಿಶೀಲನೆ ನಡೆಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜನರಿಗೆ ಆಮಿಷವೊಡ್ಡಲು ಹಲವು ಬಗೆಯಲ್ಲಿ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿರುತ್ತವೆ. ಹೆಚ್ಚಿನ ಮೊತ್ತದ ಹಣ, ಸೀರೆ, ಕುಕ್ಕರ್, ಪಾತ್ರೆ, ಬಟ್ಟೆಗಳು ಮತ್ತಿತರ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಣೆ ಮಾಡುವ ಸಂಭವವಿರುತ್ತದೆ. ಹೀಗಾಗಿ ಮೈಯೆಲ್ಲಾ ಕಣ್ಣಾಗಿ, ವಾಹನಗಳ ತಪಾಸಣೆ ನಡೆಸಬೇಕು. ತಪಾಸಣೆ ಕಾರ್ಯದ ವಿಡಿಯೋ ಚಿತ್ರೀಕರಣ ಮಾಡಬೇಕು. ಯಾವುದೇ ಸಾಮಗ್ರಿಗಳ ಸಾಗಣೆ ಬಗ್ಗೆ ಸಂಶಯ ಬಂದಲ್ಲಿ ಸಮಗ್ರವಾಗಿ ತಪಾಸಣೆ ನಡೆಸಿ, ಅಕ್ರಮ ಕಂಡು ಬಂದಲ್ಲಿ ಕೂಡಲೆ ಕ್ರಮ ಕೈಗೊಂಡು ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವುದರಿಂದ, ಸರದಿ ಆಧಾರದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಬಂಧಪಟ್ಟಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಅಬಕಾರಿ ಇಲಾಖೆಯ ರವಿಶಂಕರ್, ವಾಣಿಜ್ಯ ತೆರಿಗೆ ಇಲಾಖೆಯ ಕಂಬಣ್ಣ, ಸಾರಿಗೆ ಇಲಾಖೆಯ ಅಧಿಕಾರಿಗಳು ಇದ್ದರು.