ಬೆಂಗಳೂರು [ಸೆ.02]:  ಮೂರು ಅಂತಸ್ತಿಗಿಂತ ಹೆಚ್ಚಿನ ಕಟ್ಟಡ ನಿರ್ಮಾಣದ ವೇಳೆ ನಕ್ಷೆ ಉಲ್ಲಂಘಿಸಿದರೆ ನಿರ್ಮಾಣಗೊಂಡ ಕಟ್ಟಡದ ಶೇ.10ರಷ್ಟುವಶಕ್ಕೆ, ಕಟ್ಟಡ ನಿರ್ಮಾಣಕ್ಕೆ 12 ಇಲಾಖೆಯಿಂದ ಕಡ್ಡಾಯವಾಗಿ 20 ಪ್ರಮಾಣ ಪತ್ರ ಪಡೆಯುವುದು, ಬೆಳಗ್ಗೆ 6ರಿಂದ ಸಂಜೆ 6ರ ಒಳಗೆ ಮಾತ್ರ ಕಟ್ಟಡ ನಿರ್ಮಾಣ ಕಾರ್ಯ ನಡೆಸುವುದು ಸೇರಿದಂತೆ ಹೊಸ ನಿಯಮಗಳನ್ನು ಒಳಗೊಂಡಿರುವ ನೂತನ ಕಟ್ಟಡ ನಿರ್ಮಾಣ ಬೈಲಾ ಜಾರಿಗೆ ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ಸಿದ್ಧಪಡಿಸಿರುವ ಹೊಸ ‘ಬಿಬಿಎಂಪಿ ಕಟ್ಟಡ ನಿರ್ಮಾಣ ಕರಡು ಬೈಲಾ- 2019’ದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಸಾಕಷ್ಟುಅಂಶಗಳನ್ನು ಸೇರಿಸಲಾಗಿದೆ. ಪ್ರಮುಖವಾಗಿ ನಕ್ಷೆ ಮಂಜೂರಾತಿ ಪಡೆದ ನಂತರ ಬೈಲಾ ಪ್ರಕಾರ ಕಟ್ಟಡ ನಿರ್ಮಾಣ ಮಾಡುವಂತೆ ಮಾಡಲು ಕಠಿಣ ಕ್ರಮ ವಹಿಸಲಾಗುತ್ತಿದೆ. ದಂಡ ವಿಧಿಸುವುದು, ಕಟ್ಟಡವನ್ನು ಬಿಬಿಎಂಪಿ ವಶಕ್ಕೆ ಪಡೆಯುವುದು, ಒಡೆದು ಹಾಕುವುದು ಸೇರಿ ಇನ್ನಿತರ ಕ್ರಮ ಕೈಗೊಳ್ಳಲು ಬೈಲಾದಲ್ಲಿ ಸೂಚಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ರೀತಿಯ ದಾಖಲೆಗಳನ್ನು ಪಡೆಯುವುದಕ್ಕೆ ಆನ್‌ಲೈನ್‌ ವ್ಯವಸ್ಥೆ ಸಹ ಮಾಡಲಾಗುತ್ತಿದೆ.

ಬೈಲಾ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ, ಪರಿಷ್ಕರಿಸಿ ಅನುಮೋದಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಸರ್ಕಾರ ಅನುಮೋದನೆ ನೀಡಿದ ನಂತರ ಹೊಸ ಬೈಲಾ ಜಾರಿಗೆ ಬರಲಿದೆ.

12 ಇಲಾಖೆ, 20 ದಾಖಲೆ:

ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಟೈಟಲ್‌ ಡೀಡ್‌, ಸಿಟಿ ಸರ್ವೇ ಸ್ಕೆಚ್‌, ಬಿಲ್ಡಿಂಗ್‌ ಪ್ಲ್ಯಾನ್‌ ಸೇರಿದಂತೆ ಒಟ್ಟು 20 ಬಗೆಯ ದಾಖಲೆಗಳು ಅವಶ್ಯಕತೆಯಿದೆ. ಅದೇ ರೀತಿ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂ, ರೈಲ್ವೆ, ಜಿಲ್ಲಾಡಳಿತ, ಬಿಎಂಆರ್‌ಸಿಎಲ್‌ ಸೇರಿ 12 ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.

ಶೇ.10 ಕಟ್ಟಡ ಪಾಲಿಕೆ ವಶಕ್ಕೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಮೂರು ಅಂತಸ್ತಿಗಿಂತ ಹೆಚ್ಚು ಅಥವಾ ಗುಂಪು ಮನೆಗಳ ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದರೆ ಕ್ರಮವಾಗಿ ಶೇ.10 ಮತ್ತು ಶೇ.5ರಷ್ಟುಕಟ್ಟಡಗಳನ್ನು ಬಿಬಿಎಂಪಿಗೆ ಬಿಟ್ಟು ಕೊಡುವುದಾಗಿ ಕಟ್ಟಡ ಮಾಲಿಕರು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಟ್ಟಡ ನಿರ್ಮಾಣ ನಂತರ ನಕ್ಷೆ ಪ್ರಕಾರ ಮತ್ತು ಬೈಲಾದಲ್ಲಿರುವಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಖಚಿತ ಪಡಿಸಿದರೆ, ಒಪ್ಪಂದವನ್ನು ರದ್ದು ಮಾಡಿ, ಕಟ್ಟಡ ಮಾಲಿಕರಿಗೆ ಅದನ್ನು ಬಿಟ್ಟು ಕೊಡಲಾಗುತ್ತದೆ. ಒಂದು ವೇಳೆ ಬೈಲಾ ಮತ್ತು ನಕ್ಷೆ ಉಲ್ಲಂಸಿದ್ದರೆ ಒಪ್ಪಂದದಂತೆ ಶೇ.10ರಷ್ಟುಮತ್ತು ಶೇ.5ರಷ್ಟುಭಾಗವನ್ನು ಬಿಬಿಎಂಪಿ ವಶಕ್ಕೆ ಪಡೆಯಲಿದೆ. ನಂತರ ಅಕ್ರಮ ನಿರ್ಮಾಣವನ್ನು ತೆರವು ಮಾಡಲಾಗುತ್ತದೆ.

ಶೇ.5ರಷ್ಟುನಿಯಮ ಉಲ್ಲಂಘನೆ ಅಪರಾಧವಲ್ಲ:

ನೂತನ ಬೈಲಾದಲ್ಲಿ ಮನೆ ಮಾಲಿಕರಿಗೆ ಅನುಕೂಲವಾಗುವ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಅದರಂತೆ ಕಟ್ಟಡ ನಿರ್ಮಾಣದ ವೇಳೆ ಶೇ.5ರಷ್ಟುಬೈಲಾದ ನಿಯಮಗಳನ್ನು ಉಲ್ಲಂಘಿಸಿದರೆ, ಅದಕ್ಕೆ ಯಾವುದೇ ಶಿಕ್ಷೆ ವಿಧಿಸುವಂತಿಲ್ಲ. ಆದರೆ, ಕಟ್ಟಡ ಮಾಲಿಕರಿಗೆ ಶೋಕಾಸ್‌ ನೋಟಿಸ್‌ ನೀಡಿ ಉಲ್ಲಂಘನೆಗೆ ಕಾರಣ ಪಡೆಯಲಾಗುತ್ತದೆ.

ಒಸಿ ಇದ್ರೆ ಮಾತ್ರ ನೀರು, ವಿದ್ಯುತ್‌

ಜಲಮಂಡಳಿಯಿಂದ ನೀರು ಮತ್ತು ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆಯಲು ಕಟ್ಟಡ ನಿರ್ಮಾಣ ನಂತರ ಪಡೆಯುವ ‘ಸ್ವಾಧೀನಾನುಭವ ಪ್ರಮಾಣ ಪತ್ರ’ (ಒಸಿ) ಕಡ್ಡಾಯವಾಗಿಸಲಾಗುತ್ತಿದೆ. ಒಂದು ವೇಳೆ ಒಸಿ ಪಡೆಯದಿದ್ದರೆ ನೀರು ಮತ್ತು ವಿದ್ಯುತ್‌ ಸಂಪರ್ಕ ನೀಡದಂತೆ ಸಂಬಂಧಪಟ್ಟಇಲಾಖೆಗೆ ಸೂಚಿಸಲಾಗುತ್ತದೆ. ಜತೆಗೆ, ನಕಲಿ ಒಸಿ ಮೂಲಕ ನೀರು ಮತ್ತು ವಿದ್ಯುತ್‌ ಪಡೆದಿರುವುದು ಕಂಡು ಬಂದರೆ ತಕ್ಷಣ ಸಂಪರ್ಕ ಕಡಿತಗೊಳಿಸುವಂತೆಯೂ ನಿರ್ದೇಶಿಸಲು ಬೈಲಾದಲ್ಲಿ ಅವಕಾಶವಿದೆ.

2 ವರ್ಷದೊಳಗೆ ಕಟ್ಟಡ ಕಟ್ಟಬೇಕು!

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆಯೂ ಕೆಲವೊಂದು ನಿಯಮಗಳನ್ನು ಹೇರಲಾಗಿದ್ದು, ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ಮಾತ್ರ ಕಟ್ಟಡ ನಿರ್ಮಾಣ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಜತೆಗೆ, ಯಾವುದೇ ಅವಘಡ ಸಂಭವಿಸಿದರೂ ಅದಕ್ಕೆ ನಿವೇಶನ ಮಾಲಿಕರನ್ನೇ ಹೊಣೆಯಾಗಿಸಲಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆದ ಎರಡು ವರ್ಷದೊಳಗೆ ನಿರ್ಮಾಣ ಕಾರ್ಯಪೂರ್ಣಗೊಳಿಸಬೇಕು. ಒಂದು ವೇಳೆ ಅದಾಗದಿದ್ದರೆ, ಮತ್ತೊಮ್ಮೆ ಅನುಮತಿ ಪಡೆಯಬೇಕಾಗುತ್ತದೆ.

ಮಳೆ ನೀರು ಕೊಯ್ಲು, ಎಸ್‌ಟಿಪಿ ಅಳವಡಿಕೆ

108 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ, ಅಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗುವುದು. 2016 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ಮಳೆ ನೀರು ಕೊಯ್ಲಿಗೆ ಡ್ಯೂಯಲ್‌ ಪೈಪಿಂಗ್‌ ವ್ಯವಸ್ಥೆ ಅಳವಡಿಸಬೇಕಿದೆ. 30ರಿಂದ 60 ಲೀಟರ್‌ ಶೇಖರಣೆ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಅಳವಡಿಸುವಂತೆ ಸೂಚಿಸಲಾಗುತ್ತಿದೆ. ಅದರ ಜತೆಗೆ ನಿವೇಶನಗಳ ವಿಸ್ತೀರ್ಣಕ್ಕನುಗುಣವಾಗಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೂ ಸೂಚಿಸಲಾಗುತ್ತದೆ.