ಹೊಸಪೇಟೆ(ಮೇ.30): ಇಲ್ಲಿನ ಹಂಪಿ ರಸ್ತೆಯಲ್ಲಿ ಬರುವ ಅನಂತಶನಯಗುಡಿ ರೈಲ್ವೆ ವಸತಿ ಗೃಹಗಳಿಗೆ ತೆರಳುವ ಮಾರ್ಗ ಮಧ್ಯದ ಚರಂಡಿ ಸಮೀಪ ಬಿಸಾಡಿದ ನವಜಾತ ಹೆಣ್ಣು ಶಿಶು ಮೇಲೆ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆ ಗುರುವಾರ ನಗರದಲ್ಲಿ ಬೆಳಕಿಗೆ ಬಂದಿದೆ.

ಹುಟ್ಟಿದ ಹೆಣ್ಣು ಮಗುವಿನ ಹೊಕ್ಕಳು ಬಳ್ಳಿ ಸಮೇತ ಇರುವಂತಹ ಮಗುವನ್ನು ದಾರಿಯ ಪಕ್ಕದ ಚರಂಡಿ ಬಳಿ ಬಿಸಾಡಿ ಹೋಗಿರುವುದರಿಂದ ನಾಯಿಗಳು ಮಗುವಿನ ಎಡಕಾಲು ಮತ್ತು ಬಲಗೈ ತಿಂದಿವೆ. ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬರು ಮಗುವನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು ಮಗುವಿನ ಮೃತದೇಹವನ್ನು ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕೂಡ್ಲಿಗಿಯಲ್ಲಿ ಮಧ್ಯರಾತ್ರಿ ಕರಡಿ ಪ್ರತ್ಯಕ್ಷ, ಸಿಸಿ ಟಿವಿಯಲ್ಲಿ ಸೆರೆ, ಜನರ ಆತಂಕ

ಆಸ್ಪತ್ರೆಯಲ್ಲಿ ಮಗುವನ್ನು ಮರಣೋತ್ತರ ಶವಪರೀಕ್ಷೆ ನಡೆಸಿದ್ದಾರೆ. ಮಗುವನ್ನು ವಾರಸುದಾರರು ಇಲ್ಲದ ಕಾರಣ ನಗರಸಭೆ ಸಿಬ್ಬಂದಿ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೊಸಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.