ಕೂಡ್ಲಿಗಿ(ಮೇ.30): ಪಟ್ಟಣದಲ್ಲಿ ಮಧ್ಯರಾತ್ರಿ ಕರಡಿಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದು ಸಂಡೂರು ರಸ್ತೆಯಲ್ಲಿರುವ ಅಶ್ವಮೇಧ ಲಾಡ್ಜ್‌ ಆ್ಯಂಡ್‌ ರೆಸ್ಟೋರೆಂಟ್‌ನ ಸಿಸಿ ಟಿವಿಯಲ್ಲಿ ಕರಡಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ದೃಶ್ಯ ಸೆರೆಯಾಗಿದೆ.

ಕಳೆದ ಬುಧವಾರದಂದು ಪಟ್ಟಣದ ಬಳ್ಳಾರಿ ರಸ್ತೆಯ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದ ಹಿಂದುಗಡೆ ಇರುವ ಮನೆಗಳತ್ತ ಕಳ್ಳರು ಬಂದಿದ್ದಾರೆಂದು ಸುದ್ದಿ ಹರಡುತ್ತಿದ್ದಂತೆಯೇ ಪಕ್ಕದಲ್ಲಿಯೇ ಲಾಡ್ಜ್‌ ಇರುವುದರಿಂದ ಕಳ್ಳರು ಲಾಡ್ಜ್‌ ಪಕ್ಕದಲ್ಲಿ ಸುಳಿದಾಡಿರಬಹುದೆಂದು ಸಿ.ಸಿ. ಟಿವಿಯನ್ನು ಕಳ್ಳರ ಸುಳಿವಿಗಾಗಿ ಚೆಕ್‌ ಮಾಡುತ್ತಿದ್ದಾಗ ಕರಡಿಯೊಂದು ಲಾಡ್ಜ್‌ ಮುಂದುಗಡೆ ಹಾಯ್ದು ಸಂಡೂರು ರಸ್ತೆಯನ್ನು ದಾಟಿ ಹುಣಿಸೆ ತೋಪಿನತ್ತ ಹೋಗುವ ದೃಶ್ಯ ಬೆಳಕಿಗೆ ಬಂದಿದೆ. ಈ ದೃಶ್ಯ ಗುರುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದನ್ನು ನೋಡಿದ ಜನತೆ ಭಯಭೀತರಾಗಿದ್ದಾರೆ.

ಬಳ್ಳಾರಿ: ಕೋವಿಡ್‌ ಆಸ್ಪತ್ರೆ ನರ್ಸ್‌ಗೆ ಕೊರೋನಾ ಸೋಂಕು, ಆತಂಕದಲ್ಲಿ ಸಿಬ್ಬಂದಿ

ಅರಣ್ಯ ಇಲಾಖೆ ಶೋಧನೆ

ಸಿಸಿ ಟಿವಿಯಲ್ಲಿ ಕರಡಿ ಪಟ್ಟಣದಲ್ಲಿ ಪ್ರತ್ಯಕ್ಷವಾಗಿರುವುದನ್ನು ನೋಡಿದ ಕೂಡ್ಲಿಗಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಗುರುವಾರ ರಾತ್ರಿಯಿಂದಲೇ ಪಟ್ಟಣದ ಸಂಡೂರು ರಸ್ತೆ, ಚಿದಂಬರೇಶ್ವರ ದೇವಸ್ಥಾನ ಸುತ್ತಮುತ್ತ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರಡಿ ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ರೇಣುಕಾ ತಿಳಿಸಿದ್ದಾರೆ.