ಉಡು​ಪಿ(ಡಿ.05): ಇಲ್ಲಿನ ಮಲ್ಪೆ ಬೀಚಿನಲ್ಲಿ ಭಾನುವಾರ ನಾಯಿಗಳ ಪ್ರದರ್ಶನ ನಡೆಯಲಿದೆ. ಅದು ಅಂತಿಂಥ ಪ್ರದರ್ಶನವಲ್ಲ, ಅಪ್ಪಟ ಭಾರತೀಯ ತಳಿಗಳ ನಾಯಿಗಳ ಪ್ರದರ್ಶನ. ಕಳೆದ ವರ್ಷ ಚೆನ್ನೈಯಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಭಾರತೀಯ ತಳಿಗಳ ನಾಯಿಗಳ ಪ್ರದರ್ಶನ ನಡೆದಿತ್ತು, ಇದೀಗ ಮಲ್ಪೆಯಲ್ಲಿ 2ನೇ ಪ್ರದರ್ಶನ ನಡೆಯುತ್ತಿದೆ.

ಈ ಪ್ರದರ್ಶನದಲ್ಲಿ ಇನ್ನೊಂದು ವಿಶೇಷವಿದೆ. ಅದೇನೆಂದರೆ, ದೇಶಿಯ ತಳಿಗಳ ನಾಯಿಗಳ ಜೊತೆಗೆ ತಳಿಯ ಹೆಸರು ತಿಳಿಯದ, ಸ್ಥಳೀಯವಾಗಿ ‘ಕಾಟ್‌ ನಾಯಿಗಳು’ ಎಂದು ಕರೆಯಲಾಗುವ ನಾಯಿಗಳ ಪ್ರದರ್ಶನ ಕೂಡ ನಡೆಯಲಿದೆ.

ದುಬಾರಿ ಹವ್ಯಾ​ಸ:

ಇಂದು ಶ್ವಾನ ಪ್ರದರ್ಶನ ಎಂಬುದು ದುಬಾರಿ ಫ್ಯಾಶನ್‌ ಮತ್ತು ಅಂತಸ್ತಿನ ಪ್ರದರ್ಶನಗಳಾಗಿ​ವೆ. ಇಂತಹ ಪ್ರದರ್ಶನದಲ್ಲಿ ಭಾಗವಹಿಸುವ ಬಹುತೇಕ ನಾಯಿಗಳು ವಿದೇಶಿ ತಳಿಗಳಾಗಿರುತ್ತವೆ, ಅವುಗಳಲ್ಲಿ ಸಾವಿರಾರು, ಕೆಲವಂತೂ ಲಕ್ಷಾಂತರ ರು. ಬೆಲೆ ಇರುವ ನಾಯಿಗಳಾಗಿವೆ. ಅವುಗಳನ್ನು ಸಾಕುವುದು ಕೂಡ ಅಷ್ಟೇ ದುಬಾರಿ ಹವ್ಯಾಸ ಆಗಿದೆ. ಅವುಗಳ ತಳಿ ಶುದ್ಧತೆಯ ಬಗ್ಗೆ ಅವುಗಳ ಅಜ್ಜ- ಅಜ್ಜಿ, ತಂದೆ-ತಾಯಿಯರ ಪ್ರಮಾಣಪತ್ರಗಳನ್ನು ಹೊಂದಿರಬೇಕಾಗುತ್ತದೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಆದ​ರೆ, ನಮ್ಮ ದೇಶೀಯ ನಾಯಿಗಳ ಪ್ರದರ್ಶನ ನಡೆಸುವುದಕ್ಕೆ ಸಂಘಟಕರಿಗೆ ಆಸಕ್ತಿ ಇಲ್ಲ. ಇದಕ್ಕೆ ಅವುಗಳು ಸ್ಪ್ರೇ ಡಾಗ್ಸ್‌ (ಬೀಡಾಡಿ ನಾಯಿಗಳು) ಅಥವಾ ಕಾಟ್‌ ನಾಯಿಗಳೆಂಬ ತಾತ್ಸಾರವೇ ಕಾರಣ. ಇತ್ತೀಚೆಗೆ ನಮ್ಮ ರಾಜ್ಯದ ಹೆಮ್ಮೆಯ ಮುಧೋಳ್‌ ತಳಿಯ ನಾಯಿಗಳಿಗೂ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.

ಸ್ಥಳೀಯ ಸಾಮಾನ್ಯ ನಾಯಿಗಳ ಬಗೆಗಿನ ತಾತ್ಸಾರವನ್ನು ತೊಡೆಯಬೇಕು ಎಂಬ ಕಾರಣಕ್ಕೆ ಮಲ್ಪೆಯ ಮಧ್ವರಾಜ್‌ ಅನಿಮಲ್‌ ಕೇರ್‌ ಟ್ರಸ್ಟ್‌ (ಮ್ಯಾ​ಕ್ಟ್) ಮತ್ತು ಏಂಜೆಲ್ಸ್‌ ಫಾರ್‌ ಸ್ಪ್ರೇ ಡಾಗ್‌ ಜೊತೆಯಾಗಿ ಡಿ.8ರಂದು ಮಲ್ಪೆ ಬೀಚಲ್ಲಿ ‘ದ ಗ್ರೇಟ್‌ ಇಂಡಿಯನ್‌ ಡಾಗ್‌ ಶೋ’ ಆಯೋಜಿಸುತ್ತಿವೆ.

ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು, ಓರ್ವ ಸಜೀವ ದಹನ

ಮ್ಯಾಕ್ಟ್ ಈಗಾಗಲೇ ಬೀದಿ ನಾಯಿಗಳ ರಕ್ಷಣೆಗಾಗಿ ನಮ್ಮ ಸ್ವಂತ ನಮ್ಮ ಹೆಮ್ಮೆ ಎಂಬ ಅಭಿಯಾನವನ್ನು ನಡೆಸುತ್ತಿದ್ದು, ಅದರಂಗವಾಗಿ ಬೀದಿ ನಾಯಿಗಳಿಗೂ ಪ್ರದರ್ಶನದ ವೇದಿಕೆ ಹತ್ತುವ ಗೌರವವನ್ನು ಕಲ್ಪಿಸುತ್ತಿದೆ.

ಬೀದಿ ನಾಯಿಗಳಿಗೆ ಸ್ಪರ್ಧೆ, ಬಹುಮಾನ ಇದೆ

  • ಈ ‘ದ ಗ್ರೇಟ್‌ ಇಂಡಿಯನ್‌ ಡಾಗ್‌ ಶೋ’ನಲ್ಲಿ ಶುದ್ಧ ದೇಶಿಯ ತಳಿಗಳು, ಮಿಶ್ರ ತಳಿಗಳು ಮತ್ತು ರಕ್ಷಿಸಲ್ಪಟ್ಟ(ಬೀದಿ) ನಾಯಿಗಳು ಎಂದ 3 ವಿಭಾಗಗಳಿವೆ.
  • ಶುದ್ಧ ತಳಿಗಳ ಪ್ರದರ್ಶನದಲ್ಲಿ ಮುಧೋಳ, ರಾಜಾಪಾಳ್ಯಂ, ಪರಿಯ್ಯ, ಪಂಡಿಕೋನ ಇತ್ಯಾದಿ ಭಾರತೀಯ ತಳಿಗಳ ನಾಯಿಗಳು ಭಾಗವಹಿಸಲಿವೆ.
  • ಜೊತೆಗೆ ತಳಿಯ ಹೆಸರಿಲ್ಲದ, ಮನೆಯಲ್ಲಿ ಸಾಕುವ ಸಾಮಾನ್ಯ (ಬೀದಿ) ನಾಯಿಗಳಿಗೂ ಪ್ರತ್ಯೇಕ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
  • ಬೀದಿ ನಾಯಿಗಳ ಸೌಂದರ್ಯದ ಜೊತೆಗೆ, ಒಳ್ಳೆಯ ಹೆಸರು, ಡ್ರೆಸ್‌, ಸುಂದರ ಕಣ್ಣು, ಸುಂದರ ಕೂದಲು ಇತ್ಯಾದಿ ಬಹುಮಾನಗಳೂ ಇವೆ.

ಮನೆ ನಾಯಿ ಬಗ್ಗೆ ನಾಚಿಕೆ ಯಾಕ್ರಿ, ಹಮ್ಮೆ ಪಡ್ರಿ

ಮೊದಲು ನಮ್ಮವರ ಮಾನಸಿಕತೆ ಬದಲಾಗಬೇಕು, ನಮ್ಮದೇ ಅಪ್ಪಟ ತಳಿಗಳಿದ್ದರೂ, ಲಕ್ಷಲಕ್ಷ ಕೊಟ್ಟು ವಿದೇಶಿ ನಾಯಿಗಳನ್ನು ತಂದು ನಮ್ಮ ನಾಯಿ ಅಂತ ಪ್ರದರ್ಶಿಸುತ್ತಾರೆ. ಆದರೆ ಬೇರೆ ದೇಶದವರು ನಮ್ಮ ನಾಯಿಗಳನ್ನು ತಮ್ಮದು ಅಂತ ಹೇಳುವುದಿಲ್ಲ. ನಿಮ್ಮ ಮನೆಯಲ್ಲಿ ಸಾಕುವ ಸಾಮಾನ್ಯ ನಾಯಿಗಳನ್ನು ಪ್ರದರ್ಶನಕ್ಕೆ ತನ್ನಿ ಎಂದರೆ ನಾಚಿಕೆಯಾಗುತ್ತದೆ ಎನ್ನುತ್ತಾರೆ. ನಮ್ಮ ಸ್ವಂತ ನಾಯಿಗಳ ಬಗ್ಗೆ ನಾಚಿಕೆಯಲ್ಲ, ಹೆಮ್ಮೆ ಇರಬೇಕು. ಅವುಗಳೂ ನಮ್ಮನಿಮ್ಮಂತೆ ಜೀವ ಇರುವ ಪ್ರಾಣಿಗಳು ಎಂಬ ಕಾಳಜಿ ಇರಬೇಕು. ಅದಕ್ಕಾಗಿ ಈ ಪ್ರದರ್ಶನವನ್ನು ನಡೆಸುತ್ತಿದ್ದೇವೆ ಎಂದು ಬಬಿತಾ ಮ್ಯಾಕ್ಟ್ ಸಂಚಾಲಕಿ ಮಧ್ವರಾಜ್ ಹೇಳಿದ್ದಾರೆ.

-ಸುಭಾ​ಶ್ಚಂದ್ರ ಎಸ್‌. ​ವಾ​ಗ್ಳೆ