900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!
900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!| ಸರ್ಕಾರದ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಎಂಎಸ್‌ಐಎಲ್ ಮಳಿಗೆ| 2016ರ ಕಾಂಗ್ರೆಸ್ ಸರ್ಕಾರದ ನಿರ್ಧಾರ ಜಾರಿ ಪ್ರಕ್ರಿಯೆ ಈಗ ಆರಂಭ
ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಬೊಕ್ಕಸ ಭರ್ತಿ ಮಾಡಿಕೊಳ್ಳಲು ರಾಜ್ಯಾದ್ಯಂತ 900 ಹೊಸ ಎಂಎಸ್‌ಐಎಲ್ ಮದ್ಯದ ಮಳಿಗೆಗಳನ್ನು (ಸಿಎಲ್ 11-ಸಿ) ಆರಂಭಿಸಲು ಮುಂದಾಗಿದೆ.
ಲಾಕ್‌ಡೌನ್‌ನಿಂದ ಮದ್ಯ ಮಾರಾಟ ಬಂದ್ ಆದ ಪರಿಣಾಮ ಸುಮಾರು ಮೂರು ಸಾವಿರ ಕೋಟಿ ರು.ಗಿಂತ ಹೆಚ್ಚು ನಷ್ಟವಾಗಿದೆ. ಲಾಕ್‌ಡೌನ್‌ನಿಂದಾಗಿ ಯಾವುದೇ ರೀತಿಯ ಆರ್ಥಿಕ ಚಟುವಟಿಕೆ ನಡೆಯದ ಕಾರಣ ಹೊಸದಾಗಿ ತೆರಿಗೆ ಹೆಚ್ಚಿಸಿ ಬೊಕ್ಕಸ ಭರ್ತಿ ಮಾಡಿಕೊಳ್ಳುವಂತಹ ಸಾಹಸಕ್ಕೆ ಸರ್ಕಾರ ಕೈ ಹಾಕುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಉಳಿದ ಏಕೈಕ ಮಾರ್ಗವೆಂದರೆ ಅಬಕಾರಿ ಮೂಲದಿಂದ ಸಾಧ್ಯವಾದಷ್ಟುಹೆಚ್ಚು ಆದಾಯ ಪಡೆಯುವುದಾಗಿದೆ.
ಶಿವಮೊಗ್ಗದಲ್ಲಿ ಮದ್ಯ ಖರೀದಿಗೆ ನೀರಸ ಪ್ರತಿಕ್ರಿಯೆ..!
ಇದಕ್ಕಾಗಿ 2016ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ 900 ಎಂಎಸ್‌ಐಎಲ್ ಮದ್ಯದ ಮಳಿಗೆ ಆರಂಭಿಸುವ ಸಂಬಂಧ ಹೊರಡಿಸಿದ್ದ ಆದೇಶವನ್ನು ಈಗ ಜಾರಿಗೆ ತರಲು ಮುಂದಾಗಿದೆ. ಆಗ ಹೊಸದಾಗಿ ಮದ್ಯದ ಅಂಗಡಿ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶ ಜಾರಿಗೆ ತರದೇ ನೆನೆಗುದಿಗೆ ಬಿದ್ದಿತ್ತು. ಈಗ ಅನಿವಾರ್ಯವಾಗಿ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಮದ್ಯದ ಮಳಿಗೆ ಆರಂಭಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಪ್ರತಿ ಕ್ಷೇತ್ರದಲ್ಲಿ 4 ಮಳಿಗೆ:
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ನಾಲ್ಕರಂತೆ ಒಟ್ಟು 900 ಎಂಎಸ್‌ಐಎಲ್ (ಸಿಎಲ್-11ಸಿ) ಮದ್ಯದ ಮಳಿಗೆ ಆರಂಭಿಸುವ ಸಾಧ್ಯತೆ ಇದೆ. ವಿಧಾನಸಭಾ ಕ್ಷೇತ್ರಗಳ ಆಧಾರದಲ್ಲಿ ಸಿಎಲ್-11 ಸಿ ಹಂಚಿಕೆಯಾಗಿರುವ ಕ್ಷೇತ್ರ/ಪ್ರದೇಶಗಳಲ್ಲಿಯೇ ಸನ್ನದು ತೆರೆಯಲು ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮದ್ಯದ ಬೇಡಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ಪರಿಗಣಿಸಬೇಕು. ಅಕ್ರಮ ಮದ್ಯ/ಕಳ್ಳಭಟ್ಟಿತಡೆಗಟ್ಟುವ ನಿಟ್ಟಿನಲ್ಲಿ ಆಯಾ ಪ್ರದೇಶದಲ್ಲಿ ಅಂಗಡಿ ಪ್ರಾರಂಭಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಅಷ್ಟಕ್ಕೂ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಮದ್ಯಪ್ರಿಯರ ಕೊಡುಗೆ!
ಶಾಸಕರನ್ನು ಕೇಳುವ ಅಗತ್ಯವಿಲ್ಲ
2016ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಸನ್ನದು ಸ್ಥಳ ಆರಿಸುವಾಗ ಸ್ಥಳೀಯ ಶಾಸಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಸೂಚನೆಯನ್ನು ಕೈ ಬಿಡುವಂತೆ ಆರ್ಥಿಕ ಇಲಾಖೆ ಮಾಚ್‌ರ್ 30ರಂದು ಹೊರಡಿಸಿದ ಆದೇಶದಲ್ಲಿ ಅಬಕಾರಿ ಆಯುಕ್ತರಿಗೆ ತಿಳಿಸಿದೆ. ಈ ಮೊದಲು ಸನ್ನದು ಸ್ಥಳ ಆಯ್ಕೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯಲೇಬೇಕಿತ್ತು.