Bengaluru: ಯಲಹಂಕ ಉಪನಗರದ Major Akshay Girish ನಾಮಪಲಕ ಪುನರ್ ಪ್ರತಿಷ್ಠಾಪನೆ!
*ಯಲಹಂಕದ ಉಪನಗರದಲ್ಲಿರುವ ರಸ್ತೆ
*ನಾಮಫಲಕ ಹಾಳಾಗಿರುವ ಬಗ್ಗೆ ಅಕ್ಷಯ್ ತಾಯಿ ಟ್ವಿಟ್
*ಶಾಸಕ ಎಸ್.ಆರ್.ವಿಶ್ವನಾಥ್ ಸ್ಪಂದನೆ
ಬೆಂಗಳೂರು (ಫೆ. 07): ಹುತಾತ್ಮ ಯೋಧರ ಅನೇಕ ಸ್ಮಾರಕಗಳನ್ನು ಯಲಹಂಕ ಕ್ಷೇತ್ರದಲ್ಲಿ ಸರ್ಕಾರಿ ಸ್ಥಳದಲ್ಲಿ ನಿರ್ಮಿಸಿ ದೇಶ ಸೇವೆಗೈದವರಿಗೆ ಗೌರವ ಸಲ್ಲಿಸಿದ್ದೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. ಹಾಳಾಗಿದ್ದ ಯಲಹಂಕ ಉಪನಗರದ 13ನೇ ರಸ್ತೆಯಿಂದ ಮೇಜರ್ ಉನ್ನಿಕೃಷ್ಣ ರಸ್ತೆವರೆಗಿನ 16ನೇ ಅಡ್ಡರಸ್ತೆಯ ‘ಮೇಜರ್ ಅಕ್ಷಯ್ ಗಿರೀಶ್ ಕುಮಾರ್’(Major Akshay Girish) ರಸ್ತೆಯ ನಾಮಫಲಕ ದುರಸ್ತಿಗೊಳಿಸಿ ಭಾನುವಾರ ಪುನರ್ ಪ್ರತಿಷ್ಠಾಪಿಸಿ ಮಾತನಾಡಿ, ಯುವಕರಿಗೆ ಸ್ಪೂರ್ತಿ ಆಗುವಂತೆ ಸರ್ಕಾರಿ ಜಾಗದಲ್ಲಿ ಹಲವೆಡೆ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಿದ್ದೇವೆ. ಇಲ್ಲಿನ ಬಿಎಸ್‌ಎಫ್, ಸಿಆರ್‌ಪಿಎಫ್ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿದ್ದೇವೆ ಎಂದರು.
ನಗ್ರೋಟಾದಲ್ಲಿ 2016ರಲ್ಲಿ ಉಗ್ರರ ದಾಳಿಯಲ್ಲಿ ಮಡಿದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸ್ಮರಣಾರ್ಥ ರಸ್ತೆಗೆ 2018ರ ಡಿ.17ರಂದು ಹೆಸರಿಡಲಾಗಿತ್ತು. ಇತ್ತೀಚೆಗೆ ದುರಸ್ತಿಗೊಂಡಿದ್ದ ನಾಮಫಲಕವನ್ನು ಬಿಡಿಎ, ಬಿಬಿಎಂಪಿ ಸಹಕಾರದಲ್ಲಿ ಪುನರ್ ಸ್ಥಾಪಿಸಿದ್ದೇವೆ. ಮೇಜರ್ ಗಿರೀಶ್ ಕುಮಾರ್ ಅವರ ಇಡಿ ಕುಟುಂಬವೇ ದೇಶ ಸೇವೆ ಸಲ್ಲಿಸಿರುವುದು ಹೆಮ್ಮೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Uttara Kannada: ಜಮೀನು ಮಂಜೂರಾತಿಗೆ ಒದ್ದಾಡುತ್ತಿರುವ ನಿವೃತ್ತ ಯೋಧರು: ಪ್ರಧಾನಿ ಕಚೇರಿಗೂ ಪತ್ರ!
ಸೈನಿಕರ ಮೇಲೆ ಅಪಾರ ಕಾಳಜಿ ಹೊಂದಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ನಾಮಫಲಕ ಪುನರ್‌ಸ್ಥಾಪನೆ, ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಅದರಂತೆ ನಗರದಲ್ಲಿ .14 ಕೋಟಿ ವೆಚ್ಚದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಪ್ರಗತಿಯಲ್ಲಿದ್ದು, ಶೀಘ್ರವೇ ಲೋಕಾರ್ಪಣೆ ಆಗಲಿದೆ. ಗಂಟಗಾನಗಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನಿವೃತ್ತ ಯೋಧರಿಗೆ ನಿವೇಶನ ಕೊಡಲು ತೀರ್ಮಾನಿಸಿದ್ದು, ಸ್ಥಳಿಯರ ಸಹಕಾರ ನೀಡುವಂತೆ ಕೋರಿದರು.
ಮೇಜರ್ ಅಕ್ಷಯ್ ತಾಯಿ ಮೇಘನಾ ಗಿರೀಶ್ ಕುಮಾರ್ ಮಾತನಾಡಿ, ಕೆಲವು ದಿನಗಳ ಹಿಂದೆ ರಸ್ತೆ ನಾಮಫಲಕ ಹಾಳಾಗಿದ್ದರ ಕುರಿತು ಟ್ವಿಟ್ ಮಾಡಿ, ಕೇಂದ್ರ ಸಚಿವರು, ಶಾಸಕರಿಗೆ ಟ್ಯಾಗ್ ಮಾಡಿದ್ದೆ. ನಂತರ ಸಂಪರ್ಕಿಸಿದ ಕೇಂದ್ರ ಸಚಿವರ ಕಚೇರಿಗೆ ಈ ಕುರಿತು ವಿವರಿಸಿದ್ದೆ. ಇಂದು ನೀಡಿದ ಭರವಸೆಯಂತೆ ನಾಮಫಲಕ ಪುನರ್ ಪ್ರತಿಷ್ಠಾಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕರು, ಕೇಂದ್ರ ಸಚಿವರಿಗೆ ಅಭಿನಂದನೆ ತಿಳಿಸಿದರು.
ಇದನ್ನೂ ಓದಿ: ನಿವೃತ್ತ ಸೇನಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಸೇನಾ ಸಿಬ್ಬಂದಿ... ವಿಡಿಯೋ ನೋಡಿ
ಮೇಜರ್ ಅಕ್ಷಯ್ ಪತ್ನಿ ಸಂಗೀತಾ ಅಕ್ಷಯ್, ಯಲಹಂಕ ನಗರ ಮಂಡಲ ಮಾಜಿ ಸೈನಿಕರ ಪ್ರಕೋಷ್ಠದ ಸಂಚಾಲಕ ಶಿವಕುಮಾರ್ ಗೌಡ, ಸಹ ಸಂಚಾಲಕ ಮಂಜು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ವೇಣು, ಕಲ್ಲಪ್ಪ ಹಾಗೂ ಮಾಜಿ ಸೈನಿಕರು, ಕ್ಷೇತ್ರದ ನಾಗರಿಕರು ಉಪಸ್ಥಿತರಿದ್ದರು.
ಜನಸೇವೆಗೆ ಮುಂದಾಗಿರೋ ನಮ್ಮ ಹೆಮ್ಮೆಯ ಸೈನಿಕರು!: ನಮ್ಮ ಮೆಟ್ರೋ (Namma Metro) ನಿಲ್ದಾಣದಿಂದ ಬೇರೆಡೆಗೆ ಕರೆದೊಯ್ಯುವುದಕ್ಕೆ ಬಿಎಂಟಿಸಿ, ಆಟೋ ಸೇವೆ ಲಭ್ಯ ಇದೆ. ಇದೀಗ ಅದರ ಜೊತೆಗೆ 'ಸೈನಿಕ್ ಪೋಡ್' (Sainik Pod) ಎಂಬ ಹೆಸರಿನ ನಿಯೋ ಎಲೆಕ್ಟ್ರಿಕ್ ಕಾರು ಕೂಡಾ ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ. ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದಿಂದ ಈಗಾಗಲೇ 12 ಸೈನಿಕ್ ಪೋಡ್ ಹೆಸರಿನ ಕಾರುಗಳು ಕಾರ್ಯಾಚರಣೆಯನ್ನು ಶುರು ಮಾಡಿಕೊಂಡಿವೆ. ಈ ಎಲೆಕ್ಟ್ರಿಕ್ ಕಾರುಗಳಲ್ಲಿ ನಿವೃತ್ತ ಸೈನಿಕರು (Retiered Soldiers) ಕಾರ್ಯ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.
ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕುವ ಸಲುವಾಗಿ ನಿವೃತ್ತ ಸೈನಿಕರು ಈ ಸೇವೆಯಲ್ಲಿ ತೊಡಗಿದ್ದು, ಪ್ರಯಾಣಿಕರಿಂದಲೂ ಕೂಡಾ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕಾರಿನ ಮೊದಲ ಪ್ರಯಾಣ ಕಿಲೋಮೀಟರ್‌ಗೆ 30 ರೂಪಾಯಿಯಾಗಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಸದ್ಯ 12 ಸೈನಿಕ್ ಪೋಡ್ ಹೆಸರಿನ ಕಾರುಗಳು ಕಾರ್ಯಾಚರಣೆಯನ್ನು ಶುರುಮಾಡಿವೆ.