ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ವಿವಿಧ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.

ಮೈಸೂರು(ಜೂ.11): ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ವಿವಿಧ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯ್ಕೆ ಪ್ರಕ್ರಿಯೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡುವ ಜೊತೆಗೆ ಅನುಮತಿ ಇಲ್ಲದೆ ಪಟ್ಟಿಪ್ರಕಟಿಸದಂತೆ ಆಡಳಿತ ಮಂಡಳಿಗೆ ತುರ್ತು ನೋಟಿಸ್‌ ಜಾರಿಗೊಳಿಸಿದೆ. ಮೈಮುಲ್‌ನಲ್ಲಿ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆದು ಹೋರಾಟ ಆರಂಭಿಸಿದ್ದೆ. ನಾನು ಯಾವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವೂ ದ್ವೇಷದಹೋರಾಟ ಮಾಡಿಲ್ಲ. ಆದರೆ ಅರ್ಹರಿಗೆ ಉದ್ಯೋಗ ಸಿಗಬೇಕು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೇನೆಯೇ ಹೊರತು ಹಣ ಇದ್ದವರಿಗೆ ಸಿಗಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದರು.

ಮೈಮುಲ್‌ ನಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ಭರ್ತಿಯ ವೇಳೆ ಸುಮಾರು 200 ಮಂದಿ ಅಭ್ಯರ್ಥಿಯ ಪೈಕಿ ಶೇ. 75ರಷ್ಟುಮುಂಗಡ ಹಣ ಪಡೆದಿದ್ದರೆ, ಇನ್ನುಳಿಕೆ ಹಣವನ್ನು ನೇಮಕಾತಿ ಪತ್ರ ಪಡೆದು ಸಂದರ್ಶನಕ್ಕೆ ಹಾಜರಾದ ಮೇಲೆ ಕೊಡುವಂತೆ ಹೇಳಲಾಗಿತ್ತು. ಆಯ್ಕೆ ಪಟ್ಟಿಪ್ರಕಟಿಸಿ ವರದಿ ಮಾಡಿಕೊಂಡರೆ ನ್ಯಾಯಾಲಯದ ಮೊರೆ ಹೋಗಲು ಅನುಕೂಲವಾಗುತ್ತದೆ ಎಂಬ ಉದ್ದೇಶ ಹೊಂದಿದ್ದರು. ಆದರೆ ಈಗ ಹೈಕೋರ್ಟ್‌ ಅತಹ ಪ್ರಯತ್ನಕ್ಕೆ ಅವಕಾಶ ಕೊಡದೆ ಆಯ್ಕೆ ಪ್ರಕ್ರಿಯೆಗೆ ತಡೆ, 29ಕ್ಕೆ ವಿಚಾರಣೆ ಮುಂದೂಡಿದೆ. ಈಗ ಹೈಕೋರ್ಟ್‌ ಆದೇಶ ಮೀರಿ ಪಟ್ಟಿಪ್ರಕಟಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಚಾಮುಲ್‌ನಲ್ಲಿಯೂ ಇಂತಹ ಪ್ರಕರಣ ಕಂಡುಬಂದು ಕಾನೂನು ಕ್ರಮಕ್ಕೆ ಮುಂದಾಗಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲಾಗಿದೆ. ಇಲ್ಲಿಯೂ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಪರೀಕ್ಷೆಯು ನಿಯಮವಾಗಿ ನಡೆದಿಲ್ಲ. ಮೌಲ್ಯಮಾಪನವೂ ಸರಿಯಾಗಿಲ್ಲ. ದಕ್ಷ ಕಾಲೇಜಿನ ಆರು ಉಪನ್ಯಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಂದಾಜು 30 ರಿಂದ 40 ಕೋಟಿ ರೂ. ಅವ್ಯವಹಾರ ನಡೆದಿದೆ. ಇದರಲ್ಲಿ ಯಾರಿಗೆ ಎಷ್ಟುಸೇರಿದೆ, ಒಂದೊಂದು ಹುದ್ದೆಗೆ ಎಷ್ಟುಮುಂಗಡ ಹಣ ಪಡೆಯಲಾಗಿದೆ ಎನ್ನುವ ಮಾಹಿತಿ ಇದೆ. ನ್ಯಾಯಾಲಯಕ್ಕೆ ಉತ್ತರ ಕೊಡುವ ಸಂದರ್ಭದಲ್ಲಿ ನಮ್ಮ ಬಳಿ ಇರುವ ಎಲ್ಲಾ ದಾಖಲೆಯನ್ನು ಸಲ್ಲಿಸಲಾಗುವುದು. ಹಣ ಕೊಟ್ಟಿರುವವರ ಪೈಕಿ ನಮ್ಮ ಬಳಿಯಲ್ಲೇ 50 ಮಂದಿ ಒಪ್ಪಿಕೊಂಡಿದ್ದಾರೆ. ಇವರಿಗೆ ವಾಪಸ್‌ ಹಣ ಕೊಡಬೇಕಿದೆ. ಹಾಗಾಗಿ, ನ್ಯಾಯಾಲಯ ಈ ಪ್ರಕ್ರಿಯೆ ರದ್ದುಪಡಿಸಿ ಹೊಸದಾಗಿ ಅಧಿಸೂಚನೆ ಹೊರಡಿಸುವ ವಿಶ್ವಾಸವಿದೆ ಎಂದರು.

ನಾನು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ವಿರುದ್ಧ ಯಾವ ಆರೋಪವನ್ನು ಮಾಡಿಲ್ಲ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದಂತೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕು. ಸಹಕಾರ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕದಲ್ಲಿ ಅರ್ಹರಿಗೆ ಸಿಗುವಂತೆ ಮಾಡಲು ಪ್ರತ್ಯೇಕ ಬೋರ್ಡ್‌ ಆಗಬೇಕು. ರೈತರ ಪರ ಇರುವ ಸಂಸ್ಥೆಗಳಲ್ಲಿ ಅರ್ಹರಿದ್ದರೆ ರೈತರಿಗೆ ನ್ಯಾಯ ಒದಗಿಸಲು ಸಾಧ್ಯ. ತಪ್ಪಿದರೆ ಹಣ ಇದ್ದವರಿಗಷ್ಟೇ ಉದ್ಯೋಗ ಸಿಗುವ ವ್ಯವಸ್ಥೆ ಬರಲಿದೆ ಎಂದರು.