2032ರ ಒಳಗೆ ರಾಜ್ಯದ ಆದಾಯ ದುಪ್ಪಟ್ಟು
ರಾಜ್ಯದ ಜಿಡಿಪಿ 1 ಟ್ರಿಲಿಯನ್ ಗುರಿ ತಲುಪಲು ಎಲ್ಲಾ ವಲಯಗಳ ಪಾಲ್ಗೊಳ್ಳುವಿಕೆ ಸಹಕಾರ ಅಗತ್ಯ. ಹಾಗೆಯೇ, 2032ರ ಒಳಗೆ ರಾಜ್ಯದ ಆದಾಯ ದುಪ್ಪಟ್ಟು ಆಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಮೈಸೂರು : ರಾಜ್ಯದ ಜಿಡಿಪಿ 1 ಟ್ರಿಲಿಯನ್ ಗುರಿ ತಲುಪಲು ಎಲ್ಲಾ ವಲಯಗಳ ಪಾಲ್ಗೊಳ್ಳುವಿಕೆ ಸಹಕಾರ ಅಗತ್ಯ. ಹಾಗೆಯೇ, 2032ರ ಒಳಗೆ ರಾಜ್ಯದ ಆದಾಯ ದುಪ್ಪಟ್ಟು ಆಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಮೈಸೂರು ವಿವಿ ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಕಾನೂನು ಶಾಲೆ ಸಹಯೋಗದಲ್ಲಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಭಾರತ 100 ಹೊಸ ಕರ್ನಾಟಕ ವಿಷನ್ ಡ್ಯಾಕುಮೆಂಟ್ ಕುರಿತು ಅವರು ವರ್ಚುವಲ್ ಮೂಲಕ ಮಾತನಾಡಿದರು.
ಈ ವರ್ಷದ ಆಯವ್ಯಯದಲ್ಲಿ ನವ ಕರ್ನಾಟಕದ ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಗಿದೆ. ನೀತಿ ಆಯೋಗದ ಮಾದರಿಯಂತೆ ಸಂಸ್ಥೆಯನ್ನು ಆರಂಭಿಸಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ತಂತ್ರಜ್ಞರನ್ನು ಆಹ್ವಾನಿಸಲಾಗಿದೆ. 2047ರ ವೇಳೆಗೆ ರಾಜ್ಯದ ಜಿಡಿಪಿ ಗುರಿ ತಲುಪಲು ಯಾವ ಕ್ಷೇತ್ರದಲ್ಲಿ ಬದಲಾವಣೆ ತರಬೇಕು, ನೀತಿ ನಿಯಮಗಳ ರೂಪಿಸುವುದು, ಭೂ ಸೌಕರ್ಯ, ತಜ್ಞರ ಸಮಿತಿ ರಚನೆಗೆ ನಿರ್ಣಯಿಸಲಾಗಿದೆ ಎಂದು ಅವರು ಹೇಳಿದರು.
ಗುರಿ ಮುಟ್ಟಬೇಕಾದರೆ ಶಿಕ್ಷಣ ಸಂಸ್ಥೆಗಳು, ಯುವಜನರ ಸಹಭಾಗಿತ್ವ ಅವಶ್ಯ. 2047ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಯಾಗಲಿದೆ. ಮಧ್ಯಮ ವರ್ಗದ ಜನರು ಭಾರತದಲ್ಲಿ ಹೆಚ್ಚಿದ್ದಾರೆ. ಶೇ.50ರಷ್ಟುಯುವಕರಿದ್ದಾರೆ. ಈ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಅಭಿವೃದ್ಧಿ ಕಾಣಬೇಕಾದ ಸವಾಲು ನಮಗಿದೆ ಎಂದರು.
ಪ್ರಸ್ತುತ ನೂರಕ್ಕೆ ನೂರು ಸಾಕ್ಷರತೆ ಸಾಧಿಸಿದ್ದೇವೆ. ಆದರೆ, ಡಿಜಿಟಲ್ ಜ್ಞಾನ ಎಷ್ಟುಜನರಿಗಿದೆ? ಅತಿ ಹೆಚ್ಚು ಸ್ಮಾರ್ಚ್‌ಫೋನ್ ಬಳಸುವವರು ದೇಶದಲ್ಲಿದ್ದಾರೆ. ಶೇ.10 ಕಡಿಮೆ ಜನರಿಗೆ ಡಿಜಿಟಲ್ ಜ್ಞಾನ ಇದೆ. ಡಿಜಿಟಿಲ್ ಜ್ಞಾನವನ್ನು ವೃದ್ಧಿಸಿಕೊಂಡರೆ ಐಟಿ ಗ್ರಾಫ್ ದೊಡ್ಡದಾಗುತ್ತದೆ. ವೈಜ್ಞಾನಿಕ, ಸಂಶೋಧನೆ, ಆರ್ಟಿಫಿಷಿಯಲ್ ಇಂಟೆಜೆಲಿನ್ಸ್ ಸದ್ಬಳಕೆಯ ಮೂಲಕ ಭಾರತ ವಿಶ್ವದ ನಾಯಕತ್ವ ವಹಿಸಲು ಕ್ರಿಯಾ ಯೋಜನೆ ಆಗಬೇಕು ಎಂದು ಅವರು ತಿಳಿಸಿದರು.
ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಮುಜಾಫರ್ ಅಸ್ಸಾದಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ದಿಶಾ ಸಮಿತಿ ಸದಸ್ಯ ಕುಂದ್ರಳ್ಳಿ ರಮೇಶ್, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಹೊಂಬಾಳ್, ಕಾನೂನು ವಿಭಾಗದ ಅಧ್ಯಕ್ಷ ಪ್ರೊ.ಟಿ.ಆರ್. ಮಾರುತಿ, ಪ್ರೊ.ಜಿ.ಟಿ. ರಾಮಚಂದ್ರಪ್ಪ, ಡಾ.ಸಿ.ಎಲ್. ಸೋಮಶೇಖರ್, ಪ್ರವೀಣ ಕುಮಾರ್ ಮೆಲ್ಲಹಳ್ಳಿ ಮೊದಲಾದವರು ಇದ್ದರು.