ಮುಂಡರಗಿ: ಕೊರೋನಾ ವಾರಿಯರ್‌ ವೈದ್ಯನ ನೆರವಿಗೆ ಧಾವಿಸಿದ ಸರ್ಕಾರ

ಕೋವಿಡ್‌-19 ಸೋಂಕಿನಿಂದ ಬಳಲುತ್ತಿರುವ ಡಾ. ಬಸವರಾಜ| ಬೆಂಗಳೂರು ಸ್ಪರ್ಶ ಆಸ್ಪತ್ರೆಗೆ ದಾಖಲು| ಡಾ. ಬಸವರಾಜ ಅವರ ಸಂಪೂರ್ಣ ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ ರಾಜ್ಯ ಸರ್ಕಾರ|  

State Government Agree to Pay Dr Basavaraj Corona Treatment Bill

ಮುಂಡರಗಿ(ಆ.24):  ಕೊರೋನಾ ಪ್ರಾರಂಭದಿಂದ ಮುಂಡರಗಿ ತಾಲೂಕು ವೈದ್ಯಾಧಿಕಾರಿಯಾಗಿ ಇಡೀ ತಾಲೂಕಿನ ಜವಾಬ್ದಾರಿ ನೋಡಿಕೊಂಡು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಡಾ. ಬಸವರಾಜ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರ ಇವರ ಸಂಪೂರ್ಣ ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ಕೊರೋನಾ ಚಿಕಿತ್ಸೆಗೆ ಆಸ್ಪತ್ರೆ ಪ್ರಾರಂಭಿಸಿ, ಅದರಲ್ಲಿ ಯಶಸ್ವಿಯಾದ ಕೀರ್ತಿ ಡಾ. ಬಸವರಾಜ ಹಾಗೂ ಅವರ ಸಿಬ್ಬಂದಿಗೆ ಸಲ್ಲುತ್ತದೆ. ಕೊರೋನಾ ಸಂದರ್ಭದಲ್ಲಿ ನಿರಂತರವಾಗಿ ತಾಲೂಕಿನಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಜವಾಬ್ದಾರಿ ಹಾಗೂ ಚೆಕ್‌ಪೋಸ್ಟ್‌ಗಳ ಜವಾಬ್ದಾರಿ ಸೇರಿದಂತೆ ಕೊರೋನಾಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಗಳು ಜರುಗಿದರೂ ಅಲ್ಲಿ ಉಪಸ್ಥಿತರಿದ್ದು, ತಾಲೂಕಿನ ಕೋವಿಡ್‌ ಕುರಿತಾದ ಸಂಪೂರ್ಣ ಮಾಹಿತಿ ನೀಡುತ್ತಿದ್ದರು. ಹೀಗೆ ಎಲ್ಲೆಡೆ ಓಡಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಡಾ. ಬಸವರಾಜ ಅವರಿಗೆ ಪಾಸಿಟಿವ್‌ ಬಂದಿದೆ. ತೀವ್ರ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗದಗ: ಅವ್ಯವಸ್ಥೆಯ ಆಗರವಾದ ಕೋವಿಡ್ ಕೇರ್ ಕೇಂದ್ರ, ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಸೋಂಕಿತರು

ಇದೀಗ ರಾಜ್ಯ ಸರ್ಕಾರ ಅವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ರಾಜ್ಯದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆ ಮಾತನಾಡಿದ್ದು, ಸ್ಪರ್ಶ ಆಸ್ಪತ್ರೆಯ ಆಡಳಿತ ವರ್ಗಕ್ಕೂ ಮಾಹಿತಿ ನೀಡಲಾಗಿದೆ ಎಂದು ಮುಂಡರಗಿ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಡಾ. ಕುಮಾರಸ್ವಾಮಿ ಹಿರೇಮಠ ತಿಳಿಸಿದ್ದಾರೆ.

ತಾಲೂಕಿನ ಜನತೆಯ ಆರೋಗ್ಯ ರಕ್ಷಣೆಗಾಗಿ ಹಗಲಿರುಳೆನ್ನದೇ ಸೇವೆ ಮಾಡಿ ಇದೀಗ ಕೊರೋನಾ ವಿರುದ್ಧ ಹೋರಾಡುತ್ತಿರುವ ತಾಲೂಕು ವೈದ್ಯಾಧಿಕಾರಿ ಡಾ. ಬಸವರಾಜ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಶಿರಹಟ್ಟಿ ಮತ್ತು ರೋಣ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ ಅವರಿಗೆ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ತಾಲೂಕಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸಾರ್ವಜನಿಕರು ಅಭಿನಂದಿಸಿ, ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
 

Latest Videos
Follow Us:
Download App:
  • android
  • ios