ಮಂಡ್ಯ(ಡಿ.18): ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕ್ರಮಬದ್ಧಗೊಂಡ ನಂತರದಲ್ಲಿ ಅಭ್ಯರ್ಥಿಯೊಬ್ಬ ಸಾವನ್ನಪ್ಪಿದ್ದು, ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ನಿಧನರಾಗಿರುತ್ತಾರೆ ಎಂದು ನಮೂದಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. 

ಮದ್ದೂರು ತಾಲೂಕಿನ ಎಸ್‌.ಐ.ಹೊನ್ನಲಗೆರೆ ಗ್ರಾಮ ಪಂಚಾಯಿತಿಯ ಎಚ್‌.ಹೊಸಹಳ್ಳಿ ಕ್ಷೇತ್ರದ ಸಾಮಾನ್ಯ ವರ್ಗದಿಂದ ಎಚ್‌.ಸಿ.ನಾಗರಾಜು ಉ.ಬೋಸಪ್ಪ ಎಂಬುವರು ಡಿ.11ರಂದು ನಾಮಪತ್ರ ಸಲ್ಲಿಸಿದ್ದರು. ಡಿ.14ರಂದು ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲಿಸಿ ಕ್ರಮಬದ್ಧವಾಗಿರುತ್ತದೆ ಎಂದು ಘೋಷಿಸಿದ್ದರು. 

ಚುನಾವಣೆಗೆ ಸಜ್ಜಾಗಿದ್ದ ನಾಯಕರಿಗೆ ಆಯೋಗದಿಂದ ಬಂತು ಸ್ಟ್ರಿಕ್ಟ್ ಆದೇಶ

ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಅವಧಿಯಲ್ಲೂ ಇವರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿರಲಿಲ್ಲ. ಹೀಗಾಗಿ ಇವರಿಗೆ ಚಿಹ್ನೆ ಹಂಚಿಕೆ ಮಾಡಿ ಸ್ಪರ್ಧಿಸಿರುವ ಅಭ್ಯರ್ಥಿಯ ಪಟ್ಟಿಪ್ರಪತ್ರ-10ನ್ನು ಡಿ.14ರಂದು ಪ್ರಕಟಿಸಲಾಗಿತ್ತು. ಡಿ.14ರಂದೇ ಅಭ್ಯರ್ಥಿ ಮರಣ ಹೊಂದಿದ ಹಿನ್ನೆಲೆಯಲ್ಲಿ ಮತಪತ್ರದಲ್ಲಿ ಇವರ ಹೆಸರನ್ನು ಮುದ್ರಿಸಬೇಕೇ ಬೇಡವೇ ಎಂಬ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ರಾಜ್ಯ ಚುನಾವಣಾ ಆಯೋಗದ ಬಗ್ಗೆ ಸ್ಪಷ್ಟೀಕರಣ ಕೋರಿದ್ದರು.