ಮಂಡ್ಯ ಜಿಲ್ಲೆಯ ಸರ್ವೀಸ್ ರಸ್ತೆ, ಅಂಡರ್ಪಾಸ್ನಲ್ಲಿ ನಿಂತ ನೀರು...!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾರಿಡಾರ್ ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮಸ್ಥರಿಗೆ ಸಂಚರಿಸಲಾಗದಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ.
ಮಂಡ್ಯ (ಮೇ.10): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾರಿಡಾರ್ ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮಸ್ಥರಿಗೆ ಸಂಚರಿಸಲಾಗದಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಇದಕ್ಕೆ ನಿದರ್ಶನವೆಂಬಂತೆ ಮಂಡ್ಯ ತಾಲೂಕಿನ ಇಂಡುವಾಳು, ಸುಂಡಹಳ್ಳಿ ಸೇರಿದಂತೆ ಹಲವೆಡೆ ಮಳೆ ನೀರು ನಿಂತು ಜನಸಂಚಾರಕ್ಕೆ ತೊಂದರೆ ಉಂಟುಮಾಡಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಕೆಳ ಸೇತುವೆ ಹಾಗೂ ಇಕ್ಕೆಲಗಳಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದೆ.
ಇಂಡುವಾಳು ಗ್ರಾಮದಲ್ಲಿ ಹಾದು ಹೋಗಿರುವ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಗ್ರಾಮದಿಂದ ದೊಡ್ಡ ಚರಂಡಿಗೆ ನೀರು ಹರಿಯುವಂತೆ ಚರಂಡಿ ನಿರ್ಮಿಸುವ ಬದಲು ತಗ್ಗು ಪ್ರದೇಶಕ್ಕಿಂತ ಮೇಲ್ಬಾಗದಲ್ಲಿ ಚರಂಡಿ ನಿರ್ಮಿಸಿರುವ ಪರಿಣಾಮ ಮಳೆ ನೀರು ಹಾಗೂ ತ್ಯಾಜ್ಯ ನೀರು ಸರ್ವೀಸ್ ರಸ್ತೆಯಲ್ಲೇ ನಿಂತು ಕೆರೆಯಾಗಿ ಮಾರ್ಪಟ್ಟಿದೆ.
5ರ ಹೊಸ ನಾಣ್ಯ ಹಾಕಿ ನೀರು ಪಡೆಯುವ ವ್ಯವಸ್ಥೆಯಿಂದ ಫಜೀತಿ
ಇಲ್ಲಿ ಸಂಚರಿಸುವ ವಾಹನಗಳಿಂದ ಅಕ್ಕ ಪಕ್ಕದ ಮನೆ, ಅಂಗಡಿ, ಮುಂಗಟ್ಟುಗಳು ಬದಿ ನೀರಿನ ಸಿಂಚನದಿಂದಾಗಿ ಗೋಡೆಯಲ್ಲಾ ಹಾಳಾಗುತ್ತಿದೆ. ಜೊತೆಗೆ ಅಂಗಡಿಗೆ ಬರುವ ಗ್ರಾಹಕರಿಗೂ ಕಿರಿಕಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರು ಪಥಕ್ಕೆ ನೀಡಿದ ಆದ್ಯತೆಯನ್ನು ಸರ್ವೀಸ್ ರಸ್ತೆ ಕಾಮಗಾರಿಗೆ ನೀಡಿಲ್ಲ. ಮೈಸೂರು-ಬೆಂಗಳೂರು ಸಂಚಾರಕ್ಕಷ್ಟೇ ಪ್ರಾಧಿಕಾರ ಆದ್ಯತೆ ನೀಡಿದೆ. ಸ್ಥಳೀಯ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಗಮನವನ್ನೇ ಹರಿಸಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಸರ್ವೀಸ್ ರಸ್ತೆಯಲ್ಲಿ ಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಮಳೆ ನೀರು ಇಳಿಜಾರು ಹಾಗೂ ಗುಂಡಿಯಂತಿರುವ ಕೆಳ ಸೇತುವೆಯತ್ತ ನುಗ್ಗಿ ಬರುತ್ತಿದೆ. ಇದರಿಂದಾಗಿ ಇಡೀ ಸರ್ವೀಸ್ ರಸ್ತೆಗಳು ಅಲ್ಲಲ್ಲಿ ನೀರಿನಿಂದ ಆವೃತವಾಗಿವೆ. ತಾಲೂಕಿನ ಇಂಡುವಾಳು, ಸುಂಡಹಳ್ಳಿ, ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಕಾಮಗಾರಿ ಅಪೂರ್ಣಗೊಂಡಿದ್ದರೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಸರ್ವೀಸ್ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ಜನ ಓಡಾಡಲೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಪುಟ್ಪಾತ್ ಕೂಡ ಇಲ್ಲದೆ ರೈತರು ಜಾನುವಾರುಗಳ ಜೊತೆ ಹೊಲಕ್ಕೆ ತೆರಳಲು ಪರದಾಡುವಂತಾಗಿದೆ.
ಗ್ರಾಮಗಳ ಬಳಿ ನಿರ್ಮಿಸಿರುವ ಕೆಳ ಸೇತುವೆಗಳಲ್ಲೂ ಸಹ ಕಾಮಗಾರಿ ಪೂರ್ಣಗೊಳಿಸದ ಕಾರಣ ಇಂಡುವಾಳು, ಸಿದ್ದಯ್ಯನಕೊಪ್ಪಲು ಗೇಟ್ ಸೇರಿದಂತೆ ಹಲವೆಡೆ ಮಂಡಿಯುದ್ದ ನೀರು ನಿಂತು ಈ ಮಾರ್ಗದಲ್ಲಿ ವಾಹನಗಳು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಟೋ, ದ್ವಿಚಕ್ರ ವಾಹನ ಸಣ್ಣಪುಟ್ಟವಾಹನಗಳಲ್ಲಿ ಕೆಳ ಸೇತುವೆಯಲ್ಲಿ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ
ಮಂಡ್ಯ ಗಡಿಯಿಂದ ಶ್ರೀರಂಗಪಟ್ಟಣ ತಾಲೂಕಿನವರೆಗೆ ನಿರ್ಮಿಸಿರುವ ಕೆಳ ಸೇತುವೆಗಳು ಬಹುತೇಕ ಅಪೂರ್ಣಗೊಂಡಿವೆ. ಕೆಳಗಿನ ರಸ್ತೆಯಲ್ಲಿ ಕಾಂಕ್ರೀಟ್ ಮಾಡಿಲ್ಲ, ಇಲ್ಲವೇ ಡಾಂಬರನ್ನಾದರೂ ಹಾಕಿಲ್ಲ. ಮಳೆ ನೀರು ಸರಾಗವಾಗಿ ಹರಿಯುವಂತೆ ಎರಡೂ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ಇಳಿಜಾರು ಪ್ರದೇಶದಿಂದ ಬಂದ ನೀರು ಕೆಳ ಸೇತುವೆಯಲ್ಲಿ ನಿಂತು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಒಟ್ಟಾರೆ ಬೆಂಗಳೂರು-ಮೈಸೂರು ಹೆದ್ದಾರಿ ಕೇವಲ ಉಳ್ಳವರಿಗಷ್ಟೇ ಸೀಮಿತವಾಗಿದ್ದು, ಇದರಿಂದ ಸಾಮಾನ್ಯರು, ರೈತ ವರ್ಗಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅವೈಜ್ಞಾನಿಕ ಚರಂಡಿ ನಿರ್ಮಾಣವನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.